ವಾಡಿ: ಕೊರೊನಾ ಸಾಂಕ್ರಾಮಿಕ ರೋಗದ ಸಂಕಷ್ಟದ ಕಾಲದಲ್ಲಿ ಬಡ ರೋಗಿಗಳ ನೆರವಿಗೆ ಬರಬೇಕಾದ ಖಾಸಗಿ ಆಸ್ಪತ್ರೆಗಳು ಸುಲಿಗೆಗೆ ನಿಂತಿವೆ. ಇತ್ತ ಸರಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ. ಇಡೀ ಆಡಳಿತ ವ್ಯವಸ್ಥೆ ರೋಗಗ್ರಸ್ತಗೊಂಡಿದೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಕಾಮ್ರೇಡ್ ಆರ್.ಕೆ.ವೀರಭದ್ರಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಮಂಗಳವಾರ ಎಸ್‍ಯುಸಿಐ(ಸಿ) ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಕೋವಿಡ್ ರೋಗಿಗಳ ಜೀವ ಉಳಿಸಿ ಎಂಬ ಆನ್‍ಲೈನ್ ಚಳುವಳಿ ಉದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯ ಆಸ್ಪತ್ರೆಗಳಲ್ಲಿನ ಐಸಿಯು, ವೆಂಟಿಲೇಟರ್ ಹಾಗೂ ಆಕ್ಸಿಜನ್ ಕೊರತೆಯಿಂದ ರೋಗಿಗಳು ಪ್ರತಿದಿನ ಜೀವ ಕಳೆದುಕೊಳ್ಳುತ್ತಿದ್ದಾರೆ.
ನೋಡಲ್ ಕಚೇರಿಯಿಂದ ಕಳುಹಿಸಲಾದ ರೋಗಿಗಳನ್ನು ದಾಖಲಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳ ವೈದ್ಯರು ನಿರಾಕರಿಸುತ್ತಿದ್ದಾರೆ. ಸರಕಾರಿ ಕೋಟಾದ ರೋಗಿಗಳಿಗೆ ಖಾಸಗಿಯಲ್ಲಿ ತಾರತಮ್ಯದ ಕಳಪೆ ಸೇವೆ ನೀಡಲಾಗುತ್ತಿದೆ. ಪರಿಣಾಮ ಕೋವಿಡ್ ಸೋಂಕಿತ ಬಡ ರೋಗಿಗಳು ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಪ್ರಾಣ ಬಿಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಪರೀಕ್ಷಾ ವರದಿ ವಿಳಂಬವಾಗುತ್ತಿದೆ. ಸೊಂಕಿತರ ಪತ್ತೆ ಮತ್ತು ಐಸೋಲೇಷನ್ ಕೂಡ ವಿಳಂಬವಾಗುತ್ತಿದೆ. ಇರುವ ವೆಂಟಿಲೇಟರ್‍ಗಳನ್ನು ಬಳಸಲು ತರಬೇತಿಯುಳ್ಳ ಅರಿವಳಿಕೆ ತಜ್ಞರ ಮತ್ತು ತಂತ್ರಜ್ಞರ ಕೊರತೆ ಹೆಚ್ಚಿದೆ. ಕೋವಿಡ್ ಈಗ ನಗರಗಳಿಂದ ಹಳ್ಳಿಗಳಿಗೂ ವ್ಯಾಪಿಸುತ್ತಿದೆ. ತಾಲೂಕು ಹೋಬಳಿ ಮಟ್ಟದಲ್ಲಿ ಚಿಕಿತ್ಸಾ ಸೌಕರ್ಯಗಳನ್ನು ವ್ಯಾಪಕವಾಗಿ ವಿಸ್ತರಿಸಲು ಜಿಲ್ಲಾಡಳಿತ ಸಜ್ಜಾಗಬೇಕು. ಆಸ್ಪತ್ರೆಯ ಆಡಳಿತ ಮಂಡಳಿಯವರು ಕೋವಿಡ್ ರೋಗಿಗಳೊಂದಿಗೆ ಅಮಾನವೀಯವಾಗಿ ವರ್ತಿಸುವುದು ನಿಲ್ಲಬೇಕು.
