ಸರ್ಕಾರ ಉಳಿಸಿಕೊಳ್ಳಲು ಗ್ರಾಮ ವಾಸ್ತವ್ಯ: ಸಿಎಂ ರಾಜೀನಾಮೆಗೆ ಗುತ್ತೇದಾರ್ ಆಗ್ರಹ

0
110

ಕಲಬುರಗಿ: ರಾಜ್ಯದಲ್ಲಿ ಜೆಡಿ(ಎಸ್), ಕಾಂಗ್ರೆಸ್ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರವು ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಸಮಸ್ಯೆಗಳು ಹಾಗೆಯೇ ಉಳಿದಿವೆ. ಆಗಿರುವ ಲೋಪಗಳನ್ನು ಮುಚ್ಚಿಕೊಳ್ಳಲು ಗ್ರಾಮ ವಾಸ್ತವ್ಯ ಕೈಗೊಳ್ಳುವ ಬದಲು ಕೂಡಲೇ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಮಾಲಿಕಯ್ಯ ಗುತ್ತೇದಾರ್ ಅವರು ಒತ್ತಾಯಿಸಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ೨೪ ಗಂಟೆಗಳಲ್ಲಿಯೇ ರೈತರ ಎಲ್ಲ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದು, ಇಲ್ಲಿಯವರೆಗೆ ಮನ್ನಾ ಆಗಿಲ್ಲ. ಹಿಂದೆ ಸಿದ್ಧರಾಮಯ್ಯ ಸರ್ಕಾರವು ಪ್ರತಿ ರೈತರ ೫೦,೦೦೦ ರೂ.ಗಳ ಸಾಲ ಮನ್ನಾ ಘೋಷಿಸಿ, ೧೦,೦೦೦ ಕೋಟಿ ರೂ.ಗಳಲ್ಲಿ ಕೇವಲ ೪,೦೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಹಿಂದಿನ ೬೦೦೦ ಕೋಟಿ ರೂ.ಗಳ ರೈತರ ಸಾಲ ಮನ್ನಾ ಹಾಗೆಯೇ ಉಳಿದಿರುವಾಗ ಕುಮಾರಸ್ವಾಮಿಯವರು ಮತ್ತೆ ೪೬೦೦೦ ಕೋಟಿ ರೂ.ಗಳ ರೈತರ ಸಾಲ ಮನ್ನಾ ಘೋಷಿಸಿದ್ದು, ಈಗ ಆ ಮನ್ನಾ ಘೋಷಣೆ ೨೦,೦೦೦ ಕೋಟಿ ರೂ.ಗಳಿಗೆ ಕುಸಿದಿದೆ. ಯಾವುದೇ ರೈತರ ಸಾಲ ಮನ್ನಾ ಆಗದೇ ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

Contact Your\'s Advertisement; 9902492681

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕಟ್ಟಿದ ೩೯೮೮ ರೈತರ ಸಾಲ ಹಿಂದಕ್ಕೆ ಪಡೆದಿದ್ದು ಮಾತ್ರ ಅಚ್ಚರಿಯೆಂದು ಹೇಳಿದ ಅವರು, ಆರ್‌ಬಿಐ ಅಂತಹ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಶೇಕಡಾ ೩೩ಕ್ಕೂ ಹೆಚ್ಚು ಬೆಳೆ ಹಾನಿಯಾದ ವಿಮೆ ಮಾಡಿಸಿದ ರೈತರಿಗೆ ಬೆಳೆ ಹಾನಿ ಪೂರ್ತಿ ಕೊಡಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯದಲ್ಲಿ ೧೬೦ಕ್ಕೂ ಹೆಚ್ಚು ತಾಲ್ಲೂಕುಗಳನ್ನು ರಾಜ್ಯ ಸರ್ಕಾರವು ಬರಪೀಡಿತ ಪ್ರದೇಶವೆಂದು ಘೋಷಿಸಿ, ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಮಿತಿಮೀರಿದೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ೧೧ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಮಂಜೂರಾತಿ ಕೊಡಿಸಿದ್ದೆ. ಅದರಲ್ಲಿ ೭ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಮಾಡಲಾಗಿದ್ದು, ನಡುವಿನಹಳ್ಳಿ- ಕಡಹಳ್ಳಿ ಸೇರಿದಂತೆ ಇನ್ನೂ ನಾಲ್ಕು ಬ್ರಿಜ್ ಕಮ್ ಬ್ಯಾರೇಜ್‌ಗಳನ್ನು ಕೂಡಲೇ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ಅವ್ಯವಹಾರದಿಂದಾಗಿ ನಿರ್ದೇಶಕರು ರಾಜೀನಾಮೆ ಕೊಟ್ಟಿದ್ದಾರೆ. ಈ ಕುರಿತು ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದ್ದು, ಕೂಡಲೇ ತನಿಖೆ ಪೂರ್ಣಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಕುಮಾರಸ್ವಾಮಿ ಅವರು ಈ ಹಿಂದೆ ಮಣ್ಣೂರ್ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದರು. ಆ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆ ಪೂರ್ಣಗೊಂಡಿಲ್ಲ. ಪ್ರವಾಹ ಪೀಡಿತ ಕುಟುಂಬಗಳ ಸ್ಥಳಾಂತರ ಸಮರ್ಪಕವಾಗಿ ಆಗಿಲ್ಲ. ೧೪೯ ಕುಟುಂಬಗಳಲ್ಲಿ ಕೇವಲ ೫೦ ಕುಟುಂಬಗಳಿಗೆ ಅನುಕೂಲ ಕಲ್ಪಿಸಿದರೂ ಸಹ ಅಸಮರ್ಪಕ ಕೆಲಸದಿಂದಾಗಿ ಕಟ್ಟಿದ ಮನೆಗಳಿಗೆ ಬೀಗ ಬಿದ್ದಿವೆ ಎಂದು ಅವರು ಆರೋಪಿಸಿದರು.

