ನಮ್ಮೂರಿನ ತಿಪ್ಪಣ್ಣ ಗವಾಯಿ ತೀರಿಹೋಗಿದ್ದಾರೆ. ನೀವೆಲ್ಲ ಊಹಿಸಿದಂತೆ ಕ್ರೂರ ಕೊರೊನಾದಿಂದಲೇ, ಪ್ರಾಣವಾಯು ಇಲ್ಲದೇ ಪ್ರಾಣ ಬಿಟ್ಟಿದ್ದಾರೆ. ಅರವತ್ತೈದು ಸಾಯುವ ವಯಸ್ಸೇನಲ್ಲ. ಕೊರೊನಾ ಪೀಡಿತ ತನ್ನಮಗ ಭೀಮಾಶಂಕರನನ್ನು ಬದುಕಿಸಲು ಬಡಿದಾಡಿ ಕಡೆಗೆ ತಾನೇ ಕರಾಳ ಕೊವಿಡ್ಡಿಗೆ ಬಲಿಯಾಗಿದ್ದಾರೆ.
ಅಜಮಾಸು ಐವತ್ತು ವರ್ಷಗಳ ಹಿಂದೆ ಮೆಟ್ರಿಕ್ ಪರೀಕ್ಷೆಯಲ್ಲಿ ಸೆಕೆಂಡ್ ಕ್ಲಾಸಲ್ಲಿ ಪಾಸು ಮಾಡಿದ್ದ. ಆ ಕಾಲದಲ್ಲಿ ಸೆಕೆಂಡ್ ಕ್ಲಾಸಲ್ಲಿ ಉತ್ತೀರ್ಣರಾಗುವುದೆಂದರೆ ಈಗ ಡಿಸ್ಟಿಂಕ್ಷನ್ನಿಗೆ ಸಮ. ಬಾಲ್ಯದಿಂದಲೇ ತಾಯಿ ಇಲ್ಲದ ತಬ್ಬಲಿತನ ಅನುಭವಿಸಿದ್ದ. ತಂದೆ ಭೀಮರಾಯ ನಾಯ್ಕೋಡಿ ತನ್ನ ಮಗ ತಿಪ್ಪಣ್ಣನನ್ನು ಕಡು ಬಡತನದ ನಡುವೆ ಪ್ರೀತಿ ಕಕ್ಕುಲತೆಯಿಂದಲೇ ಉಣಿಸಿ, ಉಡಿಸಿ ತಾಯ್ತನದ ಕೊರತೆ ತುಂಬಲು ಹೆಣಗಾಡಿದ್ದ. ತಿಪ್ಪಣ್ಣ ಓರ್ವ ಭಾವಜೀವಿ. ಓದು, ಮಡಿವಾಳಪ್ಪನ ಹಾಡುಗಳ ಭಾವಲೋಕದಲ್ಲಿ ತೀವ್ರವಾಗಿ ತಾದಾತ್ಮ್ಯ ಹೊಂದುತ್ತಿದ್ದ. ಹೊಟ್ಟೆ ತಿಪ್ಪಲಿಗಾಗಿ ತಿಪ್ಪಣ್ಣ ಕೆಲವುಕಾಲ ಅಂಚೆ ಇಲಾಖೆಯ ಇ.ಡಿ. ಪ್ಯಾಕರಾಗಿ, ಪೋಷ್ಟಮ್ಯಾನ್ ಕೆಲಸ ಮಾಡಿದ.
ತಿಪ್ಪಣ್ಣ ನಾಯ್ಕೋಡಿ, ಗವಾಯಿ ಆದುದು ತನ್ನ ಸ್ವಯಂ ಶ್ರಮದಿಂದಲೇ. ಮಠದಲ್ಲಿನ ಭಜನೆ. ಭೀಮಾಶಂಕರ ಅವಧೂತರ ಗವಿ ಮಹಾಂತಪ್ಪ ಸಾಧುಗಳ ದಮಡಿ ಭಜನೆಯ ನಾದಗಳಿಂದಲೇ ಪೂರ್ಣ ಪ್ರಭಾವಿತನಾದ. ನಮ್ಮೂರು ಕಡಕೋಳದ ಮಠಕ್ಕೆ ಆಗಮಿಸುವ ಹೊಸ ಗಾಯಕರ ಹಾಡುಗಾರಿಕೆ ಸೇರಿದಂತೆ ಸ್ಥಳೀಯ ಭಜನೆ ತಂಡದ ಹಾಡುಗಾರಿಕೆ ಆತನ ಮೇಲೆ ಪ್ರಭಾವ ಬೀರಿತು. ಅಷ್ಟೊತ್ತಿಗಾಗಲೇ ನಮ್ಮೂರಿನ ಓಣಿ ಓಣಿಗಳಲ್ಲಿ ತತ್ವಪದ ಹಾಡುವ ಅನೇಕ ಹಿರಿಯರಿದ್ದರು.
