ಕಲಬುರಗಿ: ನಗರ ಹೊರ ವಲಯದ ಕೆಸರಟಗಿ ಬಳಿ ನಿರ್ಮಿಸಿರುವ ವಾಲ್ಮೀಕಿ ಅಂಬೇಡ್ಕರ್ ಆವಾಸ್ ಯೋಜನೆಯಡಿಯ ಆಶ್ರಯ ಮನೆಗಳು ಬಡ ಎಸ್‌ಸಿ, ಎಸ್ಟಿ ಜನರಿಗೆ ಹಂಚಿಕೆ ಮಾಡದೆ ಹಾಗೆಯೇ ಬಿಟ್ಟಿರುವುದರಿಂದ ಪಾಳು ಬಿದ್ದಂತಾಗಿವೆ. ಹೀಗಾಗಿ ಈ ಆಶ್ರಯೆಯ ಮನೆಗಳು ಕೂಡಲೇ ನೈಜ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಹಸ್ತಾಂತರಿಸಬೇಕು ಎಂದು ಕಲ್ಯಾಣ ಕರ್ನಾಟಕ ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
೧೯೯೫-೯೬ನೇ ಸಾಲಿನಲ್ಲಿ ಕರ್ನಾಟಕ ಕೊಳಗೇರಿ ಅಭೀವೃದ್ಧಿ ಮಂಡಳಿ ವತಿಯಿಂದ ಈ ಆಶ್ರಯ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಇಲ್ಲಿಯವರೆಗೆ ಯಾವೊಬ್ಬ ನಿಜ ಫಲಾನುಭವಿಗೆ ಹಂಚಿಕೆ ಮಾಡದೇ ಸಂಭಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ಈ ಮನೆಗೆಳು ಹಂದಿ, ನಾಯಿ, ಕುರಿ, ದನಗಳು ವಾಸಿಸುವಂತಾಗಿದೆ. ಕೆಲೆವೊಂದು ಮನೆಗಳು ಬಿರುಕು ಬಿಟ್ಟು ಅವಸಾನ ತಲುಪಿವೆ. ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದ್ದು ಆ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೂಡಲೇ ಜಿಲ್ಲಾಧಿಕಾರಿಗಳು ಈ ೫೨ ಮನೆಗಳನ್ನು ಸಂಬಂಧಿಸಿದ ಬಡ ಎಸ್‌ಸಿ, ಎಸ್ಟಿ ಕುಟುಂಬಗಳಿಗೆ ಹಸ್ತಾಂತರಿಸಿ ಅವರಿಗೆ ವಾಸ ಮಾಡಲು ಹಕ್ಕುಪತ್ರ ನೀಡಬೇಕು. ಇಲ್ಲದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಎದುರು ಉವಾಸ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಕಲ್ಯಾಣ ಕರ್ನಾಟಕ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೈಯಾಳಕರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಹಿರಿಯ ಉಪಾಧ್ಯಕ್ಷ ನಾಗಪ್ಪ ಆರ್.ಟೈಗರ್, ಕರ್ನಾಟಕ ಕಾರ್ಮಿಕ ಸೇನೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜಕುಮಾರ ಬಿ.ಶಿವನೂರ, ರಮೇಶ್ ಸ್ವಾಮಿ, ನವೀನ್ ಅಲೇಗಾಂವ್, ರಾಜು ಕಣಸೂರ, ಶಿವಶಂಕರ್ ಎನ್.ಖೇಳಗಿ, ಗೌರೀಶ್ ಶೆಟ್ಟಿ, ವಿರೇಶ್‌ಪ್ರಜಾನಾ ಬೇಗಂ, ಅಬ್ದುಲ್ ಜಾವೀದ್, ಜಾವೀದ್‌ಖಾನ್, ಮುಲ್ಲಾ ಕಟ್ಟಿಮನಿ, ಅಬ್ದುಲ್ ವಾಜೀದ್ ಸೇರಿದಂತೆ ಇತರರು ಇದ್ದರು.