ಬಾಲ್ಯ ವಿವಾಹ ತಡೆ ಪ್ರಕರಣಗಳ ಸಮಗ್ರ ವರದಿ ಒಂದು ವಾರದೊಳಗೆ ಸಲ್ಲಿಸಿ: ವಿ.ವಿ.ಜ್ಯೋತ್ಸ್ನಾ

0
28

ಕಲಬುರಗಿ: ಜಿಲ್ಲೆಯಲ್ಲಿ ಪ್ರಸಕ್ತ 2020-21ನೇ ಸಾಲಿನಲ್ಲಿ ಬಾಲ್ಯ ವಿವಾಹ ತಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ 1098 ಟೋಲ್ ಫ್ರೀ ಸಂಖ್ಯೆಗೆ ಬಂದ ದೂರಿನ ಕರೆಯ ಪ್ರತಿ ಪ್ರಕರಣದ ಸಮಗ್ರ ವರದಿಯನ್ನು ಮುಂದಿನ ಒಂದು ವಾರದೊಳಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಜಿಲ್ಲಾ ಮಟ್ಟದ ಸಮನ್ವÀ್ವಯ ಮತ್ತು ಪರಿಶೀಲನಾ ಸಮಿತಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 89 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಸಭೆಗೆ ಮಾಹಿತಿ ನೀಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು 1098 ಟೋಲ್ ಫ್ರೀ ಸಂಖ್ಯೆ ಬಂದ ಕರೆ ಎಷ್ಟು ಎಂದಾಗ ಚೈಲ್ಡ್ ಲೈನ್ ಸಂಯೋಜಕ ಬಸವರಾಜ ಅವರು 110 ಬಾಲ್ಯ ವಿವಾಹ ಆಗುವ ಪ್ರಕರಣಗಳು ಸೇರಿದಂತೆ 154 ಹುಸಿ ಕರೆಗಳ ಮಾಹಿತಿ ಬಂದಿವೆ ಎಂದರು. ಈ ಹಿನ್ನೆಲೆಯಲ್ಲಿ ಪ್ರತಿ ಸಿ.ಡಿ.ಪಿ.ಓ. ಗಳು ತಮ್ಮ ತಾಲೂಕಿನ ಎಲ್ಲಾ ಪ್ರಕರಣಗಳ ಸಮಗ್ರ ವರದಿ ನೀಡುವಂತೆ ಡಿ.ಸಿ. ಅವರು ಸೂಚಿಸಿದರು.

ಇದಲ್ಲದೆ ಬಾಲ್ಯ ವಿವಾಹ ತಡೆಗಟ್ಟಲು ಐ.ಇ.ಸಿ. ಚಟುವಟಿಕೆಗಳು ತೀವ್ರಗೊಳಿಸಬೇಕು. ಪ್ರಕರಣ ಕಂಡುಬಂದಲ್ಲಿ ಸಂಬಂಧಿಸಿದವರ ಮೇಲೆ ಎಫ್.ಐ.ಆರ್. ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಲಬುರಗಿ ಜಿಲ್ಲೆಯಲ್ಲಿ ನಿರ್ಗತಿಕ, ನಿರಾಶ್ರಿತ, ವಿಧವೆಯರು, ವಿಚ್ಛೇಧಿತರು ಹಾಗೂ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ವಾಸಿಸಲೆಂದೆ ಕಲಬುರಗಿ ನಗರದಲ್ಲಿ 2 ಸ್ವಾಧಾರ ಗೃಹಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ 60 ಮಹಿಳೆಯರು ವಾಸವಿದ್ದಾರೆ. ಮಹಿಳೆಯರಿಗೆ ಕಂಪ್ಯೂಟರ್, ಟೇಲರಿಂಗ್ ಒಳಗೊಂಡಂತೆ ಉತ್ತಮ ಆದಾಯ ನೀಡುವ ವೃತ್ತಿಗಳ ತರಬೇತಿ ನೀಡಿ ಅವರನ್ನು ತಮ್ಮ ಬದುಕು ತಾವೇ ಕಟ್ಟಿಕೊಳ್ಳಲು ಶಕ್ತರನ್ನಾಗಿಸಬೇಕು ಮತ್ತು ವಿವಿಧ ಸರ್ಕಾರಿ ಸೌಲಭ್ಯಗಳನ್ನು ಇಂತಹ ಫಲಾನುಭವಿಗಳಿಗೆ ದೊರಕುವಂತಾಗಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೆಶದಲ್ಲಿರುವ ಮಾಜಿ ದೇವದಾಸಿಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರಲ್ಲಿ  ನಿವೇಶನ ಇಲ್ಲದವರಿಗೆ ನಿವೇಶನ ಮತ್ತು ನಿವೇಶನ ಹೊಂದಿದವರಿಗೆ ಮನೆ ನಿರ್ಮಿಸಿ ಕೊಡುವ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕರು ಸಮನ್ವಯ ಸಾಧಿಸಿಕೊಂಡು ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ/ ಮನೆ ಮಂಜೂರು ಮಾಡಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ನಿರ್ದೇಶನ ನೀಡಿದರು.

ಸಭೆಯಲ್ಲಿದ ಲೈಂಗಿಕ ಅಲ್ಪಸಂಖ್ಯಾತರೊಬ್ಬರು ಮಾತನಾಡಿ ತಮಗೆ ಸರ್ಕಾರದಿಂದ 500 ರೂ. ಮಾಸಾಶನ ನೀಡುವ ಯೋಜನೆ ಇದೆ. ಇಲ್ಲಿನ ಕಂದಾಯ ಇಲಾಖೆಯಲ್ಲಿ ಯೋಜನೆಯ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದ ಕಾರಣ ಮಾಸಾಶನ ತಮಗೆ ಸರಿಯಾಗಿ ತಲುಪುತ್ತಿಲ್ಲ. ಅಲ್ಲದೆ ಮನೆಯಿಲ್ಲದೆ ಬಹಳಷ್ಟು ಜನ ಲೈಂಗಿಕ ಅಲ್ಪಸಂಖ್ಯಾತರಿದ್ದು, ಇವರಿಗೆ ಮನೆ ಮಂಜೂರು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಆರ್.ಶೆಟ್ಟರ್, ಡಿ.ಎಚ್.ಓ. ಡಾ.ರಾಜಶೇಖರ್ ಮಾಲಿ, ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕ ಡಾ.ಅಂಬಾರಾಯ ರುದ್ರವಾಡಿ, ಡಿ.ಎಸ್.ಪಿ. ಜೇಮ್ಸ್ ಮಿನೇಜಸ್, ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಎಸ್.ಎನ್.ಹಿರೇಮಠ, ಆಹಾರ ಇಲಾಖೆಯ ಉಪನಿರ್ದೇಶಕ ದಯಾನಂದ ಪಾಟೀಲ, ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆ, ತಾಲೂಕಿನ ಸಿ.ಡಿ.ಪಿ.ಓ.ಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರ ಭರತೇಶ ಶೀಲವಂತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here