ವಾಡಿ: ತುಂಬಿ ಹರಿಯುವ ನದಿಯ ಮೇಲೆ ಅಪಾಯದ ಸೇತುವೆ. ಉಕ್ಕೇರಿದ ಪ್ರವಾಹಕ್ಕೆ ತತ್ತರಿಸಿ ತುಂಡಾದ ಸೇತುವೆ ತಡೆಗೋಡೆಗಳು. ಶಿಥಿಲಾವಸ್ಥೆಗೆ ಜಾರಿದ ಸುರಕ್ಷತೆಯಿಲ್ಲದ ಬೋಳು ಸೇತುವೆ. ಐವತ್ತು ಅಡಿ ಅಗಲದ ರಾಷ್ಟ್ರೀಯ ಹೆದ್ದಾರಿಗೆ ಹತ್ತಡಿ ಅಗಲದ ಸೇತುವೆ ನಿರ್ಮಿಸಿದ್ದು, ಪ್ರಯಾಣಿಕರಲ್ಲಿ ಹುಟ್ಟಿಸಿದೆ ಪ್ರಾಣ ಭೀತಿ. ಸೇತುವೆ ಮೇಲೆ ವಾಹನಗಳು ಸಂಚರಿಸುತ್ತವೋ ಅಥವ ಯಮರಾಯ ನಡೆದಾಡುತ್ತಿದ್ದಾನೋ ಎಂಬ ಆತಂಕಕ್ಕೆ ಅಂತ್ಯವಿಲ್ಲದಂತಾಗಿದ್ದು, ಜನಾಕ್ರೋಶ ಕಲಬುರಗಿಯ ಒಬ್ಬ ಜನಪ್ರತಿನಿಧಿಯ ಕಿವಿಗೆ ತಲುಪದಿರುವುದೂ ಕೂಡ ದೊಡ್ಡ ದುರಂತವೇ ಸರಿ..!
ಕಲಬುರಗಿ-ವಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ-೧೫೦ಕ್ಕೆ ಸಂಬಂದಿಸಿದಂತೆ ಮಾಲಗತ್ತಿ ಸಮೀಪದ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕಿರಿದಾದ ಸೇತುವೆಗೆ ಹಲವು ದಶಕಗಳ ಇತಿಹಾಸವಿದೆ. ಪ್ರಸಕ್ತ ಸಾಲಿನಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಸಿಲುಕಿ ಸೇತುವೆ ಸಂಪೂರ್ಣ ನಲುಗಿಹೋಗಿದೆ. ಸೇತುವೆ ತಡೆ ಕಂಬಗಳು ಮುರಿದು ಬಿದ್ದಿವೆ. ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ಹೆಚ್ಚಿದ್ದು, ಭಾರ ತಾಳಲಾಗದೆ ಸೇತುವೆ ಶೇಕ್ ಆಗುತ್ತಿದೆ. ಬ್ರಿಡ್ಜ್ ಮೇಲಿನ ರಸ್ತೆಯಲ್ಲಿ ತೆಗ್ಗುಗಳು ಬಿದ್ದು ವಾಹನ ಅಪಘಾತಕ್ಕೆ ಕಾರಣವಾಗುತ್ತಿದೆ. ಹಲವು ಗೂಡ್ಸ್ ವಾಹನಗಳು ಆಯತಪ್ಪಿ ನದಿಯೊಳಗೆ ಬಿದ್ದಿವೆ. ರಸ್ತೆ ಕಿರಿದಾಗಿರುವುದನ್ನು ಗಮನಿಸದೆ ಬೈಕ್ ಸವಾರರು ಸೇತುವೆಯ ಕಂಬಗಳಿಗೆ ಡಿಕ್ಕಿ ಹೊಡೆದು ಪ್ರಾಣ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ನಿರಂತರ ವಾಹನ ಸಂಚಾರದಿಂದ ಈ ಸೇತುವೆ ನಿಧಾನವಾಗಿ ಕುಸಿಯುತ್ತಿದೆ.
