ಸುರಪುರ: ದೇಶದಲ್ಲಿನ ರೈತರ ಏಳಿಗೆಗಾಗಿ ಸರಕಾರಗಳು ಹೆಚ್ಚಿನ ನೆರವು ನೀಡುವುದು ತುಂಬಾ ಅವಶ್ಯಕವಾಗಿದೆ ಎಂದು ಲಕ್ಷ್ಮೀಪುರ ಶ್ರೀಗಿರಿ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ತಾಲೂಕಿನ ಲಕ್ಷ್ಮೀಪುರ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯಲ್ಲಿನ ಶ್ರೀಗಿರಿ ಮಠದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ವತಿಯಿಂದ ಹಮ್ಮಿಕೊಂಡಿರುವ ರೈತ ಜಾಗೃತಿ ಸಮಾವೇಶದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ,ರೈತರು ಸಂಕಷ್ಟಕ್ಕೆ ಸಿಲುಕಿದರೆ ಅದು ದೇಶದ ಜನರ ಮೇಲೆ ನೇರ ಪರಿಣಾಮ ಬೀರಲಿದೆ,ಆದ್ದರಿಂದ ರೈತರನ್ನು ಜಾಗೃತಿಗೊಳಿಸುವ ಕೆಲಸವನ್ನು ಸಂಘಟನೆಗಳು ಮಾಡಬೇಕಾಗಿರುವುದು ಅವಶ್ಯ,ಆ ನಿಟ್ಟಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಮಾಡುತ್ತಿರುವ ಕಾರ್ಯ ಅದ್ಭುತವಾಗಿದೆ ಎಂದರು.
ಸಂಘದ ಅಧ್ಯಕ್ಷ ಮಹೇಶಗೌಡ ಸುಬೇದಾರ ಮಾತನಾಡಿ,ಇದೇ ತಿಂಗಳ ೧೫ನೇ ತಾರೀಖಿನಂದು ಭೀಮರಾಯನಗುಡಿಯ ಕೃಷಿ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಬೃಹತ್ ರೈತ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡು ನಮ್ಮ ರೈತಾಪಿ ವರ್ಗವನ್ನು ಜಾಗೃತಗೊಳಿಸುವ ಹಾಗು ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸರಕಾರಗಳ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಜನಜಾಗೃತಿಯನ್ನು ಮೂಡಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂಚಾಲಕ ಶಿವರಾಜ ಕಲಕೇರಿ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಸಂಚಾಲಕ ಚಂದ್ರಶೇಖರ ಡೊಣೂರ ರೈತ ಮುಖಂಡರಾದ ಶಾಂತರಡ್ಡಿ ಬಿಜಾಸಪುರ ಬಸನಗೌಡ ಬಿರಾದಾರ ವೆಂಕಟೇಶ ಶಾರದಹಳ್ಳಿ ಸೇರಿದಂತೆ ಅನೇಕರಿದ್ದರು.