ಪ್ರಶ್ನೆಗಳು ಅರ್ಥವಾಗದಿರುವ ಭಾರತದಲ್ಲಿ ನಾವು ವಾಸಿಸುತ್ತಿದ್ದೇವೆ: ವಿಶ್ವಾರಾಧ್ಯ ಸತ್ಯಂಪೇಟೆ

0
47

ಶಹಾಪುರ: ಪ್ರಶ್ನೆಗಳು ಅರ್ಥವಾಗದಿರುವ ಭಾರತದಲ್ಲಿ ನಾವು ವಾಸಿಸುತ್ತಿದ್ದೇವೆ. ಮೊದಲು ಪ್ರಶ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಪ್ರಶ್ನೆಗಳು ನಮಗೆ ಅರ್ಥವಾಗಬೇಕಾದರೆ ಬುದ್ದ ಬಸವ ಅಂಬೇಡ್ಕರ್ ,ಪುಲೆ, ಪೆರಿಯಾರ, ನಾರಾಯಣ ಗುರು ಮೊದಲಾದವರನ್ನು ಅರಿತುಕೊಳ್ಳಬೇಕು ಎಂದು ಬಸವಮಾರ್ಗದ ವಿಶ್ವಾರಾಧ್ಯ ಸತ್ಯಂಪೇಟೆ ನುಡಿದರು.

ಮಾನವ ಬಂಧುತ್ವ ಹಾಗೂ ದಲಿತ ಸೇನೆ ಏರ್ಪಡಿಸಿದ್ದ ಸಂವಿಧಾನ ಹಾಗೂ ಸವಾಲುಗಳು ಎಂಬ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಇಲ್ಲಿನ‌ ಜನಗಳು ಸಂವಿಧಾನವನ್ನು ಸರಿಯಾಗಿ ಓದಬೇಕು. ಸಂವಿಧಾನ ಅರ್ಥ ಮಾಡಿಕೊಳ್ಳದೆ ಅದರ ಜಾರಿಯ ಕುರಿತು ಆಲೋಚಿಸುವುದು ಸಮರ್ಪಕವಾಗುವುದಿಲ್ಲ. ಜಾತಿ ವ್ಯವಸ್ಥೆಗೆ ಮೂಲ‌ಕಾರಣ ನಮ್ಮ ನಮ್ಮ ಕಸುಬುಗಳು. ಕಾಯಕವೇ ಕಾಲಕ್ರಮೇಣ ಜಾತಿಗಳನ್ನು ಸೃಷ್ಟಿಸಿದವು. ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ ಜಲ-ಬಿಂದುವಿನ ವ್ಯವಹಾರ ಒಂದೇ, ಆಶೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೇ. ಏನನೋದಿ, ಏನ ಕೇಳಿ, ಏನು ಫಲ ಕುಲಜನೆಂಬುದಕ್ಕೆ ಆವುದು ದೃಷ್ಟ ? ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ. ಕರ್ಣದಲ್ಲಿ ಜನಿಸಿದರುಂಟೆ ಜಗದೊಳಗೆ ಇದು ಕಾರಣ ಕೂಡಲಸಂಗಮದೇವಾ, ಲಿಂಗಸ್ಥಲವನರಿದವನೆ ಕುಲಜನು. ಎಂದು ಬಸವಣ್ಣನವರು ಸ್ಪಷ್ಟ ಪಡಿಸಿದ್ದಾರೆ.ಆದ್ದರಿಂದ ನಾವೆಲ್ಲ ಕೇವಲ ಮನುಷ್ಯರಾಗಿ ಆಲೋಚಿಸಬೇಕೆ ಹೊರತು ಜಾತಿವಾದಿಯಾಗಿ ಅಲ್ಲ ಎಂದು ಸಭೆಗೆ ಅರುಹಿದರು.

