ಮನುಷ್ಯ ಜನ್ಮದ ಮಹತ್ವ ಬೋಧಿಸಿ ಬದುಕು ಉಜ್ವಲಗೊಳಿಸುವುದೇ ಗುರುವಿನ ಪರಮ ಕರ್ತವ್ಯ: ಶ್ರೀ ರಾಜೇಶ್ವರ ಶಿವಾಚಾರ್ಯರು

0
40

ಕಲಬುರಗಿ: ಮನುಷ್ಯನ ಮನದ ಭ್ರಾಂತಿ ಕಳೆದು ಶಾಂತಿ ಕರುಣಿಸಿ ಮನುಷ್ಯ ಜನ್ಮದ ಮಹತ್ವ ಬೋಧಿಸಿ ಬದುಕು ಉಜ್ವಲಗೊಳಿಸುವುದೇ ಗುರುವಿನ ಪರಮ ಕರ್ತವ್ಯವಾಗಿದ್ದು, ಪ್ರಾಚೀನ ಪರಂಪರೆಯ ಎಲ್ಲ ಯತಿಗಳು ಈ ದಿಶೆಯಲ್ಲಿ ಮಾನವೀಯ ಮೌಲ್ಯಗಳನ್ನು ಬೋಧಿಸಿದ್ದಾರೆಂದು ತಡೋಳಾ ಹಿರೇಮಠದ ಪರಮಪೂಜ್ಯ ಶ್ರೀ ರಾಜೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಸಮೀಪದ ಶ್ರೀನಿವಾಸ ಸರಡಗಿ ಗ್ರಾಮದ ಶ್ರೀಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದಲ್ಲಿ ಲಿಂ|| ಚಿಕ್ಕವೀರೇಶ್ವರರ ೭೪ ನೇ ಪುಣ್ಯಾರಾಧನೆ ಅಂಗವಾಗಿ ಆಯೋಜಿಸಿದ ಧರ್ಮ ಸಭೆಗೆ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಬಹು ಪ್ರಾಮುಖ್ಯತೆ ಇದ್ದು ಮನುಷ್ಯನ ಬದುಕಿನಲ್ಲಿ ಸಮರ್ಥ ಗುರು ಸಿಕ್ಕರೆ ಅದ್ಭುತ ಸಾಧನೆ ಮಾಡಬಹುದು,  ಸಾಧನೆಗೆ ಗುರುವಿನ ಶ್ರೀರಕ್ಷೆ ಪ್ರಮುಖವಾಗಿದ್ದು ವೀರಶೈವ ಮಠಮಾನ್ಯಗಳು ಅನಾದಿ ಕಾಲದಿಂದಲೂ ಅನ್ನ, ಅಕ್ಷರ, ಆಶ್ರಯ, ಔಷಧಿ ಮೊದಲು ಮಾಡಿಕೊಂಡು ಜನೋಪಯೋಗಿ ಕ್ಷೇತ್ರಗಳಲ್ಲಿ ನಿಸ್ವಾರ್ಥವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಹೊರಟಿವೆ ಎಂದು ನುಡಿದರು.

