ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕಾಯಕದ ಶರಣರ ಜಯಂತ್ಯುತ್ಸವ ನಿಮಿತ್ತ ಕಾಯಕದ ಶರಣರು ವಚನ ಚಳವಳಿ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಜರುಗಿತು.
ಸಮಾರಂಭದ ಉದ್ಘಾಟನೆಯನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ದಯಾನಂದ ಅಗಸರ್ ಅವರು ನೇರವೇರಿಸಿ ಮಾತನಾಡುತ್ತ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಸದಾ ಕ್ರಿಯಾಶೀಲತೆಯಿಂದ ಹಲವಾರು ಪಠ್ಯೇತರ ಚಟುವಟಿಕೆ ಮಾಡುತ್ತ್ತಿದೆ. ಸಮಾಜ ವಿಜ್ಞಾನ ವಿಭಾಗಗಳಲ್ಲೂ ಇಂತಹ ವಿಚಾರ ಸಂಕಿರಣಗಳು ನಡೆಯಬೇಕು. ಇದರಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಬೋಧಕ ಸಿಬ್ಬಂದಿಯವರಿಗೆ ಜ್ಞಾನ ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತದೆ. ವಿದ್ವಾಂಸರು, ತಜ್ಞರು, ಸಂಶೋಧಕರು ನೀಡಿದ ವಿಚಾರ ವಿದ್ಯಾರ್ಥಿಗಳಿಗೆ ತಲುಪಬೇಕು, ಅಂದಾಗ ಅದು ಸಾರ್ಥಕವಾಗುತ್ತದೆ. ಶರಣ ಮಡಿವಾಳ ಮಾಚಿದೇವರ ಚಿಂತನೆಗಳು ಇಂದಿನ ಪ್ರಸ್ತುತ್ತ ದಿನಗಳಲ್ಲಿ ಅವಶ್ಯವಾಗಿದೆ ಎಂದರು.
ಭಕ್ತಿಯ ಹೊನಲು ಹರಿಸಿದ ವಚನ ಮಾಧುರ್ಯ
ಶರಣರ ಕಾಯಕ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಮೂಡಿ ಬಂದರೆ ವಿಶ್ವವಿದ್ಯಾಲಯದ ಕೆಲಸ ಮಾತ್ರ ಸಾರ್ಥಕಗೊಂಡತ್ತಾಗುತ್ತದೆ. ನಾಡಿನ ಖ್ಯಾತ ಸಾಹಿತಿಗಳಾದ ಡಾ. ಚನ್ನಪ್ಪ ಕಟ್ಟಿಯವರು ಆಶಯ ಭಾಷಣ ಮಾಡುತ್ತ ಕನ್ನಡ ಅಧ್ಯಯನ ಸಂಸ್ಥೆ ಯಾವಾಗಲೂ ಹೊಸ ಆಶಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದೆ. ೧೨ನೇ ಶತಮಾನದ ಶರಣ ಚಳವಳಿ ಚಿಂತನೆ ಅತ್ಯಂತ ಸಮಾಜ ಮುಖಿಯಾಗಿದ್ದು ವ್ಯಸ್ತುನಿಷ್ಠವಾಗಿ, ಚಾರಿತ್ರಿಕವಾಗಿ ಮಹತ್ವದ್ದಾಗಿವೆ. ಶರಣರ ಚಳವಳಿ ಜನಪರ ಜೀವಪರ ಚಿಂತನೆಯ ಪ್ರತೀಕವಾಗಿತ್ತು. ಅದು ಆ ಕಾಲದಲ್ಲಿ ದೊಡ್ಡ ಸಂಚಲನವನ್ನು ಉಂಟುಮಾಡಿತ್ತು. ಸನಾತನರು ತಮಗೊಂದು ಬಟ್ಟೆ, ಶಾಸ್ತ್ರಕೊಂದು ಬಟ್ಟೆ ಎನ್ನುವಂತೆ ಮಾಡುತ್ತ ಬಂದಿದನ್ನು ಶರಣರು ಖಂಡಿಸಿದರು. ವಚನ ಚಳುವಳಿ ಲಿಂಗ ಸಮಾನತೆಗೆ ನಡೆದ ಹೋರಾಟವೆಂದು ಅಭಿಪ್ರಾಯಪಟ್ಟರು.
