ಕಲಬುರಗಿ: 2020-21 ಹಾಗೂ 2021-22 ನೇ ಸಾಲಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಸೇರಿದ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದಲ್ಲಿ ನಿಯಮಾನುಸಾರ ಅರ್ಹರಿರುವ ವ್ಯಕ್ತಿಗೆ ಸ್ವಯಂ ಉದ್ಯೋಗ , ಕೌಶಲ್ಯಾಭಿವೃದ್ಧಿ ಸಂಸ್ಥೆಗಳಿಂದ ತರಬೇತಿ ಪಡೆದ ಫಲಾಪೇಕ್ಷಿಗೆ ಸಣ್ಣ ಮತ್ತು ಮಧ್ಯಮ ಉದ್ದಿಮೆ ಹಾಗೂ ಲಾಭದಾಯಕ ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡು ಕುಟುಂಬ ನಿರ್ವಹಣೆ ಮಾಡುವ ಸಂಬಂಧ ಇಂತಹ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್‌ನ್ನು ಘೋಷಿಸಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಅಭಿನಂದಿಸಿದ್ದಾರೆ.
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದಿಂದ ಗರಿಷ್ಠ ಸಹಾಯಧನ ರೂ .1.00 ಲಕ್ಷ ಹಾಗೂ ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಅಭಿವೃದ್ಧಿ ನಿಗಮ , ( NSFDC ) ನವದೆಹಲಿ ಇವರಿಂದ ಗರಿಷ್ಠ ರೂ .4.00 ಲಕ್ಷ , ಒಟ್ಟು ಘಟಕ ವೆಚ್ಚ ರೂ .5.00 ಲಕ್ಷಗಳ ವರೆಗೆ ನಿಗಮದಿಂದಲೇ ನೇರವಾಗಿ ಸಾಲ ಹಾಗೂ ಸಹಾಯಧನ ಮಂಜೂರು ಮಾಡುವ ವಿಶೇಷ ಯೋಜನೆಯನ್ನು ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ಘೋಷಣೆ ಹೋರಡಿಸಲು ರಾಜ್ಯ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ವಕ್ತಾರರಾದ ಛಲವಾದಿ ನಾರಾಯಣ ಸ್ವಾಮಿ ಯವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ನೋವಿನಲ್ಲಿರುವ ಕುಟುಂಬಗಳು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಶಕ್ತರಾಗಲು ಮಂದಾಗಬೇಕೆಂದು ಅಂಬಾರಾಯ ಅಷ್ಠಗಿ ದಲಿತ ಸಮುದಾಯಕ್ಕೆ ಕರೆ ನೀಡಿದ್ದಾರೆ.