ಆಳಂದ: ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ತುಂಬಾ ಬಹಳಷ್ಟು ಜನ ನೇತಾಗಳಿದ್ದರು ಆದರೆ ನೇತಾಜಿ ಎಂಬ ಬಿರುದು ಮಾತ್ರ ಸುಭಾಷ್ ಚಂದ್ರ ಭೋಸ್ ಅವರಿಗೆ ಮಾತ್ರ ಇತ್ತು ಎಂದು ಶಿಕ್ಷಕ ಪರಮೇಶ್ವರ ಮೋದೆ ಅಭಿಪ್ರಾಯಪಟ್ಟರು.
ಶನಿವಾರ ಆಳಂದ ಪಟ್ಟಣದ ಎಸ್‌ಆರ್‌ಜಿ ಫೌಂಡೇಶನ್, ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜಂಟಿಯಾಗಿ ಸ್ವಾಮಿ ವಿವೇಕಾನಂದರ ಜಯಂತಿ, ನೇತಾಜಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕರೋನಾ ಕಾರಣದಿಂದ ಶಾಲಾ ಕಾಲೇಜುಗಳು ತಡವಾಗಿ ಆರಂಭವಾಗಿವೆ ಆದರೂ ವಿದ್ಯಾರ್ಥಿಗಳು ಎದೆಗುಂದದೆ ಧೈರ್ಯದಿಂದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಲಭ್ಯವಿರುವ ಸಮಯವನ್ನು ಉಪಯೋಗಿಸಿಕೊಂಡು ಉತ್ತಮ ಚಾರಿತ್ರ್ಯ ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ನೇತಾಜಿಯವರು ಆ ಕಾಲದ ನಾಗರಿಕ ಸೇವಾ ಪರೀಕ್ಷೆ ಪಾಸಾಗಿದ್ದರೂ ಕೂಡ ಸೇವೆಗೆ ಸೇರದೆ ಸ್ವಾತಂತ್ರ್ಯದ ಹೋರಾಟದ ಪ್ರೇರಣೆಯಿಂದ ಹೋರಾಟದ ಸಾಗರಕ್ಕೆ ಧುಮುಕಿ ಜನರನ್ನು ಸಂಘಟಿಸಿದರು. ತೀವ್ರಗಾಮಿಯಾಗಿದ್ದ ಅವರು ಶಸ್ತ್ರದ ಬಲದಿಂದ ಸ್ವಾತಂತ್ರ್ಯ ಪಡೆಯಬೇಕು ಎನ್ನುವುದು ಅವರ ಅದಮ್ಯ ಆಸೆಯಾಗಿತ್ತು ಎಂದರು.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತಾಲೂಕಾ ಅಧ್ಯಕ್ಷ ರವಿ ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯ ಮೇಲೆ ಗುರುಬಸಪ್ಪ ಕಂತೆ, ಪೂಜ್ಯ ರಾಜಶೇಖರ ಸ್ವಾಮೀಜಿ ಬಿ.ಎಡ್ ಕಾಲೇಜಿನ ಪ್ರಾಚಾರ್ಯ ಅಶೋಕ ರೆಡ್ಡಿ, ವಿಕೆಜಿ ಪದವಿ ಕಾಲೇಜಿನ ಕಲ್ಯಾಣಿ ಸಾವಳಗಿ, ಎಸ್‌ಆರ್‌ಜಿ ಆಂಗ್ಲ್ ಮಾಧ್ಯಮ ಶಾಲೆಯ ಪ್ರಾಚಾರ್ಯೆ ಜ್ಯೋತಿ ವಿಶಾಖ, ಸಂಜಯಕುಮಾರ ಪೂಜಾರಿ ಇದ್ದರು. ವೈಷ್ಣವಿ ನಿರೂಪಿಸಿದರೆ, ಡಾ. ಅಪ್ಪಾಸಾಬ ಬಿರಾದಾರ ಸ್ವಾಗತಿಸಿದರು. ಮೌಲಪ್ಪ ವಂದಸಿದರು.