ವಾಡಿ: ಕಾಂಗ್ರೆಸ್ ಹಿರಿಯ ನಾಯಕ, ಬೌದ್ಧ ಚಿಂತಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜಕೀಯ ವಿರೋಧಿಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಮತ್ತು ಖರ್ಗೆ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಬೌದ್ಧ ಸಮಾಜ ಒತ್ತಾಯಿಸಿದೆ.
ಶುಕ್ರವಾರ ಸ್ಥಳೀಯ ಠಾಣೆಯ ಪೊಲೀಸ್ ಅಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರ ರವಾನಿಸಿರುವ ಬೌದ್ಧ ಸಮಾಜದ ಸಹ ಕಾರ್ಯದರ್ಶಿ ಶರಣಬಸು ಸಿರೂರಕರ, ಕೇಂದ್ರ ಸರಕಾರದಲ್ಲಿ ಸಚಿವರಾಗಿ ಮತ್ತು ವಿಪಕ್ಷದ ನಾಯಕರಾಗಿ ಪ್ರಜಾಪ್ರಭುತ್ವ ರಕ್ಷಣೆಗೆ ಸಂಸತ್‌ನಲ್ಲಿ ಹೋರಾಟ ನಡೆಸಿರುವ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದಾರೆ.
ಸಂವಿಧಾನಬದ್ಧವಾಗಿ ಆಡಳಿತ ಪಕ್ಷದ ಲೋಪಗಳನ್ನು ಎತ್ತಿ ತೋರಿಸಿದ್ದಾರೆ. ದೇಹಲಿಯಲ್ಲಿ ಮನುವಾದಿಗಳು ಹಾಡುಹಗಲೇ ಸಂವಿಧಾನದ ಪ್ರತಿಗಳನ್ನು ಸುಟ್ಟಾಗ ಕೋಮು ಶಕ್ತಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದರೆ. ಓರ್ವ ಬೌದ್ಧ ಅನುಯಾಯಿಯಾಗಿ ಮತ್ತು ಸಂವಿಧಾನಿಕ ಆಶಯಕ್ಕೆ ಪೂರಕವಾಗಿ ಸನತನವಾದವನ್ನು ಬಲವಾಗಿ ಖಂಡಿದ್ದಾರೆ. ರೈತ ವಿರೋಧಿ ಮೋದಿ ಆಡಳಿತವನ್ನು ಟೀಕಿಸಿದ್ದಾರೆ. ಇದನ್ನು ಸಹಿಸದ ಸಂಘಪರಿವಾರದ ಕಿಡಿಗೇಡಿಗಳು ಖರ್ಗೆ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ ಬೆದರಿಕೆಯೊಡ್ಡಿದ್ದಾರೆ.
ತಕ್ಷಣ ಆರೋಪಿಗಳು ಸೆನೆಮನೆ ಸೇರಬೇಕು. ಸರಕಾರ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸದಿದ್ದರೆ ದಲಿತರು ಬೀದಿಗಿಳಿದು ಉಗ್ರ ಹೋರಾಟಕ್ಕೆ ಸಿದ್ಧರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬೌದ್ಧ ಸಮಾಜದ ಮುಖಂಡರಾದ ವಿಜಯಕುಮಾರ ಸಿಂಗೆ, ರಮೇಶ ಎಸ್.ಬಡಿಗೇರ ಹಾಗೂ ಮತ್ತಿತರತು ಮನವಿ ಸಲ್ಲಿಸುವ ನಿಯೋಗದಲ್ಲಿ ಇದ್ದರು.