ಇಲ್ಲೊಂದು ಅಪರೂಪದ ‘ಮಾದರಿ’ ಮದುವೆ ಸಮಾರಂಭ

1
1065
  • ಶಿವರಂಜನ್ ಸತ್ಯಂಪೇಟೆ

ಕಲಬುರಗಿ: ಸಾಮಾನ್ಯವಾಗಿ ಮದುವೆ ಸಮಾರಂಭ ಎಂದರೆ ಅಲ್ಲಿ ವಾದ್ಯ ಮೇಳಗಳ ಓಲಗಗಳ ಸದ್ದು, ಬೀಗರು-ಬಿಜ್ಜರ, ಬಂಧು-ಬಾಂಧವರ ಓಡಾಟ, ಪೌರೋಹಿತ್ಯ, ಮಂತ್ರ, ತಾಳಿ, ಕಾಲುಂಗರ, ಅಕ್ಕಿ ಕಾಳು, ವರೋಪಚಾರ ಇತ್ಯಾದಿ ವಸ್ತು ವಿಷಯಗಳೇ ಕಣ್ಣಿಗೆ ಗೋಚರಿಸುತ್ತವೆ.

ಆದರೆ ಕಲಬುರಗಿ ನಗರದ ರಾಮ ಮಂದಿರ ಸರ್ಕಲ್ ಬಳಿ ಇರುವ ವೆಂಕಟೇಶ್ವರ ಯರಗೋಳ ಕಲ್ಯಾಣ ಮಂಟಪದಲ್ಲಿ ಇಂದು ಅಪರೂಪದ, ಎಲ್ಲರಿಗೆ ಅನುಕರಣೀಯವಾದ ಮಾದರಿ ಮದುವೆ ಸಮಾರಂಭವೊಂದು ಜರುಗಿತು.

Contact Your\'s Advertisement; 9902492681

ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಹಾಗೂ ಎಸ್‌ಯುಸಿಐ (ಸಿ) ಸ್ಥಳೀಯ ಸಮಿತಿ ಸದಸ್ಯ ಕಾ. ಹಣಮಂತ ಎಸ್.ಎಚ್ ಹಾಗೂ ಎಐಡಿಎಸ್‌ಒ ಹಾಗೂ ಎಸ್‌ಯುಸಿಐ (ಸಿ) ಸ್ಥಳೀಯ ಸಮಿತಿ ಸದಸ್ಯೆ ಕಾ. ಸ್ನೇಹಾ ಕಟ್ಟಿಮನಿ ಇವರ ವಿವಾಹ ಮಹೋತ್ಸವ ಕುಟುಂಬ ಸದಸ್ಯರ ಹಾಗೂ ಹಿರಿ, ಕಿರಿಯರ ಮಧ್ಯೆ ಅತ್ಯಂತ ಸರಳವಾಗಿ ಜರುಗಿತು. ಇದೇ ಜೂನ್ ೨೧ರಂದು ಕಲಬುರಗಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ವಿವಾಹದ ನೋಂದಣಿ ಮಾಡಿಕೊಂಡ ಇವರು ಇಂದು ವಿವಾಹ ಸಂತೋಷ ಕೂಟವನ್ನು ಆಯೋಜಿಸಿದ್ದರು.

ಚಿಕ್ಕ ವಯಸ್ಸಿನಿಂದಲೇ ಪಕ್ಷದ ವಿಚಾರಕ್ಕೆ ಆಕರ್ಷಿತರಾಗಿ ಈಗ ಸಮಾಜದ ಮೂಲಭೂತ ಬದಲಾವಣೆಯೇ ಜೀವನದ ಉದ್ದೇಶವಾಗಿಟ್ಟುಕೊಂಡು ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಇವರು, ಪಕ್ಷದ ಗುರಿಯನ್ನು ತಮ್ಮ ಜೀವನದ ಧ್ಯೇಯವಾಗಿಸಿಕೊಂಡಿದ್ದಾರೆ.
-ಎಚ್.ವಿ. ದಿವಾಕರ, ಎಸ್‌ಯುಸಿ (ಸಿ) ಜಿಲ್ಲಾ ಕಾರ್ಯದರ್ಶಿ

