ಕಲಬುರಗಿ: ಇಲ್ಲಿನ ಮಿಸ್ಬಾ ನಗರ ಬಡಾವಣೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 1 ಕೋಟಿಯಲ್ಲಿ ನಿರ್ಮಿಸಲಾದ ನೂತನ ಶಾದಿಮಹಲ್ ಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಮಹಿಬೂಬ್ ಪಾಶಾ ಕಾರಡಗಿ ಹಾಗೂ ಜಂಟಿ ನಿರ್ದೇಶಕರಾದ ಸಯ್ಯದ್ ಮನ್ಸೂರ್ ಪಾಶಾ ಅವರು ಇಂದು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಸಮುದಾಯದ ಅನುಕೂಲಕ್ಕಾಗಿ ಭವ್ಯ ಶಾದಿಮಹಲ್ ನಿರ್ಮಿಸಿದ್ದು, ಸಮುದಾಯದ ಜನರು ಇದರ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ಸಾರ್ವಜನಿಕರು ಇದರ ಲಾಭ ಪಡೆಯುವಂತೆ ಆಗಬೇಕೆಂದು ಆಶಯ ವ್ಯಕ್ತಪಡಿಸಿದ್ದರು.
ನಂತರ ಅಲ್ಪಸಂಖ್ಯಾತರ ಇಲಾಖೆಯ ಜಂಟಿ ನಿರ್ದೇಶಕರಾದ ಸಯ್ಯದ್ ಮನ್ಸೂರ್ ಪಾಶ ಮಾತನಾಡಿ, ಈ ಶಾದಿಮಹಲ್ ಕಮಿಟಿ ಕೇವಲ ಶಾದಿಮಹಲ್ ಗೆ ಸೀಮಿತವಾಗದೆ ಬಡವರ ಕಲ್ಯಾಣಕ್ಕಾಗಿ ಮತ್ತು ಸಹಾಯಕ್ಕಾಗಿ ಉಪಯೋಗವಾಗುವಂತಾಗಬೇಕು ಎಂದರು.
ಇಲಾಖೆಯ ಜಿಲ್ಲಾಧಿಕಾರಿ ಮಹಿಮೂದ್ ಈ ಭವ್ಯ ಶಾದಿಮಹಲ್ ನಿರ್ಮಾಣಕ್ಕಾಗಿ ನಿರ್ದೇಶಕರು, ಜಂಟಿ ನಿರ್ದೇಶಕರು ಹಾಗೂ ಶಾಹಜೀಲಾನ ಕಮೀಟಿಯ ಪರಿಶ್ರಮ ಹೆಚ್ಚಿದ್ದು, ಇದರ ಪ್ರತಿಫಲವಾಗಿ ಇಂದು ಇಂತಹ ಸುಂದರವಾದ ಶಾದಿಮಹಲ್ ನಿರ್ಮಿಸಲು ಸಾಧ್ಯವಾಗಿದೆ ಎಂದು ಅಭಿನಂದನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಮೀಟಿಯ ಮುಖಂಡರು, ಸದಸ್ಯರು ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.