ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಅಗ್ನಿಶಾಮಕ ಠಾಣೆ ಪ್ರಾರಂಭಿಸಲು ಯೋಜನೆ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

0
12

ಬೆಂಗಳೂರು:  ಸಾರ್ವಜನಿಕರ  ರಕ್ಷಣೆಗಾಗಿ ರಾಜ್ಯದ ಪ್ರತಿಯೊಂದು ತಾಲ್ಲೂಕಿನಲ್ಲೂ ಅಗ್ನಿಶಾಮಕ ಠಾಣೆಯನ್ನು ಪ್ರಾರಂಭಿಸಲು ಯೋಜನೆ ರೂಪಿಸಿದ್ದು, ಈಗಾಗಲೇ ರಾಜ್ಯದ 175 ತಾಲ್ಲೂಕುಗಳಲ್ಲಿ ಅಗ್ನಿಶಾಮಕ ಠಾಣೆ ತೆರೆಯಲಾಗಿದೆ  ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಅವರು ಇಂದು ವಿಧಾನಸೌಧದೊಳಗಿನ ಬ್ಯಾಂಕ್ವೆಟ್ ಹಾಲ್‍ನಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹ ರಕ್ಷಕ ದಳ, ಪೌರ ರಕ್ಷಣೆ ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆಯ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ  ಪದಕ ಪ್ರದಾನ ಸಮಾರಂಭದಲ್ಲಿ  ಉತ್ತಮ ಸೇವೆ ಸಲ್ಲಿಸಿದ ರಾಜ್ಯದ 236 ಅಧಿಕಾರಿ/ಸಿಬ್ಬಂದಿಗಳಿಗೆ 2015-2020ನೇ ಸಾಲಿನ ಪದಕ ಪ್ರದಾನ ಮಾಡಿ ಮಾತನಾಡಿದರು.

Contact Your\'s Advertisement; 9902492681

ರಾಜ್ಯದಲ್ಲಿ 214 ಅಗ್ನಿಶಾಮಕ ಠಾಣೆಗಳು ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಪ್ರಸ್ತುತ 3 ನೂತನ ಅಗ್ನಿ ಶಾಮಕ ಠಾಣೆ ಕಟ್ಟಡಗಳನ್ನು, 48 ಅಧಿಕಾರಿ-ಸಿಬ್ಬಂದಿಗಳ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ಬೆಂಕಿ ಅವಘಡ, ಕಟ್ಟಡ ಕುಸಿತದಂತಹ ಅವಘಡಗಳನ್ನು ಎದುರಿಸಲು ಇಲಾಖೆಗೆ ಆಧುನಿಕ ಹಾಗೂ ಸುಸಜ್ಜಿತ ವಾಹನಗಳನ್ನು ಒದಗಿಸಲಾಗಿದೆ. ಕೆ-ಸೇಫ್ 2 ಯೋಜನೆಯನ್ನು ಪರಿಷ್ಕøತಗೊಳಿಸಿ ಮುಂದಿನ ಐದು ವರ್ಷಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ತುರ್ತು ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಜನರನ್ನು ಸಂಕಷ್ಟದಿಂದ ಪಾರುಮಾಡಿ, ವಿಪತ್ತು ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿಗಳನ್ನು  ಸಂರಕ್ಷಿಸಿ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಸದಾ ಸನ್ನದರಾಗಿ ಸಾರ್ಥಕ ಕಾರ್ಯ ಮಾಡುತ್ತಿರುವುದು  ಶ್ಲಾಘನೀಯ ಎಂದರು.

ಕೋವಿಡ್ ಸಂದರ್ಭದಲ್ಲಿ ಸಲ್ಲಿಸಿದ ನಿಸ್ವಾರ್ಥ ಸೇವೆಗೆ  ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿಗಳು , ಒಂದು ರಾಷ್ಟ್ರದ ಆಂತರಿಕ ಹಾಗೂ ಬಾಹ್ಯ ಸುಭದ್ರತೆಗೆ ಉತ್ತಮ ರಕ್ಷಣಾ ಪಡೆ, ತುರ್ತು ಸೇವೆಗಳು ಹಾಗೂ ಸದೃಢವಾದ ಪೊಲೀಸ್ ವ್ಯವಸ್ಥೆ ಅತ್ಯಂತ ಅವಶ್ಯಕವಾಗಿದ್ದು, ಅನೇಕ ದಶಕಗಳಿಂದ ಈ ಪಡೆಗಳು  ನಮ್ಮ ರಾಜ್ಯದಲ್ಲಿ ಮಾಡಿರುವ ಸೇವೆ ರಾಷ್ಟ್ರ ಮಟ್ಟದಲ್ಲಿಯೇ ಮಾದರಿಯಾಗಿ ಅಗ್ರ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ವಿಷಯ ಎಂದರು.

ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಉಂಟಾದ ಭಾರಿ ಮಳೆಯ ಪರಿಣಾಮ ಅಗ್ನಿಶಾಮಕ ಇಲಾಖೆ, ಎಸ್.ಡಿ.ಆರ್.ಎಫ್., ಪೊಲೀಸ್, ಅರಣ್ಯ ಇಲಾಖೆ ಮತ್ತು ಸ್ಥಳೀಯ ಜನರ ಸಹಕಾರದೊಮದಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಜನರನ್ನು ರಕ್ಷಿಸಿದ್ದಾರೆ ಎಂದರು.
ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆ ರಚನೆಯಾಗಿದ್ದು, ಬೆಂಗಳೂರು, ಮಂಗಳೂರು, ಬೆಳಗಾವಿ ಮತ್ತು ಕಲಬುರುಗಿ ನಗರಗಳಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.

ಗೃಹರಕ್ಷಕ ದಳದಲ್ಲಿ  25,493 ಸದಸ್ಯರಿದ್ದು,  ಸುಮಾರು 9,989 ಗೃಹರಕ್ಷಕರು  ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಪೌರರಕ್ಷಣಾ ಘಟಕದಲ್ಲೂ 15,184 ಜನರು ಸ್ವಯಂ ಸ್ಫೂರ್ತಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ನಿರ್ಭಯಾ ಯೋಜನೆಯಡಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬೆಂಗಳೂರು ನಗರದಲ್ಲಿ  7,500 ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆ ಒದಗಿಸಲಾಗುತ್ತಿದೆ ಎಂದರು.

ಪೊಲೀಸರ ಕ್ಷೇಮಾಭಿವೃದ್ಧಿಗಾಗಿ ಪೊಲೀಸ್ ಗೃಹ-2025 ಯೋಜನೆಂiÀiನ್ನು 2,740 ಕೋಟಿ ರೂ.ಗಳ ಮೊತ್ತದಲ್ಲಿ ಪ್ರಾರಂಭಿಸಿದ್ದು, 10,132 ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಉಡುಪಿ ಜಿಲ್ಲಾ ಉಸ್ತವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು, ಅಗ್ನಿ ಶಾಮಕ ದಳವು ಇಲಾಖೆಯ ಪ್ರಮುಖ ಅಂಗವಾಗಿದ್ದು, ವಿಪತ್ತು ನಿರ್ವಹಣೆಗಾಗಿ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡುವುದರ ಜೊತೆಗೆ, ಆಧುನಿಕ ಉಪಕರಣಗಳ ಖರೀದಿ ಹಾಗೂ ಇತರ ಸೌಲಭ್ಯಕ್ಕಾಗಿ 20 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

ಪ್ರಮುಖ ಜಿಲ್ಲೆಗಳಲ್ಲಿ ಅಗ್ನಿಶಾಮಕ ಕೇಂದ್ರಗಳ ಸ್ಥಾಪನೆ, ಸಿಬ್ಬಂದಿ ನೇಮಕಾತಿಗಾಗಿ ಸುಮಾರು 300 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು.  ಗೃಹ ರಕ್ಷಕದಳ  ಕಾನೂನು ಸುವ್ಯವಸ್ಥೆಗೆ ಆಧಾರ ಸ್ತಂಭವಾಗಿದ್ದು, ತಮ್ಮ ಪ್ರಾಣದ ಹಂಗು ತೊರೆದು ಮಾರಕ ರೋಗವಾದ ಕೋವಿಡ್, ಪ್ರವಾಹ ಹಾಗೂ  ತುರ್ತು ಸಂದರ್ಭಗಳಲ್ಲಿ ಕೆಲಸ ನಿರ್ವಹಿಸುವ ಇವರಿಗೆ ಸರ್ಕಾರವು ಎಲ್ಲಾ ರೀತಿಯ ಸೌಲಭ್ಯ  ಕಲ್ಪಿಸಲು ಮುಂದಾಗಿದೆ ಎಂದರು.

