ದೇವೇಗೌಡರು ಭಾರತದ ಪ್ರಧಾನಿಯಾಗಿ ಇಂದಿಗೆ 25 ವರ್ಷ..!

0
33

ಜನಪರ, ರೈತಪರ ಹೋರಾಟದಲ್ಲಿ ಮುಂಚೂಣಿಯಲ್ಲಿದಗದವರು, ಆರು ದಶಗಳ ಕಾಲ ಸುದೀರ್ಘ ರಾಜಕಾರಣ ಮಾಡುತ್ತಾ ಬಂದಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಭಾರತದ ಪ್ರಧಾನಿಯಾಗಿ ನಾಳೆ ಗೆ 25 ವರ್ಷವಾಗಲಿದೆ.

ಭಾರತದ ಪ್ರಧಾನಿ ಹುದ್ದೆ ಉತ್ತರ ಭಾರತದವರಿಗೆ ಸೀಮಿತ ಎಂಬಂತಿದ್ದ ಅವಧಿಯಲ್ಲಿ ದಕ್ಷಿಣ ಭಾರತದ ಅದರಲ್ಲೂ ಕನ್ನಡಿಗರಾದ ದೇವೇಗೌಡರು 1996 ಜೂನ್ ಒಂದರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು.

Contact Your\'s Advertisement; 9902492681

ತೃತೀಯರಂಗ ಸರ್ಕಾರದ ನೇತೃತ್ವ ವಹಿಸಿ ಹನ್ನೊಂದು ತಿಂಗಳು ಯಾವುದೇ ಆರೋಪವಿಲ್ಲದಂತೆ, ಕಪ್ಪು ಚುಕ್ಕೆಗೆ ಅವಕಾಶ ಇಲ್ಲದಂತಹ ಆಡಳಿತ ನಡೆಸಿದ ಪ್ರಧಾನಿ ದೇವೇಗೌಡರು ಎಂಬ ಕೀರ್ತಿಗೆ ಗೌಡರು ಭಾಜನರಾದರು.
ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ವಾಪಸ್ಸು ಪಡೆದಾಗ ಕುರ್ಚಿಗಾಗಿ ಅಂಟಿಕೊಳ್ಳದೇ, ಪ್ರಧಾನಿ ಹುದ್ದೆ ಬಿಟ್ಟು ಬಂದವರು‌. ಪ್ರಧಾನಿ ಹುದ್ದೆ ಉಳಿಸಿಕೊಳ್ಳುವ ಅವಕಾಶವಿದ್ದರೂ ತತ್ವ, ಸಿದ್ದಾಂತಕ್ಕೆ ಬದ್ಧರಾಗಿ ಬಿಜೆಪಿ ಬೆಂಬಲವನ್ನು ನಿರಾಕರಿಸಿದ್ದವರು‌.

ಹಾಗಂತ ದೇವೇಗೌಡರು ಶುದ್ಧ ರಾಜಕಾರಣ ಮಾಡದವರು ಅಂತ ಅಲ್ಲ. ದೇವೇಗೌಡರೂ ಅವಕಾಶವಾದಿ ರಾಜಕಾರಣ ಮಾಡಿದವರು.

ಆಕಸ್ಮಿಕವಾಗಿ ದೇವೇಗೌಡರು ಪ್ರಧಾನಿಯಾದರು ಎಂಬ ಮಾತಿದ್ದರೂ ಅವರ ಸುದೀರ್ಘ ಹೋರಾಟದ ಫಲ ಮಾತ್ರವಲ್ಲದೆ, ಕರ್ನಾಟಕದ ಮುಖ್ಯಮಂತ್ರಿಯಾಗಿ ಮಾಡಿದ್ದ ಅಭಿವೃದ್ಧಿಪರ ಕಾರ್ಯಗಳು ಪ್ರಧಾನಿಯಾಗುವಂತೆ ಮಾಡಿದವು ಎಂದರೆ ತಪ್ಪಾಗಲಾರದು‌.

ಗೌಡರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಅಂದರೆ 1996 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜನತಾದಳ 16 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಕೇಂದ್ರದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ತೃತೀಯರಂಗ ಅಸ್ಥಿತ್ವಕ್ಕೆ ಬಂದು ಅದರ ನೇತೃತ್ವವನ್ನು ದೇವೇಗೌಡರು ವಹಿಸಿಕೊಳ್ಳುವಂತಾಯಿತು. ಕಾಂಗ್ರೆಸ್ ತೃತೀಯರಂಗ ಸರ್ಕಾರಕ್ಕೆ ಬೆಂಬಲವನ್ನು ನೀಡಿತ್ತು.

ಸದಾ ರೈತಪರ ಕಾಳಜಿ ಹೊಂದಿದ್ದ ಗೌಡರು ಪ್ರಧಾನಿಯಾಗಿ ರಾಷ್ಟ್ರದಲ್ಲಿ ತ್ವರಿತ ನೀರಾವರಿ ಯೋಜನೆಯನ್ನು ಜಾರಿಗೆ ತಂದವರು. ರೈತ ಕುಟುಂಬದಿಂದ ಬಂದವರು ಎಂಬ ಹಿರಿಮೆ ಅವರ ಬೆನ್ನಿಗಿತ್ತು.

