ವಾಡಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಭಾಯ್ ಭಾಯ್ ಗ್ರೂಪ್ ವತಿಯಿಂದ ಏರ್ಪಡಿಸಲಾಗಿದ್ದ ಸಾರ್ವಜನಿಕರಿಗೆ ಖುರ್‌ಆನ್ ಗ್ರಂಥ ಪ್ರತಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಸಮಾರಂಭ ಉದ್ದೇಶಿಸಿ ಮಾತನಾಡಿದ ಇಸ್ಲಾಂ ವಿದ್ವಾನ ಶೇಖ ಶಫಿ, ಒಂದು ಕೋಮಿನ ಹಿತಾಸಕ್ತಿಯ ಬದಲು ಧರೆಯ ಮೇಲಿನ ಎಲ್ಲಾ ಜೀವರಾಶಿಗಳಿಗೆ ಮಾನವೀಯತೆಯನ್ನು ಬೋಧಿಸುವ ಕಾರಣಕ್ಕೆ ಖುರ್‌ಆನ್ ವಿಶ್ವದ ವಿವಿಧ ದೇಶಗಳಲ್ಲಿ ಶ್ರೇಷ್ಠ ದಿವ್ಯ ಗ್ರಂಥ ಎಂದು ಕರೆಯಿಸಿಕೊಂಡಿದೆ. ಇಲ್ಲಿ ಧರ್ಮ ದ್ರೋಹಿ ಸಂಶಯಾಸ್ಪದ ಚಿಂತನೆಗಳಿಗೆ ಜಾಗವಿಲ್ಲ. ಯಾವೂದೇ ಧರ್ಮದ ವಿರುದ್ಧ ಹೇಳಿಕೆಗಳಿಲ್ಲ. ಎಲ್ಲರನ್ನೂ ಗೌರವಿಸುವ ಪ್ರೀತಿಸುವ ಹಾಗೂ ಸಂಕಷ್ಟದಲ್ಲಿ ನೆರವಾಗಬೇಕು ಎನ್ನುವ ಮನುಷ್ಯ ಚಿಂತನೆಗಳಿವೆ. ಪ್ರತಿಯೊಬ್ಬರೂ ಇದನ್ನು ಅಧ್ಯಯನ ಮಾಡುವ ಜತೆಗೆ ಮುಕ್ತವಾಗಿ ಚರ್ಚೆ ನಡೆಸಬಹುದು ಎಂದರು.
ಒಂದೊಂದು ಧರ್ಮಕ್ಕೆ ಒಂದೊಂದು ಸಿದ್ಧಾಂತ ಚಿಂತನೆಗಳಿರುವ ಹಾಗೆ ಇಸ್ಮಾಂ ಧರ್ಮಕ್ಕೂ ಖುರ್‌ಆನ್ ಎಂಬ ತನ್ನದೇಯಾದ ಧರ್ಮ ಗ್ರಂಥವಿದೆ ಎಂದು ಸಹಜವಾಗಿ ಎಲ್ಲರೂ ಭಾವಿಸಿದ್ದಾರೆ. ಈ ನಕರಾತ್ಮಕ ಆಲೋಚನೆಗಳಿಗೆ ವ್ಯತಿರಿಕ್ತವಾಗಿ ಖುರ್‌ಆನ್ ಚಿಂತನೆಗಳಿವೆ ಎಂಬ ಸತ್ಯ ಇದನ್ನು ಓದಿದವರಿಗೆ ಮಾತ್ರ ಅರ್ಥವಾಗುತ್ತದೆ. ಖುರ್‌ಆನ್ ಭಯೋತ್ಪಾದನೆಯನ್ನು ಬೋಧಿಸುವುದಿಲ್ಲ ಮತ್ತು ಬೆಂಬಲಿಸುವುದೂ ಇಲ್ಲ. ಭೂಲೋಕದ ಜೀವನ ಮೋಸದಿಂದ ಕೂಡಿದ್ದು, ನರಕದಿಂದ ದೂರ ಇರಲು ಬಯಸಿ ಬದುಕುವವರ ಜೀವನ ಸಫಲತೆ ಕಾಣುತ್ತದೆ.
