ಭೂ ಸುಧಾರಣೆ ಕಾಯ್ದೆ ಮತ್ತು ದೇವರಾಜ ಅರಸೂ: ಬದಲಾವಣೆಯ ಹರಿಕಾರನಾದದ್ದೂ

0
36

ದೇವರಾಜ ಅರಸು ಭೂ ಸುಧಾರಣೆಯ ಶಾಸನ ರಚನೆ ಮಾಡುವ, ಜಾರಿಗೆ ತರುವ, ವಿಧಾನಮಂಡಲದಲ್ಲಿ ಈ ಶಾಸನವನ್ನು ಮಂಡಿಸುವ ಮಹತ್ವದ ಜವಾಬ್ದಾರಿಯನ್ನು ಅಂದಿನ ಕಂದಾಯ ಸಚಿವ ಹುಚ್ಚಮಾಸ್ತಿಗೌಡರಿಗೆ ವಹಿಸಿಕೊಟ್ಟರು. ಭೂ ಸುಧಾರಣೆ ಖಾತೆ ಮಂತ್ರಿ ಸುಬ್ಬಯ್ಯ ಶೆಟ್ಟರನ್ನು ಜಂಟಿ ಸಮಿತಿಗೆ ನೇಮಕ ಮಾಡಿದರು. ಜೆ.ಎಚ್.ಪಟೇಲ್ ರಂತಹ ಬಹುದೊಡ್ಡ ಜಮೀನ್ದಾರರು ಅರಸು ಬೆಂಬಲಕ್ಕಿದ್ದರು.

ಅಲ್ಲಿಗೆ ಭೂ ಮಾಲೀಕರಾದ ಒಕ್ಕಲಿಗರು, ಕರಾವಳಿಯ ಬಂಟರು ಮತ್ತು ಲಿಂಗಾಯತರು ಅರಸು ಅವರ ಪರ ನಿಂತಂತಾಯಿತು. ಅದೆಲ್ಲಕ್ಕಿಂತ ಹೆಚ್ಚಾಗಿ ಬಹುಸಂಖ್ಯಾತ ಬಡವರು, ಭೂರಹಿತರು ಅರಸರ ಬೆನ್ನಿಗಿದ್ದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಹುಮತ ಗೇಣಿದಾರರ ಪರವಾಯಿತು, ಸೋಲು ಭೂ ಮಾಲೀಕರದ್ದಾಯಿತು.

Contact Your\'s Advertisement; 9902492681

ಮತ್ತೊಂದು ಮುಖ್ಯವಾದ ಗಮನಿಸಲೇಬೇಕಾದ ಅಂಶವೆಂದರೆ, ಭೂ ಶಾಸನ ಮಸೂದೆಯನ್ನು ಬಹಳ ಪ್ರಮುಖವಾಗಿ ಕೋರ್ಟ್ ಗಳ ವ್ಯಾಪ್ತಿಯಿಂದ ಹೊರಗಿಟ್ಟು ಶಾಸನಸಭೆ ತೀರ್ಮಾನಿಸಿತ್ತು. ಕಾಯ್ದೆಯನ್ನು ಜಾರಿಗೆ ತರುವಾಗ ಹಿಂದುಳಿದ ವರ್ಗಗಳ ವರ್ಗೀಕರಣ, ಅರ್ಹರನ್ನು ಆಯ್ಕೆ ಮಾಡಲು ತಾಲೂಕು ಮಟ್ಟದಲ್ಲಿ ಭೂ ನ್ಯಾಯಮಂಡಳಿ ರಚಿಸಲಾಗಿತ್ತು. ಮಂಡಳಿಯಲ್ಲಿ ಸ್ಥಳೀಯ ಶಾಸಕರು, ಹಿಂದುಳಿದ ವರ್ಗದವರೊಬ್ಬರು, ಎಸ್ಸಿ-ಎಸ್ಟಿ ವರ್ಗದವರೊಬ್ಬರು, ಗೇಣಿದಾರ ರೈತರೊಬ್ಬರು ಸದಸ್ಯರಾಗಿರಬೇಕೆಂದು ಕಡ್ಡಾಯ ಮಾಡಿದ್ದಲ್ಲದೇ, ಭೂಮಾಲೀಕ ಮೇಲಿನ ಕೋರ್ಟಿಗೆ ಹೋಗದಂತೆ ಭೂ ನ್ಯಾಯಮಂಡಳಿ ತೀರ್ಮಾನವೇ ಅಂತಿಮ ಎಂಬ ಆದೇಶವನ್ನು ಹೊರಡಿಸಿ, ಗೇಣಿದಾರರನ್ನು ರಕ್ಷಿಸುವ ಕೆಲಸವೂ ನಡೆದಿತ್ತು. ಇದರ ಫಲವಾಗಿ 7,80,000ಕ್ಕಿಂತ ಹೆಚ್ಚು ಬಡ ಗೇಣಿದಾರರು ಭೂ ಮಾಲೀಕರಾದರು. ಇದು ದೇಶದ ಯಾವ ರಾಜ್ಯದಲ್ಲೂ ಆಗದ ಮತ್ತು ಕರ್ನಾಟಕದಲ್ಲಿ ಮಾತ್ರ ಸಾಧ್ಯವಾದ ಕ್ರಾಂತಿಕಾರಕ ಕಾಯ್ದೆಯ ಫಲ.

