206 ಹೊಸ ಹುದ್ದೆಗಳ ನೇಮಕಾತಿಗೆ ಮಂಜೂರಾತಿ: ಮುಖ್ಯಮಂತ್ರಿ ಯಡಿಯೂರಪ್ಪ

0
25

ಬೆಂಗಳೂರು: ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನದ ಯುಗದಲ್ಲಿ ಅಪರಾಧದ ಸ್ಥಳದಲ್ಲಿ ದೊರಕುವ ಸಾಕ್ಷ್ಯಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಅಪರಾಧದ ಸ್ಥಳ ಪರಿಶೀಲನೆ ಮತ್ತು ಸಾಕ್ಷ್ಯ ಸಂಗ್ರಹಣೆಗಾಗಿ ಅಪರಾಧ ದೃಶ್ಯ ಅಧಿಕಾರಿಗಳ ಹುದ್ದೆ (SOCO-Scene of Crime Officers) ಗಳನ್ನು ಹೊಸದಾಗಿ ಸೃಜಿಸಿ ಇಂತಹ ಒಟ್ಟು 206 ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರವು ಮಂಜೂರಾತಿ ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ಇಂದು ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಪೊಲೀಸ್ ಇಲಾಖೆಯ “ಕೃತ್ಯ ನಡೆದ ಸ್ಥಳ ಪರಿಶೀಲನಾ ತಂಡ”, “ಸಿಎಆರ್/ಡಿಎಆರ್‍ಗೆ 50 ಬಸ್ಸುಗಳು”, “ಪೊಲೀಸ್ ವಿದ್ಯಾ ನಿಧಿ” ಹಾಗೂ “ಪುನಶ್ಚೇತಿತ ಆರೋಗ್ಯ ಭಾಗ್ಯ” ಯೋಜನೆಗಳಿಗೆ ಚಾಲನೆ ನೀಡಿದರು.

Contact Your\'s Advertisement; 9902492681

ಕರ್ನಾಟಕ ಪೊಲೀಸ್ ಪಡೆ ಅತ್ಯಂತ ವಿಶ್ವಾಸಾರ್ಹ ಮತ್ತು ದಕ್ಷ ಪೊಲೀಸ್ ಪಡೆಯೆಂದು ಇಡೀ ದೇಶದಲ್ಲಿಯೇ ಹೆಸರಾಗಿದೆ. ಪೊಲೀಸರು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ, ಅಪರಾಧಗಳನ್ನು ತಡೆಗಟ್ಟುವ ಹಾಗೂ ಅಪರಾಧಿಗಳನ್ನು ಪತ್ತೆ ಮಾಡುವ ಗುರುತರ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾ ಸಮಾಜದ ನೆಮ್ಮದಿಗೆ ಕಾರಣರಾಗಿದ್ದಾರೆ. ತಮ್ಮ ವೈಯಕ್ತಿಕ ಜೀವನವನ್ನು ಬದಿಗಿರಿಸಿ ಕರ್ತವ್ಯಪರತೆ ಮೆರೆಯುವ ಕರ್ನಾಟಕ ಪೊಲೀಸರು ತಮ್ಮ ದಕ್ಷತೆ, ಪ್ರಾಮಾಣಿಕತೆಗಳನ್ನು ಸಾಬೀತು ಮಾಡಿದ್ದಾರೆ ಎಂದು ಮಾತನಾಡಿದರು.