ಎಐಡಿಎಸ್‌ಒ ಮತ್ತು ಎಸ್‌ಯುಸಿ(ಸಿ) ನೇತೃತ್ವದಲ್ಲಿ ಪ್ರತಿ ವರ್ಷ ಮೂರ‍್ನಾಲ್ಕು ಇಂತಹ ಮದುವೆಗಳಾಗುತ್ತಿದ್ದು, ಈ ಮುಂಚೆ ಸಂಘಟನೆಯ ಎಚ್.ವಿ. ದಿವಾಕರ, ಭಗವಂತರೆಡ್ಡಿ ಹಾಗೂ ಸುರೇಶ ಶರ್ಮಾ ಸೇರಿದಂತೆ ಈವರೆಗೆ ಸುಮಾರು ೨೦  ಮದುವೆ ಸಮಾರಂಭಗಳು ಇದೇ ಮಾದರಿಯಲ್ಲಿ ಜರುಗಿವೆ. ಮದುವೆಯಾದವರೆಲ್ಲರೂ ಚೆನ್ನಾಗಿಯೇ ಬಾಳುತ್ತಿದ್ದಾರೆ ಎಂದು ಸಂಘಟನೆಯ ಮಹೇಶಕುಮಾರ ತಿಳಿಸುತ್ತಾರೆ.

ಪರಸ್ಪರ ಪ್ರೀತಿ ಮಾಡಿ ಮನೆಯವರು ಒಪ್ಪುತ್ತಿಲ್ಲ ಎನ್ನುವ ಕಾರಣಕ್ಕೆ ಓಡಿ ಹೋಗುವುದಾಗಲಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಲಿ ನಮ್ಮ ಕಣ್ಣೆದುರೇ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡ ಈ ಸಂಘಟನೆಯವರು ಪ್ರೀತಿಸಿದ ಯುವಕ ಯುವತಿಯರೊಂದಿಗೆ ಮೊದಲು ಕೌನ್ಸೆಲಿಂಗ್ ನಡೆಸಿ ಇವರು ಬದುಕಬಲ್ಲರು ಎಂದು ಮನದಟ್ಟಾದ ಮೇಲೆ ಆ ಕುಟುಂಬದ ಹಿರಿಯರೊಂದಿಗೆ ಮಾತನಾಡಿ, ಮದುವೆಗೆ ಒಪ್ಪಿಸುತ್ತಾರೆ. ಮನೆಯವರೂ ಒಪ್ಪದಿದ್ದಾಗ ಪರಸ್ಪರ ಹುಡುಗ-ಹುಡಗಿ ಗಟ್ಟಿಯಾಗಿ ನಿಂತು ಮದುವೆ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

ಇಲ್ಲಿ ಜಾತಿ, ಧರ್ಮ, ಸಂಪ್ರದಾಯ ಇವ್ಯಾವು ಅಡ್ಡ ಬರುವುದಿಲ್ಲ. ವರದಕ್ಷಿಣೆ, ಸಂಪ್ರದಾಯವಂತೂ ಇಲ್ಲಿ ಸುಳಿಯುವುದೇ ಇಲ್ಲ. ಅಪ್ಪಟ ವೈಜ್ಞಾನಿಕ ರೀತಿಯಲ್ಲಿ ಅತ್ಯಂತ ಸರಳವಾಗಿ ಮದುವೆಗಳು ನಡೆದು ಹೋಗುತ್ತವೆ. 

 -ವಿ.ಜಿ. ದೇಸಾಯಿ, ಎಐಟಿಯುಸಿ. ಜಿಲ್ಲಾ ಕಾರ್ಯದರ್ಶಿ

ಒಂದು ವರ್ಷದಲ್ಲಿ ಅವಧಿಯಲ್ಲಿ ಅಭಯಾ-ಅಜಯ, ಮಹೇಶ ನಾಡಗೌಡ-ಸೀಮಾ, ಹಣಮಂತ-ಸ್ನೇಹ ಸೇರಿದಂತೆ ಒಟ್ಟು ಮೂರು ಮದುವೆಗಳಾಗಿವೆ. ಈ ಮೂರು ಮದುವೆಗಳು ಸಹ ಯಾವುದೇ ಜಾತಿ, ಧರ್ಮ, ವರ್ಗದ ಹಮ್ಮು-ಬಿಮ್ಮುಗಳು ಅಡ್ಡ ಬಂದಿಲ್ಲ. ಬಹುತೇಕವಾಗಿ ಇವೆಲ್ಲವೂ ಅಂತರ್ಜಾತಿ ಮದುವೆಗಳೇ ಆಗಿವೆ ಎಂಬುದನ್ನು ಇಲ್ಲಿ ಗಮನಿಸಬಹುದು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here