ಶಹಾಬಾದ: ನಗರದ ಕೆಲವೊಂದು ವಾರ್ಡಗಳಲ್ಲಿ ಸ್ಯಾನಿಟೈಜರ್ ಮತ್ತು ಸ್ವಚ್ಛತೆ ಕೈಗೊಳ್ಳಲಾಗಿದೆ ಆದರೆ ವಾರ್ಡ ನಂ.೧೧,೧೨, ಹಾಗೂ ೧೩ಕ್ಕೆ ಬಂದು ಒಮ್ಮೆ ವೀಕ್ಷಿಸಿದರೇ ಇಲ್ಲಿ ಎಷ್ಟು ಸ್ವಚ್ಛತೆ ಕಾಪಾಡಿದ್ದಿರಿ ಎಂದು ಗೊತ್ತಾಗುತ್ತದೆ ಎಂದು ನಗರಸಭೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆಯ ಅಧಿಕಾರಿಗಳು ಕೇವಲ ಉಳ್ಳವರ ಬಡಾವಣೆಗಳಲ್ಲಿ ಮಾತ್ರ ಸ್ವಚ್ಛತೆ ಮತ್ತು ಸ್ಯಾನಿಟೈಜರ್ ಸಿಂಪರಣೆ ಕಾರ್ಯ ಮಾಡುತ್ತಾರೆ.ಆದರೆ ಕೊಳಚೆ ಪ್ರದೇಶಗಳಾದ ವಾರ್ಡ ನಂ.೧೧,೧೨, ಹಾಗೂ ೧೩ರಲ್ಲಿ ಸ್ವಚ್ಛತೆ ಮಾಡಿಸುವಲ್ಲಿ ಮುಂದಾಗುತ್ತಿಲ್ಲ. ಚರಂಡಿಯಲ್ಲಿ ಕಸ ಕಡ್ಡಿ ತುಂಬಿಕೊಂಡು ಹೊಲಸು ವಾಸನೆ ಬರುತ್ತಿದೆ. ಆದರೂ ಕ್ಯಾರೆ ಎನ್ನುತ್ತಿಲ್ಲ. ನಗರದ ನಾಲ್ಕಾರು ವಾರ್ಡಗಳಲ್ಲಿ ಸ್ವಚ್ಛತೆ ಕೈಗೊಂಡರೆ ಸಾಲದು.ನಗರಸಭೆಯ ವ್ಯಾಪ್ತಿಯಲ್ಲಿ ಕೇವಲ ನಾಲ್ಕು ವಾರ್ಡಗಳಿಲ್ಲ. ಸಂಪರ್ಣ ೨೭ ವಾರ್ಡಗಳ ಜವಾಬ್ದಾರಿ ನಗರಸಭೆಯ ಅಧಿಕಾರಿಗಳಿಗೆ ಸಂಬಂಧಿಸಿದ್ದು ಎಂದು ತಿಳಿಯಲ್ಪಡಿಸುತ್ತೆನೆ. ಯಾವುದೇ ಕಾರ್ಯಕ್ರಮ ಪ್ರಾರಂಭ ಮಾಡಬೇಕಾದರೆ ಕೇವಲ ಗಂಜ್ ಪ್ರದೇಶ, ಮಜ್ಜಿದ್ ವೃತ್ತದಲ್ಲಿ ಪ್ರಾರಂಭ ಮಾಡುತ್ತಾರೆ.
