ಸುರಪುರ: ತಾಲೂಕಿನ ವಾಗಣಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ತಳವಾರಗೇರಾ ಗ್ರಾಮದಲ್ಲಿ 2019-20 ಮತ್ತು 2020-21ನೇ ಸಾಲಿನ ಹಣಕಾಸು ಯೋಜನೆ ಅಡಿಯಲ್ಲಿ ನಡೆದ ಒಂಬತ್ತು ಕಾಮಗಾರಿಗಳು ಅವ್ಯವಹಾರಗೊಂಡಿದ್ದು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವವರೆಗೆ ಪ್ರತಿಭಟನೆ ಮುಂದುವರೆಸುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿಯಿಂದ ನಗರದ ತಾಲೂಕು ಪಂಚಾಯತಿ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿ,ತಳವಾರಗೇರಾ ಗ್ರಾಮದಲ್ಲಿ ಒಟ್ಟು ಒಂಬತ್ತು ಕಾಮಗಾರಿಗಳ ಹೆಸರಲ್ಲಿ ಭ್ರಷ್ಟಾಚಾರ ನಡೆದಿದೆ,ಇದಕ್ಕೆ ಕಾರಣರಾದ ಇಒ ನೋಡಲ್ ಅಧಿಕಾರಿ ಪಿಡಿಒ ಹಾಗು ಎಮ್.ಬಿ ರಿಕಾರ್ಡ್ ಮಾಡಿದ ಜೆಇ ಇವರೆಲ್ಲರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಯುವ ವೇದಿಕೆಯಿಂದ ಶ್ರೀ ರೇಣುಕಾಚಾರ್ಯ ಜಯಂತಿ
ನಂತರ ಧರಣಿ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ಅವರು ಮಾತನಾಡಿ,29ನೇ ತಾರೀಖಿನವರೆಗೂ ಅವಕಾಶವನ್ನು ನೀಡಿ ಖುದ್ದಾಗಿ ವಾಗಣಗೇರಾ ಗ್ರಾಮ ಪಂಚಾಯತಿಗೆ ಹೋಗಿ ಪರಿಶೀಲನೆ ನಡೆಸಿ ಭ್ರಷ್ಟಾಚಾರ ನಡೆದಿರುವುದು ಕಂಡುಬಂದಲ್ಲಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲು ವರದಿ ನೀಡಲಾಗುವುದು ಎಂದು ತಿಳಿಸಿದರು.
ನಂತರ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ಮಾತನಾಡಿ,ಇಒ ಅವರು ಭರವಸೆ ನೀಡಿದಂತೆ ಇದೇ 29ನೇ ತಾರೀಖಿನೊಳಗೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮತ್ತೆ ತಾಲೂಕು ಪಂಚಾಯತಿ ಕಚೇರಿ ಬಾಗಿಲಿಗೆ ಮುಳ್ಳು ಬೇಲಿ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ ನಂತರ ಮನವಿ ಸಲ್ಲಿಸಿ ಧರಣಿ ನಿಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಶಿವಲಿಂಗ ಹಸನಾಪುರ ಭೀಮಣ್ಣ ನಾಟೇಕರ್ ಚೌಡಪ್ಪ ಯಡಹಳ್ಳಿ ಹಣಮಂತಪ್ಪ ರೋಜಾ ಶೇಖರ ಬಡಿಗೇರ ರಮೇಶ ಬಡಿಗೇರ ಖಾಜಾ ಅಜ್ಮೀರ್ ಎಮ್.ಪಟೇಲ್ ಬಾಲರಾಜ ಖಾನಾಪುರ ಚನ್ನಪ್ಪ ದೇವಾಪುರ ಮಲ್ಲಪ್ಪ ದೊಡ್ಮನಿ ಶರಣಪ್ಪ ಪರಸನಹಳ್ಳಿ ಸೇರಿದಂತೆ ಅನೇಕರಿದ್ದರು.