ಶಹಾಬಾದ: ಸಮಾಜದ ಸುಧಾರಣೆಗೆ ಶ್ರಮಿಸಿದ ಆದಿ ಗುರು ಶಂಕರಾಚಾರ್ಯರರು ದೇಶದ ವಿವಿದೆಡೆ ಸಂಚರಿಸಿ ಅದ್ವೈತ ತತ್ವವನ್ನು ಸಾರುತ್ತಾ ಜಾಗೃತಿ ಮೂಡಿಸಿ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದ್ದರು ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.
ಅವರು ಸೋಮವಾರ ನಗರದ ನಗರಸಭೆಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅವರು ತಮ್ಮ ಜೀವಿತಾವಧಿಯಲ್ಲಿ ಭಗವದ್ಗೀತೆ, ಉಪನಿಷತ್ತು, ಬ್ರಹ್ಮಸೂತ್ರಗಳಿಗೆ ಬಾಷ್ಪವನ್ನು ಬರೆದ ಮೊದಲಿಗರಾಗಿದ್ದರು. ಯಾವುದೇ ಮತ, ಪಂಥವನ್ನು ಸ್ಥಾಪಿಸದೆ ವೇದ ಸಂಪ್ರದಾಯವನ್ನು ಎತ್ತಿ ಹಿಡಿದಿದ್ದರು ಎಂದರು.
ನಿವೃತ್ತ ಪ್ರಾಧ್ಯಾಪಕ ಶಂಕರ ಸೋಮ್ಯಾಜಿ ಮಾತನಾಡಿ, ಭಾರತದಲ್ಲಿ ಹಿಂದೂ ಧರ್ಮ 8 ನೇ ಶತಮಾನದಲ್ಲಿ ಸಂಕಷ್ಟ ಎದುರಿಸಿತ್ತು. ಈ ಸಂದರ್ಭದಲ್ಲಿ ಅದ್ವೈತ ಸಿದ್ದಾಂತದಡಿಯಲ್ಲಿ ವೈಚಾರಿಕತೆಯಲ್ಲಿ ಹೊಸ ಕ್ರಾಂತಿ ನಡೆಸಿದರು. ದೇಶದ ನಾಲ್ಕು ದಿಕ್ಕಿನಲ್ಲೂ ಸಂಚರಿಸಿ ಮಠಗಳು, ದೇವಾಲಯಗಳು, ಗುರುಪೀಠಗಳು, ಗುರು ಕುಲ ಹೀಗೆ ಅನೇಕ ಕಾರ್ಯಗಳೊಂದಿಗೆ ಹಿಂದೂ ಧರ್ಮವನ್ನು ಸಂರಕ್ಷಿಸಿದ್ದರು ಎಂದು ಹೇಳಿದರು.
ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ನಗರಸಭೆಯ ವ್ಯವಸ್ಥಾಪಕ ಶಂಕರ ಇಂಜಗನೇರಿ, ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ, ನಾರಾಯಣರೆಡ್ಡಿ, ಬ್ರಾಹ್ಮಣ ಸಮಾಜದ ಗಜಾನನ ಕುಲಕರ್ಣಿ,ಚಂದ್ರಕಾಂತ ಜೋಷಿ, ಶ್ರೀಧರ ಕುಲಕರ್ಣಿ, ವಿಲಾಸ ಪೊದ್ದಾರ, ಶ್ರೀದರ ಜೋಷಿ ಸೇರಿದಂತೆ ಅನೇಕರು ಇದ್ದರು.