ಅವರಲ್ಲೇ ಅಗ್ರಗಣ್ಯರಾದ ಮಹಾಂತಪ್ಪ ಸಾಧು, ನಿಂಗಪ್ಪ ಪೂಜೇರಿ, ಸಾಧು ಶಿವಣ್ಣ, ಬಡಿಗೇರ ಇಮಾಮಸಾ, ಮಾಲಿ ಮಾಂತಪ್ಪಗೌಡ ಹೀಗೆ ಅನೇಕರ ಪ್ರಭಾವ ಅವನ ಮೇಲೆ ಅಕ್ಷರಶಃ ಆಗಿದ್ದು ಖರೇ. ದಮಡಿ ನುಡಿಸುವುದರಲ್ಲಿ ನೈಪುಣ್ಯತೆ ಸಾಧಿಸಿದ್ದ ತಿಪ್ಪಣ್ಣ ಹಾರ್ಮೋನಿಯಂ ನುಡಿಸುವುದನ್ನು ತಾನೇ ಕಲಿತುಕೊಂಡ. ಗುರುವಿನ ನೆರವಿಲ್ಲದೇ ಹಾಗೆ ಹಾರ್ಮೋನಿಯಂ, ತಬಲಾ, ದಮಡಿ, ಏಕತಾರಿ, ಚಿನ್ನಿ, ಚಳ್ಳಮ ನುಡಿಸುವಲ್ಲಿ ನಮ್ಮೂರಿನ ಬಹುಪಾಲು ಗಾಯಕರು ಏಕಲವ್ಯರೇ ಹೌದು. ಆದರೆ ತಿಪ್ಪಣ್ಣ ತನ್ನ ನಿತ್ಯದ ಶಿಸ್ತು ಸಾಧನೆಯಿಂದಲೇ ಹಾಡುತ್ತಿದ್ದ ಮತ್ತು ಧ್ಯಾನಸ್ಥನಾಗಿ ಬಹುತೇಕ ವಾದ್ಯಗಳನ್ನು ನುಡಿಸುವಲ್ಲಿ ನಿಪುಣನಾಗಿದ್ದ. ಅಂತೆಯೇ ಆತ ಗವಾಯಿ ಅಂತಲೇ ಹೆಸರಾಗಿದ್ದ.
ಈಗ್ಗೆ ಮುರ್ನಾಲ್ಕು ವರ್ಷಗಳ ಹಿಂದೆ ನಮ್ಮೂರಿಗೆ ನಾಲ್ಕೂರು ನಾದಮಣಿ ಬಂದಿದ್ದರು. ಅವರೆದುರು ತಿಪ್ಪಣ್ಣ ಗವಾಯಿ ಏಕತಾರಿ ನುಡಿಸುತ್ತ ಹ್ಯಾಂಗ ಮಹಾಂತನಾಗುತಿ / ಹ್ಯಾಂಗ ಭ್ರಾಂತಿ ನೀಗುತಿ // ಹಾಂಗೆ ಹೀಂಗೆ ಹೊತ್ತುಗಳೆದು/ ಹೀಂಗೆ ನೀ ಸತ್ಹೋಗತಿ// ಎಂಬ ಮಡಿವಾಳಪ್ಪನವರ ತತ್ವಪದ ಹಾಡ ತೊಡಗಿದರೆ ನಾದಮಣಿ ಮಂತ್ರಮುಗ್ಧರಾಗಿ ತಿಪ್ಪಣ್ಣ ಗವಾಯಿಗೆ ಫಿದಾ ಆಗಿದ್ದರು. ಅದನ್ನು ಕಂಡು ಕೇಳಿದ ಮಠದಲ್ಲಿ ಸೇರಿದವರಿಗೆಲ್ಲ ನಮ್ಮೂರಿನ ಪ್ರತಿಭೆ ಬಗ್ಗೆ ಹೆಮ್ಮೆ, ಅಭಿಮಾನ ಇಮ್ಮಡಿಯಾಯಿತು.
ತಿಪ್ಪಣ್ಣನ ಅಗಲಿಕೆಯಿಂದ ಮಡಿವಾಳಪ್ಪ ಮತ್ತವರ ಶಿಷ್ಯರ ತತ್ವಪದಗಳನ್ನು ಕಡಕೋಳ ನೆಲಮೂಲ ಲಯದ ಹಾಡುಗಾರಿಕೆಯ ಹಿರಿಯ ಗವಾಯಿಯನ್ನು ಕಳಕೊಂಡಂತಾಗಿದೆ.
-
ಮಲ್ಲಿಕಾರ್ಜುನ ಕಡಕೋಳ
9341010712