ಇಂಧನ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಹಗಲು ದರೋಡೆಗಿಳಿದಿದೆ: ಪ್ರಿಯಾಂಕ್ ಖರ್ಗೆ

0
23

ಕಲಬುರಗಿ: ಲಾಕ್ ಡೌನ್ ಸಂದರ್ಭದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುವ ಕ್ರಮ ಕೈಗೊಳ್ಳಬೇಕಿದ್ದ ಮೋದಿ ಸರ್ಕಾರ ಜನರ ಜೇಬಿಗೆ ಕೈಹಾಕಿ ಲೂಟಿ ಮಾಡುತ್ತಿದೆ ಎಂದು ಆರೋಪಿಸಿರುವ ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಅವರು ಕಳೆದ ಏಳು ವರ್ಷಗಳಲ್ಲಿ ಇಂಧನದ ಮೇಲಿನ ತೆರಿಗೆಯನ್ನು ಸುಮಾರು 310 % ರಷ್ಟು ಹೆಚ್ಚಿಸುವ ಮೂಲಕ ಬಿಜೆಪಿ ಸರ್ಕಾರ ಹಗಲು ದರೋಡೆಗಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ‌ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದಿನನಿತ್ಯ ಪೆಟ್ರೋಲ್ ದರ ಏರಿಸಿದ್ದು ಯಾಂತ್ರಿಕೃತ ಕೃಷಿ ನಡೆಸುವ ರೈತರು, ವ್ಯಾಪಾರಿಗಳು, ಆಟೋ ಹಾಗೂ ಕ್ಯಾಬ್ ಚಾಲಕರಿಗೆ ಹಾಗೂ ಲಾರಿ ಮಾಲೀಕರಿಗೆ ನೇರವಾಗಿ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

Contact Your\'s Advertisement; 9902492681

ಕೇವಲ ಪೆಟ್ರೋಲಿಯಂ ಬೆಲೆ ಮಾತ್ರ ಹೆಚ್ಚಳ ಮಾಡದೇ ದಿನನಿತ್ಯದ ಗೃಹೋಪಯೋಗಿ ಆಹಾರ ಧಾನ್ಯಗಳ ಬೆಲೆ ಏರಿಸುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆಯಲಾಗಿದೆ. ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಸೂಚ್ಯಂಕ ದರದ ಪ್ರಕಾರ ಬೇಳೆ ಕಾಳುಗಳ ದರ ಶೇ 12.54, ಅಡುಗೆ ಎಣ್ಣೆ ದರ ಶೇ 25.91, ಮೊಟ್ಟೆ ಹಾಗೂ ಮಾಂಸದ ಮೇಲಿನ ದರ ಶೇ 11.14 ಹಾಗೂ ಮೀನು ಮೇಲಿನ ದರ ಶೇ 16.68 ಹೆಚ್ಚಾಗಿದೆ. ಇದಕ್ಕೆಲ್ಲ ಮೂಲ ಕಾರಣ ಇಂಧನ ಬೆಲೆ ಏರಿಕೆಯಾಗಿರುವುದು ಎಂದು ಅವರು ವಿವರಿಸಿದ್ದಾರೆ.

ತೆರಿಗೆ ಭಯೋತ್ಪಾದನೆ ಮೂಲಕ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ಒಂದು ನೂರು ರೂಪಾಯಿಗೆ ಏರಿಸಿರುವ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಪಕ್ಷದ ನಾಯಕರಾದ ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ ಶಾಸಕರಾದ ಹಾಗೂ ಸಚೇತಕರಾದ ಅಜಯ್ ಸಿಂಗ್ ಹಾಗೂ ಎಂ ವೈ ಪಾಟೀಲ್, ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ ಸೇರಿದಂತೆ ನೂರಾರು ಕಾರ್ಯಕರ್ತರು ಸೈಕಲ್ ಜಾಥಾ ನಡೆಸುವ ಮೂಲಕ ಕೇಂದ್ರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಲಾಯಿತು.

ಇಂದು ಸಹ ಕಲಬುರಗಿಯ ಇಂಧನ ಕೇಂದ್ರದ ಬಳಿ ಪ್ರತಿಭಟನೆ ನಡೆಸಿ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ವಾಹನ ಸವಾರರಿಗೆ ರೂ 50 ನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ನೀಡಲಾಯಿತು. ಈ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ‌ ಬಂದರೆ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಇಳಿಸುತ್ತೇವೆ ಎನ್ನುವ ಭರವಸೆ ನೀಡಲಾಯಿತು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ತೆರಿಗೆ ಹೆಚ್ಚಳವನ್ನು ತೆರಿಗೆ ಭಯೋತ್ಪಾದನೆ ಎಂದು ಹೇಳಿರುವ ಶಾಸಕರು, ರೂ 35 ಮೂಲ ಬೆಲೆ ಹೊಂದಿರುವ ಪೆಟ್ರೋಲ್ ತೆರಿಗೆಯನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಲಾಕ್ ಡೌನ್ ನಿಂದ ದೇಶದ ಜನತೆ ತೀವ್ರ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಜನರ‌ ಜೇಬಿಗೆ ಕೈ ಹಾಕಿ ಕೇಂದ್ರ ಸರ್ಕಾರ ಲೂಟಿ ಮಾಡುತ್ತಿರುವುದು ಅಕ್ಷಮ್ಯವಾಗಿದೆ. ಹಾಗಾಗಿ, ಈ ಕೂಡಲೇ ಇಂಧನದ ಮೇಲೆ ವಿಧಿಸುತ್ತಿರುವ ಹೆಚ್ಚುವರಿ ತೆರಿಗೆಯನ್ನು ರದ್ದುಗೊಳಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here