ಪೊಲೀಸ್ ಇಲಾಖೆಯ ಅಭಿವೃದ್ಧಿ ಹಾಗೂ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿಯು ಪ್ರಥಮ ಆದ್ಯತೆಯಾಗಿದೆ. ಪೊಲೀಸರು ಹಾಗೂ ಅವರ ಕುಟುಂಬ ಸದಸ್ಯರಿಗೆ ಉತ್ತಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮತ್ತು ತೀವ್ರ ಅನಾರೋಗ್ಯದ ಸಂದರ್ಭದಲ್ಲಿ ಚಿಕಿತ್ಸಾ ವೆಚ್ಚಗಳನ್ನು ಭರಿಸಲು ಸರ್ಕಾರ ಆರೋಗ್ಯ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದೆ.2020-21ನೇ ಸಾಲಿನಲ್ಲಿ ಆರೋಗ್ಯ ಯೋಜನೆಗೆ 101.36 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದ್ದು, ಯೋಜನೆಯು ಪೊಲೀಸರಿಗೆ ವರದಾನವಾಗಿ ಪರಿಣಮಿಸಿದೆ ಎಂದು ನುಡಿದರು.

ಪೋಲೀಸ್ ವಿದ್ಯಾನಿಧಿ ಯೋಜನೆಯು ಪೊಲೀಸ್ ಸಿಬ್ಬಂದಿ ಮಕ್ಕಳ ವ್ಯಾಸಂಗಕ್ಕಾಗಿ ಧನಸಹಾಯ ನೀಡುವ ವಿಶಿಷ್ಠ ಯೋಜನೆಯಾಗಿದೆ. ಪೊಲೀಸ್ ಸಿಬ್ಬಂದಿಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಲು ಬೆಂಗಳೂರು, ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. ಶಿಗ್ಗಾಂವ್ 10ನೇ ಪಡೆ ಕೆ.ಎಸ್.ಆರ್.ಪಿ ಪೊಲೀಸ್ ಪಬ್ಲಿಕ್ ಶಾಲೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಪ್ರಸಕ್ತ ಸಾಲಿನಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿರುತ್ತದೆ ಎಂದು ತಿಳಿಸಿದರು.

ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಸಿಬ್ಬಂದಿ ವಿವಿಧ ಸ್ಥಳಗಳಿಗೆ ತೆರಳುವ ಸಂದರ್ಭದಲ್ಲಿ ಬಳಸಲಾಗುವ ಬಸ್ಸು/ವ್ಯಾನ್‍ಗಳು ತೀರಾ ಹಳೆಯದಾಗಿದ್ದು, ಪೊಲೀಸ್ ಸಿಬ್ಬಂದಿಗಳ ಪ್ರಾಣಕ್ಕೆ ಅಪಾಯವೆಂಬುದನ್ನು ಗಮನಿಸಿ ಸರ್ಕಾರವು 50 ಪೊಲೀಸ್ ಮಿನಿ ಬಸ್‍ಗಳನ್ನು 6.90 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಲು ಮಂಜೂರಾತಿ ನೀಡಿದೆ ಎಂದರು.

ಪೊಲೀಸ್ ಕಲ್ಯಾಣ ಕಾರ್ಯಕ್ರಮಗಳಡಿ, ರಿಯಾಯಿತಿ ದರದಲ್ಲಿ ಪೊಲೀಸ್ ಕ್ಯಾಂಟೀನ್, ಸಮುದಾಯ ಭವನಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರ ಮನೋವೈಜ್ಞಾನಿಕ ಸಮಾಲೋಚನೆಗಾಗಿ ಸರ್ಕಾರ 50 ಯೋಗಕ್ಷೇಮ ಅಧಿಕಾರಿಗಳನ್ನು ನೇಮಕ ಮಾಡಿರುತ್ತದೆ ಎಂದು ನುಡಿದರು.

