ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದ ದಂಧೆಯನ್ನು ಕೂಡಲೇ ಸ್ಥಗಿತಗೊಳಿಸಲು ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಸೂಚನೆ ನೀಡಿದರು.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಅಕ್ರಮ ಮರಳು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಂದಾಯ, ಪೊಲೀಸ್, ಲೋಕೋಪಯೋಗಿ, ಅರಣ್ಯ, ಆರ್.ಟಿ.ಓ ಇಲಾಖೆಗಳ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಬುರಗಿ ಜಿಲ್ಲೆಯ ವಿವಿಧೆಡೆ ವ್ಯಾಪಕವಾಗಿ ಅಕ್ರಮ ಮರಳು ಸಾಗಣೆ ಮತ್ತು ಸಂಗ್ರಹಣೆ ಕುರಿತು ದೂರು ಕೇಳಿಬರುತ್ತಿವೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದ್ದು, ಇನ್ನು ಮುಂದೆ ಇದನ್ನು ಸಹಿಸಲು ಸಾಧ್ಯವಿಲ್ಲ. ಆಯಾ ತಾಲೂಕಿನ ತಹಶೀಲ್ದಾರರು ಕೂಡಲೆ ಪೊಲೀಸ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಭೆ ನಡೆಸಿ ಜಂಟಿಯಾಗಿ ಅಕ್ರಮ ಮರಳು ಸಾಗಾಟ ಸ್ಥಳಗಳಿಗೆ ಭೇಟಿ ಕೊಟ್ಟು ಸಾಗಾಟ ಮಾಡುತ್ತಿರುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಇಲ್ಲದಿದಲ್ಲಿ ಅಂತಹ ಅಧಿಕಾರಿಗಳ ಮೇಲೆ ಸರ್ಕಾರವೆ ಶಿಸ್ತಿನ ಕ್ರಮ ಕೈಗೊಳ್ಳುವುದು ಅನಿವಾರ‍್ಯವಾಗುತ್ತದೆ. ಹೀಗಾಗಿ ಈ ವಿಷಂiದಲ್ಲಿ ತುಂಬಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಈ ಹಿಂದೆ ಅಕ್ರಮ ಮರಳು ಸಾಗಾಣಿಕೆ ಪ್ರಕರಣದಲ್ಲಿ ೯೦೦ಕ್ಕು ಹೆಚ್ಚು ಟ್ರ್ಯಾಕ್ಟರ್, ಟಿಪ್ಪರ್ ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಯಾವುದೇ ಕಾರಣಕ್ಕು ಈ ವಾಹನಗಳು ರಸ್ತೆ ಮೇಲೆ ಇಳಿಯುವಂತಿಲ್ಲ. ಪರವಾನಿಗೆಯನ್ನು ಕೂಡಲೆ ಅಮಾನತ್ತುಗೊಳಿಸಿ ತದನಂತರ ನಿಯಮದ ಪ್ರಕಾರ ಆರ್.ಸಿ. ರದ್ದುಗೊಳಿಸುವಂತೆ ಆರ್.ಟಿ.ಓ. ಅಧಿಕಾರಿಗಳಿಗೆ ತಾಕೀತು ಮಾಡಿದರು. ಅಕ್ರಮ ಮರಳು ಸಾಗಾಟದ ನಿಯಂತ್ರಣಕ್ಕೆ ಕೈಗೊಂಡ ಕ್ರಮದ ಬಗ್ಗೆ ೧೫ ದಿನಕ್ಕೊಮ್ಮೆ ನನಗೆ ವರದಿ ಸಲ್ಲಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮಾತನಾಡಿ ಜಿಲ್ಲೆಯಲ್ಲಿ ಅಕ್ರಮ ಮರಳು ಪ್ರಕರಣದಲ್ಲಿ ಜಪ್ತಿ ಮಾಡಿಕೊಂಡ ವಾಹನಗಳನ್ನು ಇರಿಸಲು ಸೂಕ್ತ ಜಾಗ ಹುಡುಕಿ ಅಲ್ಲಿ ವಾಹನಗಳನ್ನು ನಿಲ್ಲಿಸಬೇಕು ಮತ್ತು ಭದ್ರತೆ ಸಹ ಒದಗಿಸಬೇಕು. ಪ್ರಕರಣದಲ್ಲಿ ವಾಹನಗಳ ಮೂಲ ದಾಖಲೆಗಳನ್ನು ಸಹ ವಶಕ್ಕೆ ಪಡೆಯಿರಿ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ., ಉಪ ಅರಣ್ಯ ಸಂರಕ್ಷಣಾಧಿಕಾರಿ ಆವಂತಿಕಾ, ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉನಿರ್ದೇಶಕಿ ರೇಣುಕಾದೇವಿ ಸೇರಿದಂತೆ ತಾಲೂಕಿನ ತಹಶೀಲ್ದಾರರು, ಲೋಕೋಪಯೋಗಿ, ಪರಿಸರ ನಿಯಂತ್ರಣ ಮಂಡಳಿ, ಆರ್.ಟಿ.ಓ ಅಧಿಕಾರಿಗಳು ಉಪಸ್ಥಿತರಿದ್ದರು.