Contact Your\'s Advertisement; 9902492681

ನೇತೃತ್ವ ವಹಿಸಿ ಆಶೀರ್ವಚನ ನೀಡಿದ ದೇವಪುರದ ಪೂಜ್ಯ ಶ್ರೀ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ ಸ್ವಾಮೀಜಿಗಳಾದವರು ಸಮಾಜದ ಸ್ವಾಸ್ಥ್ಯ ಕಾಪಾಡುವ ದಿಶೆಯಲ್ಲಿ ಹಿಂದಿನಿಂದಲೂ ಗ್ರಾಮಾಂತರ ಭಾಗದಲ್ಲಿ ಹಗಲಿರುಳು ಜನಸೇವೆಯಲ್ಲಿ ಮಠಗಳು ತೊಡಗಿಸಿಕೊಂಡಿದ್ದು, ಗ್ರಾಮೀಣ ಮಟ್ಟದಲ್ಲಿ ಸಂಸ್ಕೃತಿ, ಸಂಸ್ಕಾರ, ಅರಿವು, ಆಚಾರ ಮೂಡಿಸುವ ಮೂಲಕ ಮಹತ್ವದ ಕೆಲಸ ಮಾಡುತ್ತಿವೆ ಎಂದು ಹೇಳಿದರು.  ಶ್ರೀನಿವಾಸ ಸರಡಗಿಯ ಪೂಜ್ಯರು ಧಾರ್ಮಿಕ ಕಾರ್ಯಕ್ರಮಗಳಾದ ಸಮಾಜಪರವಾದಂಥ ಯೋಜನೆಗಳನ್ನು ಹಾಕಿಕೊಂಡು ಉತ್ತಮ ಕಾರ್ಯ ಮಾಡುತ್ತಿದ್ದಾರೆಂದು ಪ್ರಶಂಸಿದರು.

ಅವರಾದನ ಪೂಜ್ಯ ಶ್ರೀ ಮರುಳಸಿದ್ಧ ಶಿವಾಚಾರ್ಯರು, ದೋರನಳ್ಳಿಯ ಪೂಜ್ಯ ಶ್ರೀ ಚಿಕ್ಕರಾಜೇಂದ್ರ ಶಿವಾಚಾರ್ಯರು, ಶ್ರೀನಿವಾಸ ಸರಡಗಿಯ ಪೂಜ್ಯ ಶ್ರೀ ವೀರಭದ್ರ ಶಿವಾಚಾರ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.  ಶ್ರೀಮಠದ ಪೂಜ್ಯರಾದ ಪೂಜ್ಯ ಶ್ರೀ ರೇವಣಸಿದ್ದ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು.  ಕಲಬುರಗಿ ತಾಲೂಕಾ ಪಂಚಾಯತ ಮಾಜಿ ಅಧ್ಯಕ್ಷರಾದ ಚನ್ನವೀರಪ್ಪ ಸಲಗರ ಸಮಾರಂಭ ಉದ್ಘಾಟಿಸಿದರು.

ಶ್ರೀನಿವಾಸ ಸರಡಗಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶೇಖರಯ್ಯ ವೇದಿಕೆಯ ಮೇಲೆ ಉಪಸ್ಥಿತರಿದ್ದರು.  ಇದೇ ಸಂದರ್ಭದಲ್ಲಿ ಪೊಲೀಸ ಇಲಾಖೆಯಲ್ಲಿ ಕಾರ್ಯ ನಿವ್ಹಿಸುತ್ತಿರುವ ಶ್ರೀಮತಿ ಯಶೋಧಾ ಕಟಕೆ ಯಶಸ್ವಿ ಮಹಿಳಾ ಉದ್ಯಮಿ ಶ್ರೀಮತಿ ಅನ್ನಪೂರ್ಣ ಆರ್. ಸಂಗೋಳಗಿ ಯವರನ್ನು ಶ್ರೀಮಠದಿಂದ ವಿಶೇಷವಾಗಿ ಸತ್ಕರಿಸಲಾಯಿತು.  ಶ್ರವಣಕುಮಾರ ಮಠ ಪ್ರಾರ್ಥಿಸಿದರು.  ಹಣಮಂತರಾಯ ಅಟ್ಟೂರ ನಿರೂಪಿಸಿದರು, ನಾಗಲಿಂಗಯ್ಯ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಬಸವರಾಜ ಶೀಲವಂತ ವಂದಿಸಿದರು.

ಸಮಾರಂಭದಲ್ಲಿ ಸಂಗಯ್ಯ ಸ್ವಾಮಿ, ಶಿವಶರಣಪ್ಪ ಚಿದ್ರಿ, ಭೀಮಾಶಂಕರ ಚಕ್ಕಿ, ಶೀಲವಂತಯ್ಯ ಪಲ್ಲೇದಮಠ, ಸುರೇಶ ತಂಗಾ, ಸಂತೋಷ ಆಡೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here