ಹಿಂದಿ ಭಾಷೆ ಗೊತ್ತಿಲ್ಲ ಎಂಬ ಟೀಕೆಗಳಿಗೆ ತಮ್ಮ ಆಡಳಿತದ ಮೂಲಕವೇ ಉತ್ತರ ಕೊಟ್ಟರು. ಇದುವರೆಗೂ ಪ್ರಧಾನಿ ಹುದ್ದೆ ಅಲಂಕರಿಸಿದ ಏಕೈಕ ಕನ್ನಡಿಗ ದೇವೇಗೌಡರೇ ಆಗಿದ್ದಾರೆ‌.

ದಶಕಗಳ‌ ಕಾಲ ಜನಪರ, ರೈತಪರ, ಕಾವೇರಿ ನದಿ ನೀರಿಗಾಗಿ , ಗಡಿ ವಿಚಾರ, ಕನ್ನಡ ಭಾಷೆಯ ಸ್ಥಾನ‌ಮಾನಕ್ಕೆ ನಿರಂತರವಾಗಿ ಹೋರಾಟ ಮಾಡುತ್ತಾ ಬಂದವರು. ಅಧಿಕಾರ ಇರಲಿ ಇಲ್ಲದಿರಲಿ ರೈತಪರ ಹೋರಾಟ ಮಾಡುತ್ತಲೇ ಬಂದವರು‌.

ರಾಜಕೀಯವಾಗಿ ಹಲವು ಸೋಲು ಗೆಲವು ಕಂಡವರು. ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಿ ಸೋತರೂ ಅವರ ಹೋರಾಟದ ಛಲ ಮಾತ್ರ ಮಂಕಾಗಲಿಲ್ಲ.

ಆದರೆ ರಾಜ್ಯ ಸಭಾ ಸದಸ್ಯರಾಗಿ ಅವರು ಇತ್ತೀಚೆಗೆ ಮಾಡಿದ ಬಾಷಣ ಜನ ಮೆಚ್ಚುವಂತದ್ದು. ದೆಹಲಿಯಲ್ಲಿ ನಡೆಯುತ್ತಿದ್ದ ರೈತರ ಹೋರಾಟದ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ದೇವೇಗೌಡರು ಗಣರಾಜ್ಯೋತ್ಸವ ದಿನದಂದು ನಡೆದ ದಾಂಧಲೆಯನ್ನು ಖಂಡಿಸಿ, ಹಿಂಸಾಚಾರಕ್ಕೆ ರೈತರು ಕಾರಣರಲ್ಲ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದರು.

ಈ ಕೃತ್ಯವನ್ನು ಯಾರು ಎಸಗಿದರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ದೇವೇಗೌಡರು, ದೆಹಲಿ ಗಡಿಯಲ್ಲಿ ಕೇಂದ್ರ ಸರ್ಕಾರ ಕಾಂಕ್ರೀಟ್ ಗೋಡೆ ನಿರ್ಮಿಸಿದ ಕ್ರಮವನ್ನೂ ವಿರೋಧಿಸಿದರು‌ ಕೂಡ. ಸರ್ಕಾರ ಈ ವಿಚಾರವನ್ನು ಶಾಂತಿಯುತವಾಗಿ ಬಗೆಹರಿಸಬೇಕು ಎಂದು ದೇವೇಗೌಡರು ಸಲಹೆ ಮಾಡಿದ್ದರು. ಈ ರೀತಿ ಸರ್ಕಾರದ ವಿರುದ್ಧ ಚಾಟಿ ಬೀಸುತ್ತ ರೈತರ ಪರ ನಿಲ್ಲುವ ಎದೆಗಾರಿಕೆಯನ್ನು ತೋರಿಸುತ್ತಾ ದೇವೇಗೌಡರು ಇಂದಿಗೂ ರೈತ ಪರ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

‌1962 ರಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ದೇವೇಗೌಡರು, ರೈತರ ಉದ್ದಾರಕ್ಕೆ ಹಲವು ಹೋರಾಟವನ್ನು ರೂಪಿಸಿದ್ದರಿಂದ ಮಣ್ಣಿನ ಮಗ ಎಂದೇ ಚಿರಪರಿಚಿತ. ರಾಜ್ಯದ ಸಮಸ್ಯೆಯನ್ನು ದೆಹಲಿಯ ಪಾರ್ಲಿಮೆಂಟ್ ನಲ್ಲಿ ಅಚ್ಚುಕಟ್ಟಾಗಿ ವಿವರಿಸಿ ಹಲವಾರು ಯೋಜನೆ ಸಮಸ್ಯೆಯನ್ನು ಬಗೆಹರಿಸಿದ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ. ರಾಜ್ಯ ಲೋಕಸಭಾ ಸದಸ್ಯರ ಪೈಕಿ ಇದುವರೆಗೆ ಓರ್ವ ಕನ್ನಡಿಗ ರೈತಪರ ಗಟ್ಟಿ ಧ್ವನಿ ಯಾಗಿ ದೆಹಲಿಯಲ್ಲಿ ದೇವೇಗೌಡರು. ಮಾತನಾಡಿದ್ದಾರೆ ಎಂದರೆ ತಪ್ಪಾಗಲಾರದು. ರಾಜಕೀಯ ಕ್ಷೇತ್ರದಲ್ಲಿ ಹಗಲಿರುಳು ದುಡಿಯುವ ರಾಜಕಾರಣಿ ಎಂದೇ ಜನಜನಿತವಾಗಿದ್ದಾರೆ.

