ಶಹಾಬಾದ: ತಾಯಿ ಆರೋಗ್ಯವಾಗಿದ್ದಾಗ ಮಾತ್ರ ಆರೋಗ್ಯವಂತ ಮಗು ಜನಿಸಲು ಸಾಧ್ಯವಾಗಲಿದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ನಗರದಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿ ಬಿ.ಎಸ್.ಹೊಸಮನಿ ಹೇಳಿದರು.
ಅವರುನಗರದ ಬಾಲಕರ ವಸತಿ ನಿಲಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಆರೋಗ್ಯ ಇಲಾಖೆ ನೇತತ್ವದಲ್ಲಿ ಆಯೋಜಿಸಲಾದ ಅಪೌಷ್ಟಿಕ ಮಕ್ಕಳ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಆರು ವರ್ಷದೊಳಗಿನ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಎಲ್ಲ ಲಸಿಕೆಗಳನ್ನು ಹಾಕಿಸಿ, ಸೂಕ್ತ ಪ್ರಮಾಣದಲ್ಲಿ ಪೌಷ್ಟಿಕ ಆಹಾರವನ್ನು ನೀಡುವುದರ ಜತೆಗೆ ಉತ್ತಮ ಪರಿಸದಲ್ಲಿ ಬೆಳೆಸಬೇಕು. ತಾಯಿ ಗರ್ಭಿಣಿಯಿದ್ದಾಗಲೇ ಒಳ್ಳೆಯ ಆಹಾರ, ಸಕಾಲದಲ್ಲಿ ತಪಾಸಣೆ, ನುರಿತ ವೈದ್ಯ ಹಾಗೂ ದಾದಿಯರಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೆರಿಗೆ ನಂತರ ಮಗುವಿನ ಲಾಲನೆ ಪಾಲನೆಯ ಮುತುವರ್ಜಿ ಹಾಗೂ ಮೆದುಳು ಮತ್ತು ಮನಸ್ಸು ಬೆಳೆಯಲು ಪ್ರಚೋದಕ ವಾತಾವರಣ, ಸೂಕ್ತ ಪ್ರೀತಿ, ಶಿಸ್ತು, ಮಾರ್ಗದರ್ಶನ, ಕಾಯಿಲೆಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಉತ್ತಮ ಪೌಷ್ಟಿಕ ಆಹಾರ ನೀಡಿದಲ್ಲಿ ಮಗುವನ್ನು ರೋಗ ಮುಕ್ತ ಮಾಡಲು ಸಾಧ್ಯ .ಇದಕ್ಕಾಗಿ ನಮ್ಮ ಇಲಾಖೆ ಮಕ್ಕಳ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಸತತವಾಗಿ ಶ್ರಮಿಸುತ್ತಿದೆ ಎಂದರು.
ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿ, ಅಪೌಷ್ಠಿಕತೆ, ರಕ್ತಹೀನತೆ ತೊಡೆದುಹಾಕಲು ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಅಪೌಷ್ಠಿಕತೆ ಸಮಸ್ಯೆ ಎದುರಾಗುವುದಿಲ್ಲ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಗರ್ಭಿಣಿಯರಿಗೆ, ಬಾಣಂತಿಯರಿಗೆ, ಮಕ್ಕಳಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಗರ್ಭಿಣಿಯರ ಆರೋಗ್ಯದ ಮೇಲೆ ಸತತ ನಿಗಾವಹಿಸಬೇಕು, ನಿರಂತರ ತಪಾಸಣೆ ಮಾಡಬೇಕು. ಗರ್ಭಿಣಿಯರಿಗಾಗಿ ಸರ್ಕಾರ ನೀಡುವ ಪೌಷ್ಠಿಕ ಆಹಾರದ ಸೇವನೆ ಕುರಿತಂತೆ ನಿಗಾವಹಿಸಿದರೆ ಅಪೌಷ್ಠಿಕ ಮಕ್ಕಳು ಹುಟುವುದು ನಿಲ್ಲುತ್ತದೆ.ಆ ನಿಟ್ಟಿನಲ್ಲಿ ಕೆಲಸ ಸಾಗಬೇಕೆಂದು ಹೇಳಿದರು.
ಡಾ. ಶಂಕರ್ ರಾಠೋಡ ಮಕ್ಕಳ ತಪಾಸಣೆ ಮಾಡಿದರು. ಮೇಲ್ವಿಚಾರಕಿಯರಾದ ಶಕುಂತಲಾ ಸಾಕರೆ, ಮೀನಾಕ್ಷಿ, ನೇತ್ರಾ, ಸರನಾ , ಲಕ್ಷ್ಮಿ, ಸಂಗಮ್, ರೇಖಾ, ಇಂದಿರಾ ಉಪಸ್ಥಿತರಿದ್ದರು