ಬೀದರ ಜಿಲ್ಲೆಯ ಬಸವಕಲ್ಯಾಣದಿಂದ ಆಂದ್ರದ ಗುತ್ತಿ ವರೆಗೆ ಅಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-೧೫೦ ಚಿತ್ತಾಪುರ ತಾಲೂಕು ಮಾರ್ಗವಾಗಿ ಹಾದುಹೋಗಿದೆ. ಪರಿಣಾಮ ಹಗಲು ರಾತ್ರಿಯನ್ನೆದೆ ನೂರಾರು ವಾಹನಗಳ ಓಡಾಟಕ್ಕೆ ಮಿತಿಯಿಲ್ಲ. ಅವಸರದ ವಾಹನ ಸಂಚಾರ ಸೇತುವೆಯ ತಡಗೋಡೆಗಳನ್ನೇ ನಾಶ ಮಾಡಿದೆ. ಕಾಗಿಣಾ ನದಿಯ ಈ ಸೇತುವೆ ೧೯೬೮ರಲ್ಲಿ ನಿರ್ಮಿಸಲಾಗಿದೆ. ಪ್ರತಿವರ್ಷದ ನಿರ್ವಹಣೆಯ ಜವಾಬ್ದಾರಿಯಿಂದ ಹೆದ್ದಾರಿ ಪ್ರಾಧೀಕಾರ ನುಣುಚಿಕೊಂಡಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಭೀಮಾನದಿಯ ಭೀಕರ ಪ್ರವಾಹಕ್ಕೆ ಕಲ್ಯಾಣ ನಾಡಿನ ಹಲವು ಸೇತುವೆಗಳು ಜಖಂ ಗೊಂಡಿವೆ.
ಹಲವು ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ನೆರೆಗೆ ಸಿಕ್ಕು ತತ್ತರಿಸಿದ ಸೇತುವೆಗಳಲ್ಲಿ ಚಿತ್ತಾಪುರ ತಾಲೂಕಿನ ಮಾಲಗತ್ತಿ ಸಮೀಪದ ಈ ಕಾಗಿಣಾ ಸೇತುವೆಯೂ ಕೂಡ ಒಂದಾಗಿದೆ. ಒಟ್ಟಾರೆ ವಾಹನ ಸಂಚಾರಕ್ಕೆ ಅಪಾಯದ ಮುನ್ಸೂಚನೆ ನೀಡುತ್ತಿರುವ ಈ ಸೇತುವೆ ಡೇಂಜರ್ ಸಿಗ್ನಲ್ ನೀಡಿದ್ದಾಗಿದೆ. ಸೇತುವೆ ಪ್ರಯಾಣಿಕರ ಜೀವಬಲಿ ಕೇಳುವ ಮುಂಚೆ ಹೆದ್ದಾರಿ ಪ್ರಾಧೀಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ. ರಾಷ್ಟ್ರೀಯ ಹೆದ್ದಾರಿಗೆ ತಕ್ಕಂತೆ ಸೇತುವೆಯ ಅಗಲೀಕರಣಕ್ಕೆ ಮುಂದಾಗಬೇಕಿದೆ.
ಮಾಲಗತ್ತಿ ಸಮೀಪ ಕಾಗಿಣಾ ಸೇತುವೆ ಜಖಂ ಗೊಂಡಿರುವುದು ನಮ್ಮ ಗಮನಕ್ಕಿದೆ. ಸೇತುವೆ ರಿಪೇರಿಗಾಗಿ ಫೆ.೧೫ ರಂದು ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ಸೇತುವೆಗೆ ತಡೆಗೋಡೆಗಳನ್ನು ನಿರ್ಮಿಸಿ ಸುರಕ್ಷತೆ ಕಾಪಾಡಲಾಗುವುದು. ಅಲ್ಲದೆ ಸೇತುವೆ ಕಿರಿದಾಗಿದ್ದರಿಂದ ಅಗಲೀಕರಣ ಬೇಡಿಕೆಯಿಟ್ಟು ವರ್ಷದ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿದೆ. ೬೦ ಕೋಟಿ ರೂ. ವೆಚ್ಚದ ಕ್ರೀಯಾಯೋಜನೆ ಸಿದ್ಧಪಡಿಸಿ ಈಗಾಗಲೇ ಸರಕಾರಕ್ಕೆ ಕಳುಹಿಸಿಕೊಟ್ಟಿದ್ದೇವೆ. -ಪಿ.ಎಸ್.ರೆಡ್ಡಿ. ಎಇಇ ರಾಷ್ಟ್ರೀಯ ಹೆದ್ದಾರಿ ಪ್ರಾಧೀಕಾರ. ಕಲಬುರಗಿ.