88 ನೇ ವಯಸ್ಸಿನಲ್ಲಿಯೂ ರಾಜಕೀಯದಲ್ಲಿ ಸಕ್ರಿಯವಾಗಿರುವ ಮೂಲಕ ಯುವ ರಾಜಕೀಯ ನಾಯಕರಿಗೆ ಸ್ಪೂರ್ತಿಯೂ ಹೌದು. ಹಲವು ರಾಜಕಾರಣಿಗಳಿಗೆ ಗುರುವೂ ಹೌದು. ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ, ಹಲವು ಹಿಂದುಳಿದ ವರ್ಗಗಳಿಗೆ ಮೀಸಲಾತಿಯಲ್ಲಿ ಅವಕಾಶ ದೊರಕಿಸಿಕೊಟ್ಟದ್ದು ಅವರ ಆಡಳಿತದ ವೈಖರಿ ಪ್ರಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದ ದೇವೇಗೌಡರು, 1962 ರವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದು ನಂತರ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ವಿಧಾನ ಸಭೆಗೆ ಚುನಾಯಿತರಾದರು.

ಮುಂದಿನ ಮೂರು ಚುನಾವಣೆಗಳಲ್ಲಿ ಸತತವಾಗಿ ಹೊಳೆನರಸೀಪುರ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದರು. 1972 ರಿಂದ 1976 ರವರೆಗೆ ಮತ್ತು ನವೆಂಬರ್ 1976 ರಿಂದ 1977 ರ ವರೆಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.

1975-76ರ ತುರ್ತು ಪರಿಸ್ಥಿತಿಯಲ್ಲಿ ಬಂಧನ ಕ್ಕೊಳಗಾಗಿದ್ದ ದೇವೇಗೌಡರು ನಂತರ ಕರ್ನಾಟಕ ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 1987 ರಲ್ಲಿ ನೀರಾವರಿ ಖಾತೆಗೆ ಸಾಕಷ್ಟು ಹಣ ಮಂಜೂರು ಮಾಡದೆ ಇದ್ದುದರ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವ ಮೂಲಕ ರೈತರ ಪರ ನಿಂತರು.

ಜನತಾದಳದ ರಾಜ್ಯಾಧ್ಯಕ್ಷರಾದ ದೇವೇಗೌಡರು 1994 ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಚುನಾಯಿತರಾಗಿ ಕರ್ನಾಟಕ ರಾಜ್ಯದ 14 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1996 ರಲ್ಲಿ ಎಚ್.ಡಿ.ದೇವೇಗೌಡರು‌ ದೇಶದ 11 ನೇ ಪ್ರಧಾನಿಯಾಗಿ ಪಟ್ಟ ಅಲಂಕರಿಸುವ ಮೂಲಕ ಕನ್ನಡ‌ ನಾಡಿನ ಏಕೈಕ ಪ್ರಧಾನಿ ಎಂಬ‌ ಕೀರ್ತಿಗೂ ಪಾತ್ರರಾದರು. ಇದು ನಾಡಿನ‌ ಜನರು ಹೆಮ್ಮೆ ಪಡುವ ಸಂಗತಿಯಾಗಿತ್ತು.

89 ನೇ ಹುಟ್ಟುಹಬ್ಬ ಆಚರಣೆಯನ್ನು ಕೋವಿಡ್ ಸಂಕಷ್ಟದಿಂದಾಗಿ ಸರಳವಾಗಿ ಆಚರಿಸಿಕೊಂಡರು. ಹುಟ್ಟಹಬ್ಬದ ಸಂದರ್ಭದಲ್ಲಿ ಕೋವಿಡ್ ಸಂಕಷ್ಟದಲ್ಲಿ ಇರುವವರಿಗೆ ನೆರವಾಗಲು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಕೋವಿಡ್ ಸಮಸ್ಯೆ ಪರಿಹಾರಕ್ಕೆ ಹಲವು ಸಲಹೆಗಳನ್ನು ನೀಡಿರುವುದು ದೇವೇಗೌಡರ ಜನಪರ ಳಕಳಿಯ ಪ್ರತೀಕ ಎಂದರೆ ತಪ್ಪಾಗಲಾರದು..!

# ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here