ಭೂಮಿ ಉಳಿಸಿ ಚಳುವಳಿ ಭುಗಿಲೇಳಲಿ: ಗುಂಡಣ್ಣ: ಆರ್‌ಕೆಎಸ್ ನೇತೃತ್ವದಲ್ಲಿ ರೈತರ ಧರಣಿ

0
31

ವಾಡಿ: ಕೇಂದ್ರ ಸರಕಾರ ಶ್ರೀಮಂತ ಉದ್ಯಮಿಪತಿಗಳಿಗಾಗಿ ಮತ್ತು ಬಂಡವಾಳಗಾರರಿಗಾಗಿ ತನ್ನ ನಿಷ್ಠೆ ಒತ್ತೆಯಿಟ್ಟಿದೆ. ಅನ್ನದಾತ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾನೆ. ಬಂಡವಾಳಿಗರಿಂದ ಭೂಮಿ ಉಳಿಸಿ ಚಳುವಳಿ ದೇಶದಾದ್ಯಂತ ಭೂಗಿಲೇಳಬೇಕಿದೆ ಎಂದು ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ಜಿಲ್ಲಾ ಉಪಾಧ್ಯಕ್ಷ ಗುಂಡಣ್ಣ ಎಂ.ಕೆ ಹೇಳಿದರು.

ಕೇಂದ್ರ ಬಿಜೆಪಿ ಸರಕಾರ ಜಾರಿಗೆ ತರಲು ಮುಂದಾಗಿರುವ ಮೂರು ಕರಾಳ ಕೃಷಿ ಮಸೂದೆಗಳನ್ನು ವಿರೋಧಿಸಿ ಕಳೆದ ಆರು ತಿಂಗಳಿಂದ ದೇಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಆರ್‌ಕೆಎಸ್ ರೈತ ಸಂಘಟನೆ ನೇತೃತ್ವದಲ್ಲಿ ಹಳಕರ್ಟಿ ಗ್ರಾಮದಲ್ಲಿ ನಡೆದ ರೈತರ ಪ್ರತಿಭಟನಾ ಧರಣಿ ಉದ್ದೇಶಿಸಿ ಅವರು ಮಾತನಾಡಿದರು. ಎಪಿಎಂಸಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ಸರಕು ಸೇವಾ ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆ ಹಾಗೂ ವಿದ್ಯುತ್ ಸುಗ್ರೀವಾಜ್ಞೆ ಕಾನೂನುಗಳು ರೈತರ ಪಾಲಿಗೆ ಮರಣ ಶಾಸನಗಳಾಗಿವೆ. ಇಂಥಹ ಜನದ್ರೋಹಿ ಕಾಯ್ದೆಗಳನ್ನು ಜಾರಿಗೆ ತರಲು ತುದಿಗಾಲಮೇಲೆ ನಿಲ್ಲುವ ಮೂಲಕ ಬಿಜೆಪಿ ಸರಕಾರ ದೇಶದ ಅನ್ನದಾತನಿಗೆ ಮಹಾ ದ್ರೋಹ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಜನ ವಿರೋಧಿ ಜಾಗತೀಕರಣ ನೀತಿಗಳನ್ನು ನಿರಂತರವಾಗಿ ಜಾರಿಗೊಳಿಸುವ ಮೂಲಕ ಕೇಂದ್ರ ಸರಕಾರ ಜನಜೀವನ ನರಕ ಮಾಡಿದೆ. ಇದಕ್ಕೆ ಈ ಹಿಂದೆ ಆಳ್ವಿಕೆ ಮಾಡಿರುವ ಎಲ್ಲಾ ಪಕ್ಷಗಳ ಸರಕಾರಗಳೂ ಕಾರಣವಾಗಿವೆ. ಅದರಲ್ಲೂ ಈ ಬಿಜೆಪಿ ಸರಕಾರ ಅಂಬಾನಿ ಅದಾನಿಗಳ ಸೂಚನೆಯಂತೆ ನೀತಿಗಳನ್ನು ಜಾರಿಗೆ ತರುತ್ತಿದೆ. ಉದ್ದೇಶಿತ ಮೂರು ಕರಾಳ ಮಸೂದೆಗಳು ಜಾರಿಯಾದರೆ ರೈತನ ಬೆನ್ನೆಲುಬು ಉಳಿಯುವುದಿಲ್ಲ. ಈ ಸತ್ಯವನ್ನು ಅರಿತ ರೈತರು ಕಳೆದ ಆರು ತಿಂಗಳಿಂದ ದೇಹಲಿ ಗಡಿಯಲ್ಲಿ ಸಂಘರ್ಷ ನಡೆಸುತ್ತಿದ್ದಾರೆ. ಸರಕಾರದ ದುರಾಕ್ರಮಗಳಿಗೆ ಸೆಡ್ಡು ಹೊಡೆದು ರೈತರು ಹೋರಾಟ ಮುಂದುವರೆಸಿದ್ದಾರೆ. ಇದರ ನಡುವೆಯೂ ಸರಕಾರ ಬೀಜ, ರಸಗೊಬ್ಬರ, ಕೀಟನಾಶಕ, ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಸತತವಾಗಿ ಏರಿಸುತ್ತಿದೆ. ಗಾಯದ ಮೇಲೆ ಬರೆ ಎಳೆಯುವ ವಂಚಕ ಸರಕಾರದ ವಿರುದ್ಧ ರೈತ ಚಳುವಳಿ ಪ್ರಬಲವಾಗಬೇಕು ಎಂದು ಕರೆ ನೀಡಿದರು.

ಮುಖಂಡರಾದ ಮಲ್ಲಿನಾಥ ಹುಂಡೇಕಲ್, ಗೌತಮ ಪರತೂರಕರ, ಶರಣು ವಿ.ಕೆ, ರೈತರಾದ ಮಲ್ಲಪ್ಪ ಪರತೂರಕರ, ಮಾರ್ತಂಡಪ್ಪ, ಆನಂದ ಮಾವಿನ್, ಗೌತಮ ಬಂಗರಗಿ, ಅರುಣಕುಮಾರ, ನಂದಮ್ಮ ಹಾಗೂ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here