ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ಏಮ್ಸ್ ಸಂಸ್ಥೆಯ ಕುರಿತು ಚರ್ಚಿಸಲು ಕಲ್ಯಾಣ ಕರ್ನಾಟಕ ಪ್ರದೇಶದ ಸಚಿವರ, ಸಂಸದರ, ಶಾಸಕರ ಸಭೆ ಕರೆಯಲಾಗುವುದು ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲಬುರಗಿಯು ಕಲ್ಯಾಣ ಕರ್ನಾಟಕ ಪ್ರದೇಶದ ವಿಭಾಗೀಯ ಕೇಂದ್ರವಾಗಿದ್ದು ಏಮ್ಸ್ ಸಂಸ್ಥೆಗೆ ಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಏಮ್ಸ್ ಸಂಸ್ಥೆಯನ್ನು ಬೇರೆಡೆ ವರ್ಗಾಯಿಸದೇ ಕಲಬುರಗಿಯಲ್ಲಿಯೇ ಸ್ಥಾಪಿಸಲು ಹಾಗೂ ಅದರಿಂದ ಆಗುವ ಲಾಭಗಳ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲು ಈ ಭಾಗದ ಎಲ್ಲ ಸಚಿವರು, ಸಂಸದರ, ಶಾಸಕರ ಸಭೆ ಕರೆದು ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ಮೇಲಾಗಿ ಇಲ್ಲಿಯೇ ಈಗ ಇಎಸ್‌ಐಸಿ ಆಸ್ಪತ್ರೆ ಇರುವುದರಿಂದ ಅದನ್ನೇ ಏಮ್ಸ್ ಸಂಸ್ಥೆಯಾಗಿ ಮೇಲ್ದರ್ಜೆಗೆ ಏರಿಸುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯು ತಪ್ಪಿದಂತಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯ ಎಲ್ಲ ಸಚಿವರನ್ನು, ಸಂಸದರನ್ನು ಮತ್ತು ಶಾಸಕರನ್ನು ಸಂಪರ್ಕಿಸಿ ಸಭೆ ಕರೆದು ಆದಷ್ಟು ಬೇಗ ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದುಕೊಂಡು ಹೋಗಿ ವಸ್ತುಸ್ಥಿತಿಯನ್ನು ವಿವರಿಸಿ ಏಮ್ಸ್ ಸಂಸ್ಥೆಯನ್ನು ಕಲಬುರಗಿಯಲ್ಲಿಯೇ ಸ್ಥಾಪಿಸಲು ಒತ್ತಾಯಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.