ಶರಣ ಕಾಯಕದ ಪ್ರಜ್ಞೆಯನ್ನು ಕುರಿತು ಒಂದು ದಿನದ ಮಟ್ಟಿಗೆ ಚರ್ಚೆ ನಡೆಯುತ್ತಿರುವುದು ಸ್ವಾಗತಾರ್ಹ. ಇಂದಿನ ವಿಚಾರ ಸಂಕಿರಣ ವಚನಕಾರರ ಹೆಸರುಗಳು ಕಾಯಕ ಸೂಚಿಸುತ್ತದೆ. ಅವರ ಕಾಯಕದ ರೀತಿ ನಿಷ್ಠೆ ಪ್ರಮಾಣಿಕತೆ ತಮ್ಮ ಹೆಸರನ್ನು ಹೇಳಿಕೊಳ್ಳುವಾಗ ವೃತ್ತಿಯನ್ನು ನಿರ್ಭಯವಾಗಿ ಹೋಳಿಕೊಳ್ಳುತ್ತಾರೆ. ಆದರೆ ಇಂದು ನಾವು ವೃತ್ತಿ ಹೆಸರು ಹೇಳುವಾಗ ಕೀಳಿರಿಮೆ ಎಂದು ಭಾವಿಸುತ್ತೇವೆ. ಕಾಯಕ ಜೀವಿಗಳು ಜಾತಿಯನ್ನು ನಿರಾಕರಣೆ ಮಾಡುವ ಹೀನ್ನಲೆಯಲ್ಲಿ ಸಂಘಟಾನ್ಮಕವಾಗಿ ತೊಡಗಿಸಿಕೊಂಡರು. ಜನ ಸಾಮಾನ್ಯರಲ್ಲಿ ಉಂಟಾದ ಸಾಮಾಜಿಕ ಅಸ್ಥಿರತೆ, ರಾಜಕೀಯ ಅಸ್ಥಿರತೆಯಿಂದಾಗಿ ಚಳವಳಿ ಪ್ರಬಲಗೊಂಡಿತು. ಯಾವಾಗ ಪ್ರಭುತ್ವದವರು ದುರ್ಬಲರಾಗುತ್ತಾರೊ ಆವಾಗ ಆಂತರಿಕ ಪ್ರತಿಭಟನೆ ಅನಾಚಾರ, ದೌರ್ಜನ್ಯಗಳು ನಡೆಯುತ್ತ ಬಂದವು. ವಚನ ಚಳವಳಿಯನ್ನು ಬೇರೆ ಬೇರೆ ನೆಲೆಯಲ್ಲಿ ನೋಡುವಂತಹ ಮನೋಭಾವ ಬೆಳೆಸಿಕೊಳ್ಳಬೇಕು. ಶರಣ ಸಾಮಾಜಿಕ ಸಾಂಸ್ಕೃತಿಕ ಚಿಂತನೆ ಪುನಃ ಅವಲೋಕಿಸಬೇಕಾಗಿದೆ. ದಾಸೋಹ ಪರಿಕಲ್ಪನೆ, ಕಾಯಕ ಪರಿಕಲ್ಪನೆ ನಾವು ರೂಢಿಸಿಕೊಳ್ಳಬೇಕಾಗಿದೆ.
ಉಸ್ತಾದ ಮಂಜಿಲ್‌ನಲ್ಲಿ ಭಾವೈಕ್ಯತೆ ಮೆರೆದ ಹೋಳಿ
ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು, ಕಲಾನಿಕಾಯದ ಡೀನರಾದ ಪ್ರೊ. ಎಚ್.ಟಿ. ಪೋತೆ ಅವರ ಮಾತನಾಡುತ್ತ, ’ಸಮಾಜದಲ್ಲಿ ಜಾತಿಯತೆಯನ್ನು ಶ್ರೇಷ್ಠೀಕರಿಸುವಂತಹ ಹುನ್ನಾರ ತೆರೆಮರೆಯಲ್ಲಿ ನಡೆಯುತ್ತಿದೆ. ಹಿಂದಿನ ಕಾಲಘಟ್ಟದಲ್ಲಿ ಶರಣರು ಎಷ್ಟೊಂದು ಸರಳ ಸಜ್ಜನರಾಗಿದ್ದರು ಎಂಬುದಕ್ಕೆ ವೃತ್ತಿ, ಜಾತಿಯನ್ನು ಅಂತ್ಯಂತ ಅಭಿಮಾನದಿಂದ ಹಿಂದೆ ಮುಂದೆ ನೋಡದೆ ಹೇಳಿಕೊಳ್ಳುತ್ತಿದ್ದರು. ವಚನ ಚಳವಳಿಯಲ್ಲಿ ಹಲವಾರು ವಿಧದ ವೃತ್ತಿಯ ಕಾಯಕ ಶರಣರು ಬಸವಣ್ಣನ ಜೊತೆಗಿದ್ದರು. ಶರಣರ ಅನುಭವ ಮಂಟಪದಲ್ಲಿ ಎಲ್ಲ ವರ್ಗದ ವೃತ್ತಿಯ ಕಾಯಕದ ಶರಣರು ಸರಿಸಮಾನವಾಗಿ ಕುಳಿತು ಚರ್ಚೆ ಮಾಡುತ್ತಿದ್ದರು. ಬುದ್ಧನ ನಂತರದಲ್ಲಿ ಅಂತಹದೇ ಚಿಂತನೆ ಮೂಡಿ ಬಂದದ್ದು ೧೨ನೇ ಶತಮಾನದ ಶರಣರ ಕಾಲದಲ್ಲಿ ಎಂಬುದು ಗಮನಾರ್ಹವಾದುದು ಎಂದು ಅಭಿಪ್ರಾಯಪಟ್ಟರು.
ವೇದಿಕೆಯ ಮೇಲೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀ ಶರಣಬಸಪ್ಪ ಕೋಟೆಪ್ಪಗೋಳ್, ಸಿಂಡಿಕೇಟ್ ಸದಸ್ಯರಾದ ಶ್ರೀ ಗಂಗಾಧರ ನಾಯಕ, ವಿದ್ಯಾವಿಷಯಕ ಪರಿಷತ್ ಸದಸ್ಯರಾದ ಪ್ರೊ. ಬಿ.ಎಂ. ಕನ್ನಳ್ಳಿ, ಗೌರವ ಉಪಸ್ಥಿತಿರಿದ್ದರು. ಡಾ. ಎಂ.ಬಿ. ಕಟ್ಟಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ. ಸಿದ್ಧಲಿಂಗ ದಬ್ಬಾ ನಿರೂಪಿಸಿದರು, ಡಾ. ವಸಂತ ನಾಸಿ ವಂದಿಸಿದರು.