ಸಮಾಜಿಕ ಬದಲಾವಣಿಯ ಹರಿಕಾರ ದೇವರಾಜ ಅರಸು..!–

70ರ ದಶಕದಲ್ಲಿ ಹಳ್ಳಿಗಳಲ್ಲಿ ಜಮೀನ್ದಾರಿ ಪದ್ಧತಿ ಚಾಲ್ತಿಯಲ್ಲಿತ್ತು. ನೂರಾರು ಎಕರೆ ಭೂಮಿಯುಳ್ಳ ಜಮೀನ್ದಾರರು, ಶ್ರೀಮಂತಿಕೆಯ ಮದದ ಜೊತೆಗೆ ಜಾತಿ ಬಲದೊಂದಿಗೆ ದೌರ್ಜನ್ಯ, ದಬ್ಬಾಳಿಕೆಯಿಂದ ಮೆರೆಯುತ್ತಿದ್ದರು. ಅಧಿಕಾರವರ್ಗ ಕೂಡ ಇವರ ಪರವೇ ಇತ್ತು. ಭೂರಹಿತ ಬಡವರು ಅಸಹಾಯಕತೆಯಿಂದ ನಲುಗಿಹೋಗಿದ್ದರು. ಆದರೆ ದೇವರಾಜ ಅರಸರ ಚಿಂತನಾ ಕ್ರಮಗಳೇ ಬೇರೇಯಾಗಿತ್ತು.

’ಉಳುವವನೆ ಹೊಲದೊಡೆಯ’ ಎಂಬ ಘೋಷವಾಕ್ಯದೊಂದಿಗೆ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸಮಿತಿ ರಚನೆ, ಚರ್ಚೆ, ಕಾನೂನಾತ್ಮಕ ಕ್ರಮಗಳ ಮೂಲಕ ಹೇಳಿದ್ದನ್ನು ಮಾಡಿ ತೋರಿಸಿದರು. ಕಾಯ್ದೆ ಜಾರಿಗೆ ತಂದು, ಬಡವರಿಗೆ ಭೂಮಿಯ ಒಡೆತನ ನೀಡುವ ಮೂಲಕ ದನಿ ಮತ್ತು ಧೈರ್ಯ ನೀಡಿದರು.

ಭೂ ಒಡೆತನ ಎನ್ನುವುದು ಬಡವರಿಗೆ ಸಮಾಜದಲ್ಲಿ ಸ್ಥಾನಮಾನ ತಂದುಕೊಟ್ಟಿತು. ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಿತು. ಸ್ವಾಭಿಮಾನದಿಂದ ಬದುಕುವ ವಾತಾವರಣವನ್ನು ಸೃಷ್ಟಿಸಿತು. ಆ ಮೂಲಕ ದೇವರಾಜ ಅರಸರು ಸಮಾಜದಲ್ಲಿ ಚಾಲ್ತಿಯಲ್ಲಿದ್ದ ಶ್ರೀಮಂತ-ಬಡವ ಎಂಬ ತಾರತಮ್ಯವನ್ನು ಹೊಡೆದುಹಾಕಿದರು.

ಕಾಯ್ದೆ ಜಾರಿಗೆ ತರುವಲ್ಲಿ ಅರಸು ತೋರಿದ ಇಚ್ಛಾಶಕ್ತಿ, ಜನರಲ್ಲಿ ನಂಬಿಕೆ ಹುಟ್ಟಿಸಿತು. ಬಡವರು ಸಹಜವಾಗಿಯೇ ಅರಸರನ್ನು ನಂಬಿದರು, ಬೆಂಬಲಿಸಿದರು. ಸಾಮಾಜಿಕ ಬದಲಾವಣೆಯ ಹರಿಕಾರ ಎಂಬ ಬಿರುದನ್ನೂ ಕೊಟ್ಟರು.

# ಕೃಪೆ– ಬಸುವರಾಜು

# ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here