ಪೊಲೀಸ್ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು  ಕಾರ್ಯದಕ್ಷತೆಯಿಂದ ಹಲವಾರು ಪ್ರಕರಣಗಳಲ್ಲಿ ಅಪರಾಧಿಗಳನ್ನು ಕಂಡು ಹಿಡಿಯಲಾಗಿದೆ.  ಆರ್ಥಿಕ ಅಪರಾಧಗಳು, ಸೈಬರ್, ಡ್ರಗ್ಸ್ ದಂಧೆಗಳು ಹೆಚ್ಚಾಗುತ್ತಿದ್ದು ಇವುಗಳ ಕಡಿವಾಣಕ್ಕೆ ಇಲಾಖೆಯಲ್ಲಿ ದಕ್ಷತೆ ಜೊತೆಯಲ್ಲಿ ನವೀನ ತಂತ್ರಜ್ಞಾನದ ಬಳಕೆ ಇನ್ನಷ್ಟು ಆಗಬೇಕಾಗಿದೆ ಎಂದರು.

ಎಫ್‍ಎಸ್‍ಎಲ್ ಲ್ಯಾಬ್‍ಗಳು 6 ಕೇಂದ್ರಗಳಲ್ಲಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಗಳಲ್ಲಿ ಮಾಡಲಾಗುವುದು.  ಅಗ್ನಿ ಅವಗಢ ಆದಾಗ ಸಾಕ್ಷಿ ಸಂರಕ್ಷಣೆಗಾಗಿ ಅಗ್ನಿಶಾಮಕ ದಳದಲ್ಲೂ  ಲ್ಯಾಬ್ ಅಳವಡಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ.  ಇಲಾಖೆಗೆ ಪ್ರತಿ ಹಂತದಲ್ಲೂ ಬೆಂಬಲ ನೀಡುತ್ತಿರುವ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ಸಚಿವರು, ಕಾನೂನು ಸುವ್ಯವಸ್ಥೆಗಾಗಿ ಇನ್ನಷ್ಟು ಕಾರ್ಯದಕ್ಷತೆಯಿಂದ ಕೆಲಸ ನಿರ್ವಹಿಸಲಾಗುವುದು ಎಂದರು.

ಜನರ ಪ್ರಾಣ ರಕ್ಷಣೆ ಹಾಗೂ ಆಸ್ತಿ-ಪಾಸ್ತಿಗಳ ರಕ್ಷಣೆಗಾಗಿ ತಮ್ಮ ಜೀವನದ ಹಂಗನ್ನು ತೊರೆದು ಕೆಲಸ ನಿರ್ವಹಿಸಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದು ಈ ಸಾಧನೆಯನ್ನು ಮಾಡಿರುವ ಅಧಿಕಾರಿ/ಸಿಬ್ಬಂದಿಗಳ ಕುಟುಂಬದವರು ಮತ್ತು ಸಂಬಂಧಿಕರು ಅವರ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು  ಚಿನ್ನದ ಪದಕ ವಿಜೇತರನ್ನು ಅಭಿನಂದಿಸಿದರು.

ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾ ಸಮಾದೇಷ್ಠರು, ಗೃಹರಕ್ಷಕ ದಳದ ನಿರ್ದೇಶಕರು, ಪೌರ ರಕ್ಷಣೆ , ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಮಹಾ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಎಸ್.ಡಿ.ಆರ್.ಎಫ್ ಮಹಾ ನಿರ್ದೇಶಕರಾದ ಡಾ. ಅಮರ್ ಕುಮಾರ್ ಪಾಂಡೆ ಸ್ವಾಗತಿಸಿದರು.

ಸಮಾರಂಭದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್,   ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಒಳಾಡಳಿತ ಇಲಾಖೆಯ ಗೃಹ ಕಾರ್ಯದರ್ಶಿ-2 ಶ್ರೀಮತಿ ಮಾಲಿನಿ ಕೃಷ್ಣಮೂರ್ತಿ, ಪದಕ ವಿಜೇತರು ಉಪಸ್ಥಿತರಿದ್ದರು. ಕೋವಿಡ್-19 ಹಿನ್ನಲೆಯಲ್ಲಿ ಪದಕ ವಿಜೇತ ಕುಟುಂಬ ವರ್ಗದವರು ಸಮಾರಂಭವನ್ನು ವೀಕ್ಷಿಸಲು ಆನ್‍ಲೈನ್ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here