ಪೊಲೀಸ್ ಇಲಾಖೆಯನ್ನು ಬಲಪಡಿಸಲು ಹಾಗೂ ಪೊಲೀಸರ ಶ್ರೇಯೋಭಿವೃದ್ಧಿಗೆ 2021-22ನೇ ಆಯವ್ಯಯದಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಪೊಲೀಸ್ ಗೃಹ-2025 ಯೋಜನೆಯನ್ನು 2,740 ಕೋಟಿ ರೂ.ಗಳ ಮೊತ್ತದಲ್ಲಿ ಪ್ರಾರಂಭಿಸಿದ್ದು, ಒಟ್ಟು 10,032 ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸ್ವಂತ ಕಟ್ಟಡಗಳಿಲ್ಲದ 100 ಪೊಲೀಸ್ ಠಾಣೆಗಳಿಗೆ ಮುಂದಿನ ಐದು ವರ್ಷಗಳಲ್ಲಿ 200 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 25 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.  ಕೊಡಗು ಹಾಗೂ ಹಾವೇರಿ ಜಿಲ್ಲೆಯಲ್ಲಿ ನೂತನವಾದ ಜಿಲ್ಲಾ ಪೊಲೀಸ್ ಸಂಕೀರ್ಣವನ್ನು ನಿರ್ಮಿಸಲು ತಲಾ 8 ಕೋಟಿ ರೂ. ಹಂಚಿಕೆ ಮಾಡಲಾಗುವುದು.

ರಾಜ್ಯದಲ್ಲಿ ಅಪರಾಧ ಪತ್ತೆ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ದಂಡನೆಯ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಪ್ರಾದೇಶಿಕ ಕೇಂದ್ರಗಳನ್ನು ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಆರಂಭಿಸಲಾಗುವುದು.
ರಾಜ್ಯದಲ್ಲಿ ಕರಾವಳೀ ಪ್ರದೇಶದಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಕರಾವಳಿ ಕಾವಲು ಪಡೆಯನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಹಂತ ಹಂತವಾಗಿ ಬಲಪಡಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಇದಕ್ಕಾಗಿ 2 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು. ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಪೊಲೀಸ್ ಇಲಾಖೆ ಅಧಿಕಾರಿ ಸಿಬ್ಬಂದಿಗಳ ಕೊಡುಗೆಯು ಅನನ್ಯವಾಗಿದೆ ಎಂದರು. ಪ್ರಾಮಾಣಿಕತೆ, ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ನಿಮ್ಮೆಲ್ಲರಿಗೂ ಸರ್ಕಾರದ ಅನವರತ ಬೆಂಬಲ ಇರಲಿದೆ ಎಂದು ಹೇಳಿದರು.

ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್  ಬೊಮ್ಮಾಯಿ ಕಾರ್ಯಕ್ರಮದಲ್ಲಿ ಮಾತನಾತುಡುತ್ತಾ  ಇಂದು ಪೊಲೀಸ್ ಇಲಾಖೆಯಲ್ಲಿ ಮಹತ್ವದ ತಿರುವು ಪಡೆದ ದಿನವಾಗಿದೆ. ಅಪರಾಧ ನಿಯಂತ್ರಣ, ಅಪರಾಧ ತಡೆ, ಶೀಘ್ರ ಶೋಧನೆ ಬಹಳ ಮುಖ್ಯವಾಗಿದೆ.  ಕಳೆದ ಎರಡು ವರ್ಷದಲ್ಲಿ ಅಪರಾಧ ನಿಯಂತ್ರಣದಲ್ಲಿ ಬಹಳಷ್ಟು ಯಶಸ್ಸುಗಳಿದೆ. ಇದಕ್ಕಾಗಿ ಬಹಳಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೊಲೀಸ್ ವಿದ್ಯಾ ನಿಧಿ ಯೋಜನೆಯು ಅನುಕೂಲವಾಗಿದೆ. ಆರೋಗ್ಯ ಭಾಗ್ಯ ಯೋಜನೆಯು 20 ವರ್ಷದಿಂದ ಇದೆ. ಈಗ  ಯೋಜನೆಯು ಹೊಸ ಚೈತನ್ಯವನ್ನು ಪಡೆದಿದೆ ಎಂದರು.

ಕಾರ್ಯಕ್ರಮದಲ್ಲಿ  ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್, ಶಿವಾಜಿನಗರದ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್‍ಅರ್ಷದ್ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here