ಕಲಬುರಗಿ: ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಸೋಮವಾರ ಮಂಡಿಸಿದ ಬಜೆಟ್ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಮೂಲಕ ಬ್ರಿಟೀಷರ ಆಡಳಿತ ನೆನಪಿಸಿದೆ ಎಂದು ಕನ್ನಡ ಭೂಮಿ ಜಾಗೃತ ಸಮಿತಿ ಜಿಲ್ಲಾ ಅಧ್ಯಕ್ಷ ಪ್ರಶಾಂತ ತಂಬೂರಿ ಆರೋಪಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ ಆಡಳಿತದಲ್ಲಿ ಜನರ ಮೇಲೆ ನೇರವಾಗಿ ತೆರಿಗೆ ವಿಧಿಸಲಾಗುತಿತ್ತು.ಸ್ವಾತಂತ್ರ್ಯ ನಂತರವೂ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದ್ದು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಜನಸಾಮಾನ್ಯರ ದಿನನಿತ್ಯದ ಬಳಕೆ ವಸ್ತುಗಳಾದ ಪೆಟ್ರೋಲ್, ಡಿಸೆಲ್, ಅಡುಗೆ ಎಣ್ಣೆ ಸೇರಿದಂತೆ ಹಲವು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿದೆ.ಭಾರತ ದೇಶದಲ್ಲಿ ಮಧ್ಯಮ ಹಾಗೂ ಬಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು,ಬೆಲೆ ಏರಿಕೆ ಹೊರೆಯಿಂದ ಜೀವನ ಸಾಗಿಸುವುದು ದುಸ್ತರವಾಗಿದೆ.
ಪ್ರಧಾನಿಗಳಿಗೆ ಬಡ ಜನರ ಬಗ್ಗೆ ಕಾಳಜಿ ಇಲ್ಲದಿರುವುದು ಎದ್ದು ಕಾಣುತ್ತಿದೆ.ಕೇವಲ ಶ್ರೀಮಂತರಿಗೆ ಮಣೆ ಹಾಕಿ ಇನ್ನಿತರರನ್ನು ಕಡೆಗಣಿಸಲಾಗಿದೆ.ಹೆಜ್ಜೆ ಹೆಜ್ಜೆಗೂ ಜನಸಾಮಾನ್ಯರನ್ನು ತೆರಿಗೆ ರೂಪದಲ್ಲಿ ವಸೂಲಿ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯವಾಗಿದೆ.ಈ ಬಾರಿ ಕೃಷಿ ಕ್ಷೇತ್ರದಲ್ಲೂ ರಿಯಾಯಿತಿ ನೀಡದೇ ರೈತರಿಗೆ ದ್ರೋಹ ಬಗೆಯಲಾಗಿದೆ. ಕೂಡಲೇ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.