ಕಲಬುರಗಿ: ನಗರದ ಸಂಗಮೇಶ್ವರ ಕಾಲೋನಿಯಲ್ಲಿರುವ ಕೋಣಿನ ಮೆಟರ್ನಿಟಿ ನರ್ಸಿಂಗ್ ಆಸ್ಪತ್ರೆಯಲ್ಲಿ 21 ವರ್ಷದ ಮಹಿಳೆ ಓರ್ವಳು ಎರಡು ಹೆಣ್ಣು ಮತ್ತು ಒಂದು ಗಂಡು ತ್ರಿವಳಿ ಶಿಶುಗಳನ್ನು ಜನ್ಮ ನೀಡುವ ಪ್ರಸಂಗ ಜನೆವರಿ 11 ರಂದು ಸೋಮವಾರ ರಾತ್ರಿ ನಡೆದಿದೆ. ಜನ್ಮ ನೀಡಿದ ತಾಯಿ ಹಾಗೂ ಶಿಶುಗಳು ಸುರಕ್ಷೀತವಾಗಿದ್ದಾರೆಂದು ವೈದ್ಯರಾದ ಡಾ. ಸವಿತಾ ಕೋಣಿನ್, ತಿಳಿಸಿದ್ದಾರೆ.
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೊಯಿನೂರ ಗ್ರಾಮದ ನಿವಾಸಿಯಾಗಿರುವ 21 ವರ್ಷದ ಮೀನಾಕ್ಷಿ ರವೀಂದ್ರ ಅಪ್ಪೆ ಮೂರು ಕೂಸುಗಳಿಗೆ ಜನ್ಮ ನೀಡಿ ಮಹಾತಾಯಿ.
ಎರಡೂವರೆ ತಿಂಗಳ ಕಾಲ ತಮ್ಮ ನರ್ಸಿಂಗ್ ಹೋಮ್ ಹಿ೦ದಿನ ಕೋಣೆಯಲ್ಲಿ ಇರಿಸಿಕೊ೦ಡು ಎಲ್ಲ ಪ್ರಸವ ಪೂರ್ವ ಕಾಳಜಿ (ಎಎನ್ಸಿ) ಮಾಡಲಾಯಿತೆಂದು ಆಸ್ಪತ್ರೆಯ ವೈದ್ಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.ಮಿನಾಕ್ಷಿಯವರಿಗೆ ತವರಮನೆ ಕಮಲಾಪುರಿನಲ್ಲಿದ್ದಾಗ ಏಕಾಏಕಿ ಗರ್ಭಕೋಶದಿ೦ದ ನೀರು ಸ್ರವಿಕೆ ಪ್ರಾರಂಭವಾಯಿತು. ಇದರ ಬಗ್ಗೆ ಮಾಹಿತಿ ಪಡೆದ ಆಸ್ಪತ್ರೆಯ ವೈದ್ಯರಾದ ಡಾ.ಸವಿತಾ ಭರತ್ ಕೋಣಿನ್ ತಕ್ಷಣ ಆಸ್ಪತ್ರೆಗೆ ತಂದು ಜನೆವರಿ 11ಕ್ಕೆ ರಾತ್ರಿ 11.45ರ ಸುಮಾರಿಗೆ ಗುಣಾತ್ಮಕ ಶಸ್ತ್ರಚಿಕಿತ್ಸೆಯ ಹೆರಿಗೆಗೆ ಒಳಪಡಿಸಲಾಯಿತು. ಮೂರು ಗರ್ಭಸ್ಥ ಶಿಶುಗಳ (ಭ್ರೂಣಗಳ) ‘ಬಸಿರು’ ತನ್ನದೆನ್ನುವುದು ತಿಳಿದ ಕ್ಷಣದಿಂದ ಮುಂದೆ ಹೇಗೋ ಏನೋ ಎಂಬ ಆತಂಕ ಮತ್ತು ಭಯ ಮೂಡಿತ್ತು. ಆರ್ಥಿಕವಾಗಿ ಅಷ್ಟೊಂದು ಅನುಕೂಲಸ್ಥರಲ್ಲದರು ಸಹ ಮೀನಾಕ್ಷಿಗೆ ಸುರಕ್ಷಿತ ಹರಿಗೆಯ ಭರವಸೆ ನೀಡಲಾಯಿತು ಎಂದು ಡಾ. ಸವಿತ ಭರತ್ ಕೋಣಿನ್ ತಿಳಿಸಿದ್ದಾರೆ.
