ಶಹಾಬಾದ:ನಗರದ ಕೊಳಸಾ ಪೈಲ್ ಮತ್ತು ಚುನ್ನಾಬಟ್ಟಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಹೃದಯಘಾತದಿಂದ ಇಬ್ಬರು ವ್ಯಕ್ತಿಗಳು ಸಾವನಪ್ಪಿದ್ದಾರೆ ಇದಕ್ಕೆ ನಗರಸಭೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರೇ ನೇರ ಕಾರಣ ಎಂದು ನಗರಸಭೆಯ ಸದಸ್ಯ ರವಿ ರಾಠೋಡ ಆರೋಪಿಸಿದ್ದಾರೆ.
ಚುನ್ನಾಬಟ್ಟಿ ಪ್ರದೇಶದ ಮಾದಿಗ ಸಮಾಜದ ಮುಖಂಡ ನಾಮದೇವ ಸಿಪ್ಪಿ ಹಾಗೂ ಕೊಳಸಾಫೈಲ್‍ನ ನಾಗಮ್ಮ ಎನ್ನುವವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ರಾತ್ರಿ ಅವರಿಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದರೆ ಯಾವ ವೈದ್ಯರು ಇಲ್ಲದೇ ಪರದಾಡುವಂತ ಪರಿಸ್ಥಿತಿ ಉಂಟಾಯಿತು.ಅಲ್ಲದೇ ಆಸ್ಪತ್ರೆಗೆ ತರಬೇಕಾದರೇ ಇಲ್ಲಿನ ಬಡಾವಣೆಗಳಿಗೆ ಯಾವುದೇ ರೀತಿ ಸಂಪರ್ಕ ರಸ್ತೆಯಿಲ್ಲ. ರೇಲ್ವೆ ಹಳಿಯನ್ನು ದಾಟಿಕೊಂಡೇ ಬರಬೇಕಾದ ಪರಿಸ್ಥಿತಿ ಇಲ್ಲಿದೆ.ಈ ಬಗ್ಗೆ ಸುಮಾರು ವರ್ಷಗಳಿಂದ ಸಂಪರ್ಕ ರಸ್ತೆ ಕಲ್ಪಿಸಿ ಅಥವಾ ಮೇಲ್ಸೆತುವೆ ನಿರ್ಮಾಣ ಮಾಡಿ ಕೊಡಿ ಎಂದು ಅಂಗಲಾಚಿ ಮನವಿ ಮಾಡಿದ್ದೆವೆ.ಆದರೂ ನಗರಸಭೆಯ ಅಧಿಕಾರಿಗಳು ರಸ್ತೆ ಮಾಡಿಸುತ್ತಿಲ್ಲ.ಇದರಿಂದ ಆಸ್ಪತ್ರೆಗೆ ತರಲು ತಡವಾಗುತ್ತಿರುವುದರಿಂದ ರೋಗಿಗಳು ಸಾವನಪ್ಪುತ್ತಿದ್ದಾರೆ.ಅಲ್ಲದೇ ಆಸ್ಪತ್ರೆಗೆ ತಂದರೂ ವೈದ್ಯರೇ ಇರಲಿಲ್ಲ. ಇಲ್ಲಿನ ಆಸ್ಪತ್ರೆಗೆ ಕೇಳೋರು, ಹೇಳೋರು ಇಲ್ಲದಂತಾಗಿದೆ.ಈ ಇಬ್ಬರ ಸಾವಿಗೆ ನಗರಸಭೆಯ ಅಧಿಕಾರಿಗಳು ಹಾಗೂ ವೈದ್ಯರೇ ಕಾರಣ ಎಂದು ಆಪಾದಿಸಿದರು.ಅಲ್ಲದೇ ಬಡಾವಣೆಯ ನಾಗರಿಕರಿಂದಲೂ ಆಕ್ರೋಶ ವ್ಯಕ್ತವಾಗಿದೆ.
ಶ್ರೀಮಂತರ ಬಡಾವಣೆಯಲ್ಲಿ ಎಲ್ಲಾ ಸೌಲಭ್ಯ ಒದಗಿಸುತ್ತಾರೆ.ಆದರೆ ವಾರ್ಡ.ನಂ 11, 12 ಹಾಗೂ 13 ರಲ್ಲಿ ಬಡ ಕಾರ್ಮಿಕ ವರ್ಗದವರು ಮತ್ತು ದಲಿತ ಸಮುದಾಯ ಇರುವುದರಿಂದ ಅಧಿಕಾರಿಗಳು ರಸ್ತೆ ಸಂಪರ್ಕ ಕಲ್ಪಿಸಲು ನಿರ್ಲಕ್ಷ್ಯ ತೋರುತ್ತಿದ್ದಾರೆ.ಈ ಕೂಡಲೇ ರಸ್ತೆ ಸಂಪರ್ಕ ಕಲ್ಪಿಸಬೇಕು. ಈ ಇಬ್ಬರ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.