ಸಹಜ, ಸರಳ, ತಮಾಷೆಯ ಮಾತುಗಳನ್ನಾಡುತ್ತಿದ್ದ ‘ಶೋಭಾ ರಂಜೋಳ್ಕರ’ ಮೌನವಾಗಲು ಹೇಗೆ ಸಾಧ್ಯ?
ನಮ್ಮ ಮಧ್ಯದಲ್ಲಿ ಸದಾ ಜೀವಂತಿಕೆಯಿಂದ ನಳನಳಿಸುತ್ತಿದ್ದವರು ಹೀಗೆ ಹಟಾತ್ತನೆ ಕಣ್ಮರೆಯಾಗಲು ಸಾಧ್ಯವಿಲ್ಲ. ಮನಸು ಇದನ್ನು ನಂಬಲು ನಿರಾಕರಿಸುತ್ತಿದೆ. ಆದರೂ ಇದನ್ನು ನಂಬಲೇ ಬೇಕು, ಈ ಸತ್ಯವನ್ನು ಸ್ವೀಕರಿಸಲೇ ಬೇಕು.
ಕಲಬುರಗಿಯ ಶೋಭಕ್ಕನ ವ್ಯಕ್ತಿತ್ವ ಅಪರೂಪದ್ದು. ಕಲಾವಿದೆ ಎಂದರೆ ಅಪ್ಪಟ ಕಲಾವಿದೆ. ಮೂರ್ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ. ಲೆಕ್ಕವಿಲ್ಲದಷ್ಟು ನಾಟಕಗಳಲ್ಲಿ ಅನೇಕ ಪಾತ್ರಗಳ ನಿಭಾಯಿಸಿದ ರಂಗಭೂಮಿ ಅಭಿನೇತ್ರಿ.
ಹಿಂದೊಮ್ಮೆ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಂಡಾಗ ಆ ದೇಹ ಭಾಷೆ, ಧ್ವನಿಯ ನಡುಕ, ಅಭಿನಯ ನೋಡಿದರೆ, ಅಬ್ಬಾ!!! ಥೇಟ್ ಮುದುಕಿಯೇ ಎನ್ನಬೇಕು.
ವೃದ್ಧಾಪ್ಯಕ್ಕೆ ಕಾಲಿಡುತ್ತಿದ್ದರೂ ಬತ್ತದ ಉತ್ಸಾಹ, ಜೀವನೋತ್ಸಾಹ ಅವರಲ್ಲಿತ್ತು. ನಾಟಕದಲ್ಲಿ ಅಜ್ಜಿಯಾಗಿ ಕಂಡವರು, ನಿಜದಲ್ಲಿ ಅಜ್ಜಿ ಎಂದರೆ, ‘ಏ ಇಷ್ಟ್ ಲಗುನೇ ಅಜ್ಜಿ ಮಾಡ್ಬ್ಯಾಡ್ರಪ್ಪ’ ಎಂದು ಹೇಳಿ ನಕ್ಕು, ಎಲ್ಲರನ್ನೂ ನಗೆಗಡಲಲ್ಲಿ ಮುಳುಗಿಸುತ್ತಿದ್ದರು.
ನಾಟಕಗಳನ್ನು ಸ್ವತಃ ತಾವೇ ನಿರ್ದೇಶಿಸಿ ರಂಗದ ಮೇಲೆ ಪ್ರದರ್ಶಿಸುವ ಉತ್ಸಾಹ ಅಪಾರ. ಅದರ ಯಶಸ್ಸು ರಂಗಭೂಮಿಯ ಮೇಲೆ ಕಂಡಾಗ ಎಲ್ಲಿಲ್ಲದ ಸಂತೃಪ್ತಿ ಅನುಭವಿಸಿ ಖುಶಿ ಪಡುತ್ತಿದ್ದರು.
ಅನೇಕ ಮಹಿಳೆಯರಿಗೆ ಧೈರ್ಯ ತುಂಬುವಂತೆ ಮಾತನಾಡಿ ಅವರೊಳಗಿನ ಪ್ರತಿಭೆಯನ್ನು ಬಡಿದೆಬ್ಬುಸುತ್ತಿದ್ದರು. ಅದೆಷ್ಟೋ ಹೆಣ್ಣು ಮಕ್ಕಳಿಗೆ ಅವರಿಗೆ ಗೊತ್ತಿಲ್ಲದೆಯೇ ಸ್ಪೂರ್ತಿದಾಯಕರಾಗಿದ್ದರು.
ಇಂತಹ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದ ಶೋಭಕ್ಕ ನಮ್ಮನ್ನೆಲ್ಲಾ ಅಗಲಿದ್ದು ತೀವ್ರ ನೋವುಂಟು ಮಾಡಿದೆ. ಅವರಿಗೆ ಈ ಅಕ್ಷರಗಳ ನಮನ ಹೇಳುವುದನ್ನು ಬಿಟ್ಟರೆ ನನ್ನಲ್ಲೇನೂ ಇಲ್ಲ ಎನ್ನುವ ಖಾಲಿತನ ಕಾಡುತ್ತಿದೆ.
ನಿತ್ಯ ಪ್ರತಿನಿತ್ಯ ನಮ್ಮವರು ಅಗಲುತ್ತಲೇ ಇದ್ದಾರೆ. ಇಡೀ ಜಗತ್ತಿಗೇ ಸೂತಕ ಕವಿದ ವಾತಾವರಣ. ಈ ದುಃಖವನ್ನು ಸಹಿಸುವ ಶಕ್ತಿ ಎಲ್ಲರಿಗೂ ಲಭಿಸಲಿ. ಇಂತಹ ಕಷ್ಟದ ಸಮಯ ಆದಷ್ಟು ಬೇಗ ಕಳೆದು ಹೋಗಲಿ ಎಂದು ಮನಸು ಬಯಸುತ್ತಿದೆ.