ಯಶಸ್ವಿ ಚಿಕಿತ್ಸೆಯಿಂದಾಗಿ ಗರ್ಭದಲ್ಲಿ ಮೂವತೈದು ವಾರಗಳ ಕಾಲ 1.6 ಮತ್ತು 1.9 ಕಿಲೋಗ್ರಾ೦ ತೂಕದ ಎರಡು ಹೆಣ್ಣು ಮಗು ಮತ್ತು 2 ಕಿಲೋಗ್ರಾಂ ತೂಕದ ಒಂದು ಗಂಡು ಮಗುವಿಗೆ ಜನ್ಮ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನಿಜಕ್ಕೂ ಇದೊ೦ದು ಅಪರೂಪದ ತ್ರಿವಳಿ ಸುರಕ್ಷಿತ ಹೆರಿಗೆ ಎನ್ನುವ ತನ್ನ ಸಹೋದ್ಯೋಗಿಗಳ ಸಹಕಾರವನ್ನು ಮನ ಪೂರ್ವಕವಾಗಿ ನೆನೆಯುತ್ತೇನೆ, ಎಲ್ಲಕ್ಕಿಂತ ಮುಖ್ಯವಾಗಿ ಮೀನಾಕ್ಷಿ ಮತ್ತು ಆಕೆಯ ಗ೦ಡ ರವೀಂದ್ರ ಹಾಗೂ ಅವರ ಮನೆಯವರು ನಮ್ಮ ವೈದ್ಯಕೀಯ ಚಿಕಿತ್ಸೆಯಲ್ಲಿಟ್ಟ ನಂಬಿಕೆ ಬಹು ಮುಖ್ಯವಾದದ್ದು ಎನ್ನುತ್ತಾರೆ ಡಾ.ಸವಿತಾ ಕೋಣಿನ್.
ಹೆರಿಗೆ ಆದ ಶಕ್ಷಣ ಮಕ್ಕಳ ತಜ್ಞೆ ಡಾ. ಆಪೂರ್ವ ಮೂರೂ ನವಜಾತ ಶಿಶುಗಳನ್ನು ಸ್ವತಃ ತನ್ನ ಕಾರಿನಲ್ಲಿಯೇ ತನ್ನ ನರ್ಪಿಂಗ್ ಹೋಮ್ ಗೆ ಕರೆದೊಯ್ದು ‘ನವಜಾತ ಶಿಶುಗಳ ಆತೀ ಶೃದ್ಧೆಯ ಕಾಳಜಿ ಘಟಕ’ ದಲ್ಲಿ ಉಪಚರಿಸಿದ್ದಾರೆ. ಸವಿತಾ ಕೋಣಿನ್. ಅಪೂರ್ವ ಂವಟಿ ಮತ್ತು ಗಿರಿಜಾಶಂಕರ ಈ ವೈದ್ಯ ತ್ರಯರ ಸೇವಾ ಬದ್ಧತೆ ಮೂರು ಎಳೆ ಕಂದಮ್ಮಗಳ ಹಾಗೂ ಓರ್ವ ಯುವ ತಾಯಿಯ ಸುರಕ್ಷಿತ ಬದುಕಿಗೆ ‘ಸಂಜೀವಿನಿ’ ಯಾಗಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಅಭಿನಂದನೀಯವಾಗಿದೆ ಎಂದು ಡಾ. ಅಪೂರ್ವ ತಿಳಿಸಿದ್ದಾರೆ.
ಸಾಮಾನ್ಯವಾಗಿ ಹತ್ತು ಸಾವಿರ ಗರ್ಭಗಳಲ್ಲಿ ಒಂದು ಗರ್ಭದಲ್ಲಿ ತ್ರಿವಳಿ ಶಿಶುಗಳಿರುವ ಪ್ರಕರಣಗಳಿವೆ. ಗರ್ಭಪಾತ, ಅಕಾಲಿಕ ಹರಿಗೆ, ಗರ್ಭಸ್ಥ ಶಿಶುಗಳ ಮರಣ ಸರ್ವೇಸಾಮಾನ್ಯ ಒಮ್ಮೊಮ್ಮೆ ತಾಯಿ ಕೂಡ ಆಪಾರ ಯಾತನೆಗೆ , ಸಾವು-ನೋವಿಗೆ ಈಡಾಗುವ ಸಂಭವವಿರುತ್ತದೆ. ಅದುದರಿಂದ ತಾಯಿಯಾಗ ಬಯಸುವ ಪ್ರತಿಯೊಂದು ಹೆಣ್ಣಿನ ಸಮಗ್ರ ಆರೋಗ್ಯದ ಬಗ್ಗೆ ಗಂಡ ಮೊದಲ್ಗೊಂಡು, ಕುಟುಂಬ ಮತ್ತು ಸಮುದಾಯ ಸಕಾರಾತ್ಮಕ ಕಾಳಜಿ ವಹಿಸಬೇಕು. ಆರೋಗ್ಯಕರ ತಾಯ್ತನ ಹೊಂದುವುದು ಪ್ರತಿಯೊರ್ವ ಮಹಿಳೆಯ ಪ್ರಕೃತಿದತ್ತ ಹಾಗೂ ಸಂವಿಧಾನ ಬದ್ಧ ಹಕ್ಕು ಎನ್ನುವುದನ್ನು ಇಡೀ ಸಮಾಜ ಮನಗಾಣಬೇಕು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.