ಚಿತ್ತಾಪೂರ್ ತಾಲ್ಲೂಕಿನ ಹೆಬ್ಬಾಳ್ ಗ್ರಾಮದ ರೈತರಿಗೆ ಬೆಳೆ ಹಾನಿ ಪರಿಹಾರ ದೊರಕದೇ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಉಳಿದಿದೆ. ಕೂಡಲೇ ಆ ಪರಿಹಾರವನ್ನು ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಹೈದ್ರಾಬಾದ್ ಕರ್ನಾಟಕದಲ್ಲಿ ೩೭೧(ಜೆ) ಸಮರ್ಪಕವಾಗಿ ಜಾರಿಗೆ ಬರುತ್ತಿಲ್ಲ. ಲೋಕೋಪಯೋಗಿ ಇಲಾಖೆಯು ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಬದಲು ನೇರವಾಗಿ ನೇಮಕಾತಿ ಮಾಡಿಕೊಳ್ಳುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದ ಅವರು, ನೇಮಕಾತಿಯಲ್ಲಿ ೩೭೧(ಜೆ) ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಮುಖ್ಯಮಂತ್ರಿಗಳು ದೇವಲ್ ಗಾಣಗಾಪೂರಕ್ಕೆ ಭೇಟಿ ನೀಡಿದಾಗ ಸೊನ್ನ ಬ್ಯಾರೇಜ್‌ನಲ್ಲಿದ್ದ ನೀರನ್ನು ಬಿಟ್ಟು ಖಾಲಿ ಮಾಡಿದ್ದು, ಈಗ ಕುಡಿಯುವ ನೀರಿನ ಹಾಹಾಕಾರ ಇದೆ. ಇಂತಹ ಸಂದರ್ಭದಲ್ಲಿ ಉಜನಿ ಆಣೆಕಟ್ಟೆಯಿಂದ ನೀರು ಬಿಡಿಸಲು ಮಹಾರಾಷ್ಟ್ರಕ್ಕೆ ಬಿಜೆಪಿಯು ಕೋರಿದೆ. ಮುಖ್ಯಮಂತ್ರಿಗಳೂ ಸಹ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಅವರು ಒತ್ತಾಯಿಸಿದರು.

ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯಕ್ಕೆ ವಿರೋಧವಿಲ್ಲ. ಸಮಸ್ಯೆಗಳನ್ನು ಪರಿಹರಿಸಿ ಗ್ರಾಮ ವಾಸ್ತವ್ಯ ಮಾಡಿ. ಇಲ್ಲವಾದಲ್ಲಿ ರಾಜೀನಾಮೆ ಕೊಡಿ. ಬಿಜೆಪಿ ಅಧಿಕಾರಕ್ಕೆ ಬಂದು ಸಮಸ್ಯೆಗಳಿಗೆ ಸ್ಪಂದಿಸಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಬಿ.ಜಿ. ಪಾಟೀಲ್, ಬಸವರಾಜ್ ಇಂಗಿನ್, ಸೂರ್ಯಕಾಂತ್ ನಾಕೇದಾರ್, ರಾಜೇಂದ್ರ ಕರಿಕಲ್, ಕಲ್ಯಾಣರಾವ್ ನಾಗೋಜಿ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here