ಕಲಬುರಗಿ: ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗಾಗಿ ಸರಕಾರದ ಮೇಲೆ ಸಂಘಟಿತ ಒತ್ತಡ ಹೇರು ನಿಟ್ಟಿನಲ್ಲಿ ಸಮಾಲೋಚನಾ ಸಭೆಯಲ್ಲಿ ಪಕ್ಷಾತೀತವಾಗಿ ಜನಪ್ರತಿನಿಧಿಗಳ ನಿಯೋಗ ಮುಖ್ಯ ಮಂತ್ರಿಗಳ ಮತ್ತು ಕೇಂದ್ರದ ಮೇಲೆ ಒತ್ತಡ ತರುವ ಬಗ್ಗೆ ಸರ್ವ ಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 371 ನೇ(ಜೆ) ಕಲಂ ತಿದ್ದುಪಡಿಯ ಸಂವಿಧಾನದ ವಿಶೇಷ ಸ್ಥಾನಮಾನ ಪಡೆದಿರುವ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರಕಾರದ ಮತ್ತು ರಾಜ್ಯ ಸರಕಾರದ ಯೋಜನೆಗಳು ಕಚೇರಿಗಳು, ಕೇಂದ್ರಗಳು ಬೇರೆ ಕಡೆಗೆ ಸ್ಥಳಾಂತರವಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿ ತನ್ನ ಪಕ್ಷಾತೀತ ಸಿದ್ಧಾಂತಕ್ಕೆ ಅನುಗುಣವಾಗಿ ಬರುವ ದಿನಗಳಲ್ಲಿ ಸರಕಾರದ ಮೇಲೆ ಬಲವಾದ ಒತ್ತಡ ತರಲು ಸಂಘಟಿತ ಹೋರಾಟ ಅತಿ ಅವಶ್ಯವಾಗಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಯಲ್ಲಿ ಈ ಹಿನ್ನಲೆಯಲ್ಲಿ ಮೊದಲನೆಯ ಹಂತವಾಗಿ ಬರುವ ಶುಕ್ರವಾರ ಕಲಬುರಗಿ ಜಿಲ್ಲೆಯ ಸರ್ವ ಪಕ್ಷಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆಯನ್ನು ನಿಯೋಜಿಸಲಾಗಿದ್ದು, ಎರಡನೆಯ ಹಂತವಾಗಿ ಕಲ್ಯಾಣ ಕರ್ನಾಟಕದ ಬುದ್ಧಿ ಜೀವಿಗಳ, ಚಿಂತಕರ ಸಮಾಲೋಚನೆ ಸಭೆ ನಡೆಸಿ ಸರಕಾರಕ್ಕೆ ಸಲ್ಲಿಸಬೇಕಾದ ಪ್ರಸ್ತಾವನೆಗಳ ಬಗ್ಗೆ ಮತ್ತು ಸಕರಾತ್ಮಕ ಒತ್ತಡದ ಬಗ್ಗೆ ಸಲಹೆ ಸೂಚನೆಗಳನ್ನು ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಇದಕ್ಕೆ ಪೂರಕವಾಗಿ ಮೂರನೇ ಹಂತವಾಗಿ ಆರು ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಪರ ಎಲ್ಲಾ ಸಂಘ ಸಂಸ್ಥೆಗಳ ಸಂಘಟನೆಗಳ ಸಭೆಯನ್ನು ನಿಯೋಜಿಸಿ ಸರಕಾರದ ಮೇಲೆ ಬಲವಾದ ಒತ್ತಡ ತರಲು ಮುಂದಿನ ರೂಪ ರೇಷೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ
ಈ ರಚನಾತ್ಮಕ ಕಾರ್ಯಕ್ಕೆ ಎಲ್ಲಾ ಪಕ್ಷಗಳು, ಸಂಘ ಸಂಸ್ಥೆಗಳು ಆಯಾ ಕ್ಷೇತ್ರದ ಗಣ್ಯರು, ನಾಗರಿಕರು, ಯುವಕರು, ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಮುಂತಾಗಿ ಎಲ್ಲಾ ಕ್ಷೇತ್ರದ ಜನರು ಸಹ ಕರಿಸಬೇಕೆಂದು ಕೋರಿದ್ದಾರೆ.