ಸಮಾಜದಲ್ಲಿ ಅಸಮಾನತೆ ಇದೆ. ಹೆಣ್ಣು ಗಂಡು ಮೇಲು ಕೀಳು ತಾರತಮ್ಯಗಳಿವೆ. ಬಡವ ಬಲ್ಲಿದರಿದ್ದಾರೆ. ಸಾಕಷ್ಟು ಮೌಢ್ಯಗಳಿವೆ. ಇವುಗಳ ಬಗ್ಗೆ ಅರಿವು ಮೂಡಿಸಬೇಕಾದ ಮಾಧ್ಯಮಗಳು, ಅದರಲ್ಲೂ ದೃಶ್ಯ ಮಾಧ್ಯಮ ರಾಜಕಾರಣಿಗಳಿಗೆ ಮಾರಾಟವಾಗಿವೆ ಎಂದು ಕುಟುಕಿದರು.

ಅಕ್ಷರಗಳನ್ನು ಅಭ್ಯಾಸ ಮಾಡಿದ ಜನರು, ಅಕ್ಷರಭ್ಯಾಸಿಗಳಾಗಿದ್ದಾರೆ ಹೊರತು ವಿದ್ಯಾವಂತರಾಗಿಲ್ಲ. ತೀರಾ ಇತ್ತೀಚೆಗೆ ಚಿತ್ತೂರಿನಲ್ಲಿ ದಂಪತಿಗಳು ಡೋಂಗಿ ಬಾಬಾನ‌ ಮಾತು ಕೇಳಿ ತಮ್ಮ ಮಕ್ಕಳಿಬ್ಬರನ್ನು‌ ಬಲಿಕೊಟ್ಟ ಹೇಯ ಕೃತ್ಯ ನಾಚಿಕೆ ತರಿಸುವಂಥದ್ದು ಎಂದವರು ಸಭೆಗೆ ತಿಳಿಸಿದರು.

ದೇಶಕ್ಕೆ ಅನ್ನಕೊಡುವ ರೈತರ ಬಗೆಗೆ ಕಾಳಜಿ ಇಲ್ಲದ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಸದಾ ಬಿತ್ತರಿಸಿ, ಜನರ ದಾರಿ ತಪ್ಪಿಸುತ್ತಿವೆ. ರೈತರಿಗೆ ಧ್ವನಿಯಾಗದೆ, ಪ್ರಭುತ್ವವಾದಿಗಳ ಕೈಗೊಂಬೆಯಾಗಿ ವರ್ತಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಸಂಗತಿ ಎಂದವರು ಎಚ್ಚರಿಸಿದರು.

ಅನ್ಯಾಯ ಅಸತ್ಯ ನಡೆದಾಗ ಸತ್ಯವನ್ನು ಅರಿತುಕೊಂಡ ಜನರು ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ಪ್ರಭುತ್ವ ಪ್ರಜೆಗಳ ಒಳಿತಿಗೆ ಮಿಡಿಯುವಂತಾಗಬೇಕಾದರೆ ಸಾತ್ವಿಕ ಪ್ರತಿಭಟನೆ ಮುಖ್ಯ , ಬಸವಣ್ಣನವರು ಎಲೆ ಹೋತಾ ಅಳು ಕಂಡ್ಯಾ ಎಂದು ಆ ಆಡಿನ ಮೂಲಕವೂ ಪ್ರತಿಭಟನೆಯ ಮನೋಭಾವ ಹುಟ್ಟು ಹಾಕಿದರು ಎಂದವರು ಮಾರ್ಮಿಕವಾಗಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಮಾನವ ಬಂಧುತ್ವ ವೇದಿಕೆಯ ಸತೀಶ್ ಜಾರಕಿಹೊಳಿ, ಸಿದ್ದಬಸವ ಕಬೀರಾನಂದ ಸ್ವಾಮೀಜಿ, ಹಣಮಂತ ಯಳಸಂಗಿ, ಅಶೋಕ ಗೋಗಿ‌ ಮೊದಲಾದವರು ಮಾತನಾಡಿದರು. ಬಸವರಾಜ ಸಿನ್ನೂರ ಕಾರ್ಯಕ್ರಮ ನಿರ್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here