ಬೆಂಗಳೂರು: ನಗರದಲ್ಲಿ ಕೋವಿಡ್-19 ಪ್ರಕರಣಗಳನ್ನು ಹೆಚ್ಚುತ್ತಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇಂಟೆನ್ಸಿವ್ ಕೇರ್ ಯೂನಿಟ್ ಗಳಲ್ಲಿ (ಐಸಿಯು) ಹಾಸಿಗೆಗಳು ಕ್ಷಿಪ್ರಗತಿಯಲ್ಲಿ ಭರ್ತಿ ಆಗುತ್ತಿವೆ. ಕೊರೊನಾ ವೈರಸ್ ನ ಎರಡನೇ ಅಲೆಯು ವೇಗವಾಗಿ ಹಬ್ಬುತ್ತಿದ್ದು ಆಸ್ಪತ್ರೆಗಳಲ್ಲಿ ಮತ್ತು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಹಾಸಿಗೆಗಳು, ಸೌಲಭ್ಯಗಳ ಕೊರತೆಗೆ ಕಾರಣವಾಗಿ, ಆತಂಕವನ್ನು ಸೃಷ್ಟಿಸುತ್ತಿದೆ. ೀ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನೆರವಾಗುವ ದೃಷ್ಟಿಯಿಂದ ಬಾಷ್ ಲಿಮಿಟೆಡ್ ತನ್ನ ಆಡುಗೋಡಿ ಕ್ಯಾಂಪಸ್ ನಲ್ಲಿರುವ ಕ್ರೀಡಾ ಸಂಕೀರ್ಣವನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಿಟ್ಟುಕೊಡಲು ನಿರ್ಧರಿಸಿದೆ. ಇದನ್ನು ಸಂಪೂರ್ಣ ಕೋವಿಡ್ ಕೇರ್ ಸೆಂಟರ್ ಅನ್ನಾಗಿ ಪರಿವರ್ತಿಸಿ ಬಿಬಿಎಂಪಿಗೆ ಹಸ್ತಾಂತರಿಸಲಿದೆ.
ಸಮಾಜಕ್ಕೆ ಪ್ರಯೋಜನಕಾರಿ ಕೆಲಸಗಳನ್ನು ಮಾಡುವ ಬಾಷ್ ನ ಬದ್ಧತೆಯಂತೆ ಆಡುಗೋಡಿ ಕೋವಿಡ್ ಕೇರ್ ಸೆಂಟರ್ (ಸಿಸಿಸಿ)ನಲ್ಲಿ 70 ಕ್ಕೂ ಹೆಚ್ಚು ಹಾಸಿಗೆಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಲ್ಲಿ ಕೋವಿಡ್ ಸೋಂಕಿತರ ಆರೈಕೆಗಾಗಿ ನುರಿತ ವೈದ್ಯಕೀಯ ಸಿಬ್ಬಂದಿ ಇರಲಿದ್ದಾರೆ. ಈ ಕೇಂದ್ರದಲ್ಲಿ ದಿನದ 24 ಗಂಟೆಯೂ ಸೋಂಕಿತರಿಗೆ ವೈದ್ಯಕೀಯ ಸೇವೆ, ಊಟೋಪಚಾರ, ಹಾಸಿಗೆ ಮತ್ತು ಇಂಟರ್ನೆಟ್ ವ್ಯವಸ್ಥೆ ಲಭ್ಯವಿದೆ. ಈ ಸೇವೆಯು ತಕ್ಷಣದಿಂದ ಸಾರ್ವಜನಿಕರು ಮತ್ತು ಬಾಷ್ ಇಂಡಿಯಾ ಸಿಬ್ಬಂದಿ/ಅವರ ಸಂಬಂಧಿಕರಿಗೆ ಲಭ್ಯವಿದೆ.
ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು KKRDB ಅಧ್ಯಕ್ಷರ ಸೂಚನೆ
ಬಾಷ್ ಇಂಡಿಯಾ ಕೈಗೊಂಡಿರುವ ಈ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಮಾತನಾಡಿ, “ಬಾಷ್ ಸಂಸ್ಥೆಯು ಆಡುಗೋಡಿಯಲ್ಲಿರುವ ತನ್ನ ಕ್ರೀಡಾ ಸಂಕೀರ್ಣವನ್ನು ಕೋವಿಡ್ ಕೇರ್ ಸೆಂಟರ್ ಅನ್ನಾಗಿ ಮಾಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆದಿರುವುದು ಸಂತಸದ ವಿಚಾರವಾಗಿದೆ. ಮಾರಕ ಕೋವಿಡ್-19 ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟದಲ್ಲಿ ಕೈಜೋಡಿಸುವ ಮೂಲಕ ಸಂಸ್ಥೆ ಇತರರಿಗೆ ಮಾದರಿಯಾಗಿದೆ. ಈ ಕೇಂದ್ರದಲ್ಲಿ ಸಾರ್ವಜನಿಕರು ಸಹ ಸೇವೆಗಳನ್ನು ಪಡೆಯಬಹುದಿರುವುದರಿಂದ ಬೆಂಗಳೂರಿನ ನಾಗರಿಕರು ಈ ಸೇವೆಯನ್ನು ಪಡೆದುಕೊಳ್ಳುವಂತೆ ನಾನು ಮನವಿ ಮಾಡುತ್ತಿದ್ದೇನೆ’’ ಎಂದು ತಿಳಿಸಿದರು.
ಈ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಗ್ರೂಪ್ ನ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಅವರು, “ಬಾಷ್ ನಲ್ಲಿ ನಮ್ಮ ಸಿಬ್ಬಂದಿಯ ಆರೋಗ್ಯ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ನಮ್ಮ ಸಿಬ್ಬಂದಿ ಮತ್ತು ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಾವು ನಮ್ಮ ಕ್ರೀಡಾ ಸಂಕೀರ್ಣವನ್ನು ಕೋವಿಡ್ ಕೇರ್ ಸೆಂಟರ್ ಅನ್ನಾಗಿ ಪರಿವರ್ತನೆ ಮಾಡುವ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ಇದುವರೆಗೆ ನಾವು 4 ಮಿಲಿಯನ್ ಗೂ ಅಧಿಕ ಮಾಸ್ಕ್ ಗಳನ್ನು ವಿತರಿಸಿದ್ದೇವೆ. ಈ ಮಾಸ್ಕ್ ಗಳನ್ನು ನಮ್ಮ ನಾಗನಾಥಪುರ ಘಟಕದಲ್ಲಿ ತಯಾರಿಸಲಾಗಿದೆ’’ ಎಂದು ತಿಳಿಸಿದರು.