ತುರ್ತು ಪರಸ್ಥಿತಿಯಲ್ಲಿ ಆಸ್ಪತ್ರೆ ಮುಂದೆ ರೋಗಿಗಳನ್ನು ಕಾಯಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಆರೋಗ್ಯ ವ್ಯವಸ್ಥೆಯ ಖಾಸಗೀಕರಣ ಮತ್ತು ವ್ಯಾಪಾರೀಕರಣದ ಪರಿಣಾಮವಾಗಿ ಇಡೀ ದೇಶವೇ ಪರಿತಪಿಸುವಂತಾಗಿದೆ. ಕೊರತೆ ಸೃಷ್ಠಿಯಾಗುತ್ತಿದ್ದಂತೆ ಜೀವರಕ್ಷಕ ಔಷಧಿಗಳ ಬೆಲೆ ಗಗನಕ್ಕೇರಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಲಾಭದ ದಾಹ ಮಾನವೀಯತೆಯನ್ನೇ ನಾಶಗೊಳಿಸುತ್ತಿದೆ. ಲೂಟಿಕೋರ ಬಂಡವಾಳಶಾಹಿ ವ್ಯವಸ್ಥೆಯ ನಿಜ ಬಣ್ಣ ಬಯಲಾಗುತ್ತಿದೆ ಎಂದು ಕಿಡಿಕಾರಿದರು.
ಜಿಲ್ಲೆಯಾದ್ಯಂತ ಕೊರೊನಾ ಚಿಕಿತ್ಸೆಗೆ ಇರುವ ಕೊರತೆಯನ್ನು ನೀಗಿಸಲು ಎಚ್‍ಕೆಆರ್‍ಡಿಬಿ ಯಿಂದ ಹಣ ಬಿಡುಗಡೆ ಮಾಡಬೇಕು. ರೋಗಿಗಳಿಗೆ ಉತ್ತಮ ಆಹಾರ ಮತ್ತು ಔಷಧ ಸಿಗುವಂತೆ ನೋಡಿಕೊಳ್ಳಬೇಕು. ಜಿಲ್ಲಾಸ್ಪತ್ರೆಯ ಹೊರಗೆ ಇರುವ ಬೌನ್ಸರ್‍ಗಳ ಕಾಟಕ್ಕೆ ಕಡಿವಾಣ ಹಾಕಬೇಕು.
ಆಮ್ಲಜನಕ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕು. ಮೃತ ವ್ಯಕ್ತಿಗಳ ಗೌರವಯುತ ಅಂತ್ಯಸಂಸ್ಕಾರಕ್ಕೆ ಬೇಕಾದ ಪೂರ್ವ ತಯಾರಿ ಜಿಲ್ಲಾಡಳಿತವೇ ಮಾಡಬೇಕು. ಉದ್ಯೋಗ ಖಾತ್ರಿ ಕೂಲಿ ರೂ.600ಕ್ಕೆ ಹೆಚ್ಚಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆರ್.ಕೆ.ವೀರಭದ್ರಪ್ಪ ಆಗ್ರಹಿಸಿದರು.
ಪಕ್ಷದ ಮುಖಂಡರಾದ ಗುಂಡಣ್ಣ ಕುಂಬಾರ, ಶರಣು ಹೇರೂರ, ಶ್ರೀಶೈಲ ಕೆಂಚಗುಂಡಿ, ವೇಂಕಟೇಶ ದೇವದುರ್ಗ, ರಾಜು ಒಡೆಯರ್, ಅರುಣಕುಮಾರ ಹಿರೇಬಾನರ ಆನ್‍ಲೈನ್ ಚಳುವಳಿಯಲ್ಲಿ ಪಾಲ್ಗೊಂಡಿದ್ದರು.