ಜೇವರ್ಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜಂಟಿಯಾಗಿ ಸಿದ್ಧಪಡಿಸಿರುವ ವ್ಯಾಕ್ಸಿನ್ ಬಸ್ ಇದೀಗ ಜೇವರ್ಗಿ ತಾಲೂಕಿನ ಸಂಚಾರದಲ್ಲಿದೆ.
ಶಾಸಕ ಡಾ. ಡಾ.ಅಜಯಸಿಂಗ್ ಗುರುವಾರ ಈ ಲಸಿಕಾ ಬಸ್‍ಗೆ ಸ್ವಾಗತಿಸಿ ತಾವೇ ಖುದ್ದು ಲಸಿಕೆ ನೀಡುವ ಮೂಲಕ ಜೇವರ್ಗಿ ಮತಕ್ಷೇತ್ರದಲ್ಲಿ ಲಸಿಕಯನ್ನು ಹೊತ್ತಿರುವ ಬಸ್ ಸಂಚಾರಕ್ಕೆ ಹಸಿರು ನಿಶಾನೆ ನೀಡಿದರು.
ಮೂರನೇ ಅಲೆ ತಡೆಗಟ್ಟಲು ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನ ಜನತೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಕೋವಿಡ್ ಸೋಂಕು ತಡೆಗಟ್ಟಲು ಪ್ರತಿಯೊಬ್ಬರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಶಾಸಕ ಡಾ.ಅಜಯಸಿಂಗ್ ಈ ಸಂದರ್ಭದಲ್ಲಿ ಒತ್ತಿಹೇಳಿದರು.
ಸಂಚಾರಿ ಲಸಿಕಾ ವಾಹನ ತಾಲ್ಲೂಕಿನಲ್ಲಿ 4 ದಿನ ಸಂಚರಿಸಲಿದೆ. ತಾಲ್ಲೂಕಿನ 14 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 2 ಸಮುದಾಯ ಆರೋಗ್ಯ ಕೇಂದರಗಳು ಹಾಗೂ ಜೇವರ್ಗಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ದಿನ ಕೋವಿಡ್ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಜೇವರ್ಗಿ ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಕೋವಿಡ್ ಲಸಿಕೆ ನೀಡಲಾಯಿತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಿದ್ದು ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂಗಣ್ಣಗೌಡ ಪಾಟೀಲ, ಪುರಸಭೆ ಯೋಜನಾಧಿಕಾರಿ ಸವಿತಾ, ಕಂದಾಯ ಅಧಿಕಾರಿ ರಾಜಶೇಖರ ಪಾಟೀಲ, ನೈರ್ಮಲ್ಯ ನಿರೀಕ್ಷಕ ಮನಿಷ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.