ಕಲಬುರಗಿ: ಪೂಜ್ಯ ಬಸವರಾಜ ಅಪ್ಪಾಜೀಯವರ ಧರ್ಮಪತ್ನಿಯಾದ ಮಾತೋಶ್ರೀ ನಳಿನಿದೇವಿಯವರು ಶನಿವಾರ ದೈವಾಧೀನರಾಗಿದ್ದನ್ನು ನೆನೆದು ಶರಣಬಸವ ವಿಶ್ವವಿದ್ಯಾಲಯ ಆವರಣದ ಕಂಪ್ಯೂಟರ್ ಸೈನ್ ವಿಭಾಗದಲ್ಲಿ ವಿಶ್ವವಿದ್ಯಾಲಯದ ವತಿಯಿಂದ ರವಿವಾರ ಶೋಕಾಚರಣೆ ಆಚರಿಸಲಾಯಿತು.
ವಿವಿ ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ ಈ ಸಂದರ್ಭದಲ್ಲಿ ಮಾತನಾಡಿ, ಅವ್ವಾಜೀಯವರ ಅಗಲಿಕೆಯಿಂದಾದ ದು:ಖವನ್ನು ತಡೆದುಕೊಳ್ಳುವ ಶಕ್ತಿ ಶ್ರೀ ಶರಣಬಸವೇಶ್ವರರು ಕುಟುಂಬಕ್ಕೆ ದಯಪಾಲಿಸಲಿ ಹಾಗೂ ದೇವರು ಅವ್ವಾಜಿಯವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ವಿವಿ ಡೀನ್ ಡಾ. ಬಸವರಾಜ ಮಠಪತಿ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗದ ಮುಖ್ಯಸ್ಥರು ಹಾಜರಿದ್ದರು. ಅವ್ವಾಜಿಯವರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ ಎಂದು ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಲಾಯಿತು. ಅದೇ ರೀತಿ ಗೋದುತಾಯಿ ಇಂಜೀನಿಯರಿಂಗ್ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿಯೂ ಮೌನಾಚರಣೆ ಮಾಡಲಾಯಿತು.