ಪ್ರತಿಯೊಂದು ಜೀವಿಗೂ ಮರಣವಿದೆ. ಬದುಕಿರುವವರೆಗೂ ಪರಸ್ಪರ ಒಂದೇ ಕುಟುಂಬದವರಂತೆ ಸಹೋದರತೆಯಿಂದ ಬದುಕುವುದನ್ನು ಖುರ್‌ಆನ್ ಕಲಿಸುತ್ತದೆ. ಖುರ್‌ಆನ್ ಸಂದೇಶಗಳು ಸರಿಯೋ ತಪ್ಪೋ ಎಂಬುದನ್ನು ಓದಿ ಜನರು ನಿರ್ಧಾರಕ್ಕೆ ಬರಲಿ ಎಂಬ ಕಾರಣಕ್ಕೆ ಜಗತ್ತಿನ ನೂರಾರು ಭಾಷೆಗಳಲ್ಲಿ ಖುರ್‌ಆನ್ ಅನುವಾದಿಸಿ ಪ್ರಕಟಿಸಲಾಗಿದ್ದಲ್ಲದೆ, ಉಚಿತವಾಗಿಯೂ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.
ಬೌದ್ಧ ಸಮಾಜದ ಖಜಾಂಚಿ ಚಂದ್ರಸೇನ ಮೇನಗಾರ, ಹಿರಿಯರಾದ ಸದಾಶಿವ ಕಟ್ಟಿಮನಿ ಹಾಗೂ ಇಸ್ಲಾಂ ವಿದ್ವಾನ ಶೇಖ ಬದಿಯೂಝಮಾ ಮಾತನಾಡಿದರು. ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ, ಭಾಯ್ ಭಾಯ್ ಗ್ರೂಪ್ ಅಧ್ಯಕ್ಷ ಶಮಶೀರ್ ಅಹ್ಮದ್, ಮಹ್ಮದ್ ಇರ್ಫಾನ್, ಜಾಮಿಯಾ ಮಸೀದಿ ಸಮೀತಿ ಅಧ್ಯಕ್ಷ ಮಹ್ಮದ್ ಜಾಫರ್, ಡಾ.ಸಂಜಯ ಮುನ್ನೋಳಿ, ಡಾ.ಶಿವಾನಂದ ಇಂಗಳೇಶ್ವರ, ಶೇಖ ಅನ್ವರ್ ಖಾನ್, ಇಕ್ಬಾಲ್ ಆಜಾದ್, ಫೆರೋಜ್ ಖಾನ್, ಈಶ್ವರ ಅಂಬೇಕರ್, ವಿಠ್ಠಲಸಿಂಗ್, ಶರಣಪ್ಪ ವಗ್ಗರ ಹಳಕರ್ಟಿ, ಶರಣಬಸು ಸಿರೂರಕರ, ರಮೇಶ ಬಡಿಗೇರ, ವಿಜಯಕುಮಾರ ಸಿಂಗೆ, ಝಹೂರ್ ಖಾನ್, ಸಲ್ಮಾನ್ ಪಟೇಲ, ಖಾದೀರ್, ರಾಜಾ ಪಟೇಲ, ಅಬೀದ್, ಇಮ್ರಾನ್, ಸೋಹಿಲ್, ಆಕಾಶ, ರಾಜು ಕೋಲಿ, ಫ್ರಾಂಕ್ಲೀನ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಮುಸ್ಲೀಮೇತರ ನೂರಾರು ಜನರಿಗೆ ಕನ್ನಡ, ಇಂಗ್ಲೀಷ್, ತೆಲಗು, ಮರಾಠಿ ಭಾಷೆಯಲ್ಲಿ ಅನುವಾದಗೊಂಡ ಖುರ್‌ಆನ್ ಗ್ರಂಥಗಳನ್ನು ಉಚಿತವಾಗಿ ವಿತಿರಿಸಲಾಯಿತು.