ಮದುವೆ ಸಮಾರಂಭಕ್ಕೆ ಕಂದಾಯ ಇಲಾಖೆಯ ತಂಡ ಭೇಟಿ
ಎಂದಾದರೂ ಕೊಳಚೆ ಪ್ರದೇಶದಲ್ಲಿ ಪ್ರಾರಂಭ ಮಾಡಿದ್ದು ಉದಾಹರಣೆಗಳಿಲ್ಲ.ನಗರಸಭೆಯ ಪೌರಾಯುಕ್ತರು ಹಾಗೂ ಅಧ್ಯಕ್ಷರು ಆಡಳಿತ ನಡೆಸುವಲ್ಲಿ ಸೋತಿದ್ದಾರೆ.ಅಲ್ಲದೇ ಶಹಾಬಾದ ತಾಲೂಕಿನಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ನಮ್ಮ ಶಾಸಕರು ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಈಗಾಗಲೇ ತಮ್ಮ ವ್ಯಾಪ್ತಿಯ ಕಮಲಾಪೂರದಲ್ಲಿ ಕೋವಿಡ್ ಸೆಂಟರ್ ಪ್ರಾರಂಭ ಮಾಡಿದ್ದಾರೆ.ಆದರೆ ಶಹಾಬಾದನಲ್ಲಿ ಇಲ್ಲಿಯವರೆಗೆ ಈ ಬಗ್ಗೆ ಚಕಾರ ಎತ್ತಿಲ್ಲ.ಅಲ್ಲದೇ ಸುಮಾರು ನಾಲ್ಕು ತಿಂಗಳಿನಿಂದ ಸರ್ಕಲ್ ಇನ್ಸ್‌ಪೆಕ್ಟರ್ ಹುದ್ದೆ ಖಾಲಿಯಾಗಿದೆ. ಪೊಲೀಸ್ ಸಿಬ್ಬಂದಿಗಳು ಕಡಿಮೆ ಇದ್ದಾರೆ.
ಅಲ್ಲದೇ ಪಿಎಸ್‌ಐ ಒಬ್ಬರಿಗೆ ಹಾಗೂ ಸುಮಾರು ಹತ್ತು ಜನ ಪೊಲೀಸರಿಗೆ ಕರೊನಾ ಸೊಂಕು ತಗುಲಿದೆ.ಎಲ್ಲಾ ಜವಾಬ್ದಾರಿ ಪಿಎಸ್‌ಐ ಯಲ್ಲಮ್ಮ ಅವರ ಹೆಲ ಮೇಲೆ ಬಿದ್ದಿದೆ. ಸಿಬ್ಬಂದಿಗಳಿಲ್ಲದೇ ಈ ಕೋವಿಡ್ ಸಂದರ್ಭದಲ್ಲಿ ಅವರು ಸಾರ್ವಜನಿಕರನ್ನು ಸಮಜಾಯಿಸಲು ಹೆಣಗಾಡುತ್ತಿದ್ದಾರೆ. ಇದರಿಂದ ಆಡಳಿತ ವ್ಯವಸ್ಥೆ ಕುಸಿಯುತ್ತಿದೆ. ಆದರೂ ಇಲ್ಲಿಯವರೆಗೆ ಸರ್ಕಲ್ ಇನ್ಸ್‌ಪೆಕ್ಟರ್ ಖಾಲಿ ಹುದ್ದೆಗೆ ಯಾರು ಬಂದಿಲ್ಲ. ಇದರ ಹಿಂದಿನ ಮರ್ಮ ಏನು ಎಂದು ಅಸಮಾಧಾನ ಹೊರಹಾಕಿದರು.ಕೂಡಲೇ ಪೌರಾಯುಕ್ತರು ಹಾಗೂ ಅಧ್ಯಕ್ಷರು ನಗರದ ಎಲ್ಲಾ ವಾರ್ಡಗಳಲ್ಲಿ ಸ್ವಚ್ಛತೆ ಹಾಗೂ ಸ್ಯಾನಿಟೈಜರ್ ಕೈಗೊಳ್ಳಲು ಕ್ರಮಕೈಗೊಳ್ಳಬೇಕು.ಶಾಸಕರು ನಗರದ ಪೊಲೀಸ್ ಠಾಣೆಗೆ ಸರ್ಕಲ್ ಇನ್ಸ್‌ಪೆಕ್ಟರ್ ನೇಮಕ ಮಾಡುವಲ್ಲಿ ಮುತುವರ್ಜಿ ವಹಿಸಬೇಕೆಂದು ಒತ್ತಾಯಿಸಿದರು.