ಕಲಬುರಗಿ: ದೇಶದಲ್ಲಿ ಬೆಲೆ ಏರಿಕೆ ಬಿಸಿಯಲ್ಲಿ ಜನ ಸಾಮಾನ್ಯರು ನರಳುತ್ತಿದ್ದಾರೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಳೆದ 5 ತಿಂಗಳಲ್ಲಿ 53 ಬಾರಿ ಹೆಚ್ಚಳವಾಗಿದೆ. ಇದು ಸಾಮಾನ್ಯರ ಬದುಕನ್ನೇ ಬುಡಮೇಲು ಮಾಡುತ್ತಿದೆ, ಇದಕ್ಕೆಲ್ಲ ಕೇಂದ್ರ ಹಾಗೂ ರಾಜ್ಯ ಸರಕಾರಗಳ ತಪ್ಪು ತೆರಿಗೆ ನೀತಿಯೇ ಮೂಲ ಕಾರಣವೆಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ , ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಉಭಯ ಸರಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಬಸವರಾಜ ರಾಯರೆಡ್ಡಿಯವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಅಜಯ್ ಸಿಂಗ್ ಜನೇವರಿಯಲ್ಲಿ 10, ಫೆಬ್ರುವರಿಯಲ್ಲಿ 16, ಮಾರ್ಚ್‍ನಲ್ಲಿ 10 ಹಾಗೂ ಮೇ ತಿಂಗಳಲ್ಲಿ 17 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿ ಕೇಂದ್ರ ಜನರ ಬದುಕಿನಲ್ಲಿಚೆಲ್ಲಾಟವಾಡುತ್ತಿದೆ ಎಂದು ಗುಡುಗಿದರು.
ಏಪ್ರಿಲ್ ತಿಂಗಳಲ್ಲಿ ಪಂಚ ರಾಜ್ಯಗಳ ಚುನಾವಣೆ ಬಂತು, ಆಗ ಇಂಧನ ಬೆಲೆ ಹೆಚ್ಚಿಸಲಿಲ್ಲ, ಚುನಾವಣೆ ಮುಗಿದು ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಮೇ ತಿಂಗಳಲ್ಲಿ ಮತ್ತೆ ಬೆಲೆ ಹೆಚ್ಚಳ ಶುರುವಾಯ್ತು. ಕೇಂದ್ರ ಚುನಾವಣೆಯ ಲಾಭ ಗಮನದಲ್ಲಿಟ್ಟುಕೊಂಡು ಇಂಧನ ಬೆಲೆ ಹೆಚ್ಚಿಸುತ್ತ ಆಡವಾಡುತ್ತಿದೆ. ಇದಕ್ಕೆ ಬಡವರು ಬಲಿಯಾಗುತ್ತಿದ್ದಾರೆ. ದೇಶದ ಪ್ರಗತಿಗೆ ಬಹದೊಡ್ಡ ಹೊಡೆತ ಬೀಳುತ್ತಿದೆ ಎಂದು ದೂರಿದರು.
ಯೂಪಿಎ ಅವಧಿಯಲ್ಲಿ ಇಂಧನ ಬೆಲೆ ಜನರಿಗೆ ಕೈಗೆಟುವ ದರದಲ್ಲಿತ್ತು. ಈಗ 100 ರುಪಾಯಿಗೆ 1 ಲೀಟರ್ ಪೆಟ್ರೋಲ್, 94 ರುಪಾಯಿಗೆ 1 ಲೀಟರ್ ಡೀಸೆಲ್ ಆಗಿದೆ. ಜನ ಬದುಕಬೇಕಾದರೂ ಹೇಗೆ? ಕೊರೋನಾದಿಂದಾಗಿ ಮೊದಲೇ ತೊಂದರೆಗೆ ಸಿಲುಕಿರುವ, ಹಣ- ಉದ್ಯೋಗ, ನೆಮ್ಮದಿ ಕಳೆದುಕೊಂಡು ಸಂಕಷ್ಟದಲ್ಲಿರುವ ದೇಶದ ಜನತೆಗೆ ಇಂಧನ ಬೆಲೆಯಿಂದ ಮತ್ತೂ ತೊಂದರೆ ಹೆಚ್ಚುತ್ತಿದೆ. ಗಾಯದÀ ಮೇಲೆ ಬರೆ ಎಳೆದಂತಾಗಿದೆ. ಮೆಹುಲ್, ನೀರವ್, ಅದಾನಿ, ಅಂಬಾನಿಯಂತಹವರಿಗೆ ನೆರವು ನೀಡಲು ಕೇಂದ್ರ ಹೀಗೆಲ್ಲ ಆಟವಾಡುತ್ತಿದೆ. ಪೆಟ್ರೋಲ್ ಉತ್ಪನ್ನಗಳ ಮೇಲಿನ ಎಕ್ಸೈಜ್ ಸುಂಕ ವಿಪರೀತ ಮಾಡಿದೆ ಎಂದು ಕೇಂದ್ರ ಸರಕಾರದ ಈ ಕ್ರಮಗಳನ್ನು ಜನವಿರೋಧಿ, ಬಡವರ ವಿರೋಧಿ ಎಂದು ಡಾ. ಅಜಯ್ ಸಿಂಗ್ ಬಣ್ಣಿಸಿದರು.