ಬೆಂಗಳೂರು: ರಾಜ್ಯದಲ್ಲಿ ಚನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಹಾಗೂ ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್‌ಗಳು ಹಾದುಹೋಗುತ್ತಿವೆ. ಬೆಂಗಳೂರು-ಹೈದ್ರಾಬಾದ್ ಕೈಗಾರಿಕಾ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರವು ಪರಿಶೀಲಿಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ್ ಶೆಟ್ಟರ ಅವರು ಇಂದು ವಿಧಾನಸಭೆಯಲ್ಲಿ ನಡೆದ ಪ್ರಶ್ನೋತ್ತರದಲ್ಲಿ ತಿಳಿಸಿದರು.
ಶಾಸಕ ಶರತ್ ಕುಮಾರ್ ಬಚ್ಚೇಗೌಡ ಅವರು ರಾಜ್ಯದಲ್ಲಿ ಕಳೆದ ಎರು ವರ್ಷಗಳಲ್ಲಿ ಯಾವ ಯಾವ ಕೈಗಾರಿಕಾ ಕಾರಿಡಾರ್ ಗಳನ್ನು ಯಾವ ಯಾವ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ ಎಂಬ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್ ಯೋಜನೆಯಡಿಯಲ್ಲಿ ಧಾರವಾಡದಲ್ಲಿ ಸುಮಾರು ೫,೮೦೦ ಎಕರೆ ಪ್ರದೇಶದಲ್ಲಿ ಕೈಗಾರಿಕಾ ನೋಡ್ ಅನ್ನು ಆಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಭೂ ಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ಸಚಿವರು ತಿಳಿಸಿದರು.
ಬೆಂಗಳೂರು-ಹೈದರಾಬಾದ್ ಕೈಗಾರಿಕಾ ಕಾರಿಡಾರ್ ಯೋಜನೆಯಡಿ ಯಾದಗಿರಿ-ಕಡೆಚೂರು ಕೈಗಾರಿಕಾ ನೋಡ್ ಅನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಿದ್ದು, ಭೂಮಿಯನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ರೈತರಿಗೆ ಪರಿಹಾರ ಧನ ನಿಗದಿ ಮಾಡಿದ ನಂತರ ಕೈಗಾರಿಕಾ ಕ್ಷೇತ್ರವನ್ನು ಅಭಿವೃದ್ದಿ ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ರಾಜ್ಯಸರ್ಕಾರವು ನೂತನ ಕೈಗಾರಿಕಾ ನೀತಿ ೨೦೨೦-೨೫ನ್ನು ಜಾರಿಗೆ ತಂದಿದ್ದು ಕೈಗಾರಿಕೆಗಳ ಬಂಡವಾಳ ಹೂಡಿಕೆದಾರರಿಗೆ ರಿಯಾಯಿತಿ ಹಾಗೂ ಪ್ರೋತ್ಸಾಹಗಳನ್ನು ನೀಡುತ್ತಿದೆ. ಬಂಡವಾಳ ಹೂಡಿಕೆದಾರರು ಯಾವ ಜಿಲ್ಲೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೊ ಅಲ್ಲಿ ಕೈಗಾರಿಕೆಯನ್ನು ಅಭಿವೃದ್ದಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.