ಬೆಂಗಳೂರು: ದೇಶವೊಂದರ ಅಭಿವೃದ್ಧಿಯು ಯುವಜನರ ಕೌಶಲ್ಯದ ಮಟ್ಟವನ್ನು ಆಧರಿಸಿದ್ದು, ದೇಶ ಮತ್ತು ರಾಜ್ಯದ ಏಳಿಗೆಯಲ್ಲಿ ಯುವಶಕ್ತಿಯ ಕೊಡುಗೆ ಮಹತ್ವದ್ದಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಇಂದು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಆಯೋಜಿಸಲಾದ ವಿಶ್ವ ಯುವ ಕೌಶಲ್ಯ ದಿನಾಚರಣೆ-2021ನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು ವಿಶ್ವದಲ್ಲಿ ಭಾರತ 2ನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದ್ದು, 18 ರಿಂದ 35ರ ವಯೋಮಿತಿಗೆ ಸೇರಿದವರ ಮಾನವ ಸಂಪನ್ಮೂಲ ನಮ್ಮಲಿದೆ. ಕರ್ನಾಟಕ ಸರ್ಕಾರವು ಯುವಕರ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಹಲವು ಪ್ರಮುಖ ಯೋಜನೆಗಳನ್ನು ಹಮ್ಮಿಕೊಂಡಿದೆ. ರಾಜ್ಯದ 150 ಸರ್ಕಾರಿ ITI ಗಳನ್ನು ಉನ್ನತೀಕರಿಸಿ Industrial Automation, Robotics, Industry 4.0 ನಂತಹ ಅತ್ಯಾಧುನಿಕ ಲ್ಯಾಬ್‍ಗಳನ್ನು ಸ್ಥಾಪಿಸುವ ಸಲುವಾಗಿ Tata Technologies ಸಹಯೋಗದೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 4,636.50 ಕೋಟಿ ರೂಪಾಯಿಗಳ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಈ 150 ಸರ್ಕಾರಿ ITI ಗಳ ಉನ್ನತೀಕರಣದ ಕಾರ್ಯವು ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು, ಇದೇ ಸೆಪ್ಟೆಂಬರ್‍ನಲ್ಲಿ ಉದ್ಘಾಟಿಸಲಾಗುವುದು ಎಂದು ಹೇಳಿದರು.
ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇತರೆ ರಾಜ್ಯಗಳಿಂದ ಮರಳಿದ ವಲಸೆ ಕಾರ್ಮಿಕರ ತರಬೇತಿ ಮತ್ತು ಕೆಲಸ ದೊರಕಿಸಲು ಸರ್ಕಾರವು “Kaushalkar.com” (ಕೌಶಲ್‍ಕರ್-ಡಾಟ್-ಕಾಂ) ವೆಬ್ ಪೋರ್ಟಲ್‍ನ್ನು ಅಭಿವೃದ್ಧಿಪಡಿಸಿದೆ. ಕೈಗಾರಿಕೆಗಳಲ್ಲಿರುವ ಉದ್ಯೋಗ ಅವಕಾಶಗಳನ್ನು ಹಾಗೂ ಯುವಕರಲ್ಲಿರುವ ಕೌಶಲ್ಯಗಳನ್ನು ಹೊಂದಿಸಿ ಉದ್ಯೋಗ ಒದಗಿಸಲು skill connect ವೆಬ್‍ಪೋರ್ಟಲ್ ಮೂಲಕ ವರ್ಚುಯಲ್ ಉದ್ಯೋಗ ಮೇಳಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ವಿದೇಶದಲ್ಲಿರುವ ನುರಿತ ಮಾನವ ಸಂಪನ್ಮೂಲದ ಬೇಡಿಕೆಯನ್ನು ಪೂರೈಸಿ ರಾಜ್ಯದ ಯುವಕರು ವಿದೇಶಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ನೆರವಾಗಲು ‘ಅಂತರರಾಷ್ಟ್ರೀಯ ವಲಸೆ ಕೇಂದ್ರ’ವನ್ನು ಸ್ಥಾಪಿಸಿದೆ. ಈಗಾಗಲೇ ಬ್ರಿಟನ್ನಿನ National Health Services ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಕರ್ನಾಟಕದಿಂದ ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸುವ ಕಾರ್ಯ ಪ್ರಗತಿಯಲ್ಲಿದೆ. ಸರ್ಕಾರಿ ಸಂಸ್ಥೆಗಳ ಮೂಲಕ ಉನ್ನತ ಮಟ್ಟದ ತಾಂತ್ರಿಕ ಕೌಶಲ್ಯವನ್ನು ನೀಡಿ ರಾಜ್ಯದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಕೌಶಲ್ಯಯುಕ್ತ ಮಾನವ ಸಂಪನ್ಮೂಲವನ್ನು ಒದಗಿಸಲು ಈ ವರ್ಷ 4 ಹೊಸ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ( GTTC) ಡಿಪ್ಲೊಮಾ ಕಾಲೇಜುಗಳನ್ನು ಪ್ರಾರಂಭಿಸಲಾಗುವುದು ಎಂದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ರಾಜ್ಯದಲ್ಲಿ 1,93,000 ಮಹಿಳಾ ಸ್ವ-ಸಹಾಯ ಗುಂಪುಗಳಲ್ಲಿ 24,26,000 ಗ್ರಾಮೀಣ ಮಹಿಳಾ ಸದಸ್ಯರಿದ್ದಾರೆ. ಸ್ವ-ಸಹಾಯ ಗುಂಪುಗಳಿಗೆ ಗ್ರಾಮ ಮಟ್ಟದ ಒಕ್ಕೂಟದ ಮುಖಾಂತರ ಸಮುದಾಯ ಹೂಡಿಕೆ ನಿಧಿಯಾಗಿ (CIF) 400 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದ್ದು, 2021-21ನೇ ಸಾಲಿನಲ್ಲಿ ಈಗಾಗಲೇ 17,121 ಸ್ವ-ಸಹಾಯ ಗುಂಪುಗಳಿಗೆ ರೂ.149.03 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಕಳೆದ ಸಾಲಿನಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಒಂದು ಲಕ್ಷದ ಹತ್ತು ಸಾವಿರ ಬೀದಿ-ಬದಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿಗಳ ‘ಸ್ವ-ನಿಧಿ’ ಯೋಜನೆಯಡಿಯಲ್ಲಿ 10,000 ರೂ.ಗಳ ಹೂಡಿಕೆ ಬಂಡವಾಳವನ್ನು ಸಾಲದ ರೂಪದಲ್ಲಿ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 20,000 ರೂ.ಗಳನ್ನು ಹೆಚ್ಚುವರಿ ಹೂಡಿಕೆ ಬಂಡವಾಳವನ್ನು ಸಾಲದ ರೂಪದಲ್ಲಿ ವಿತರಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಮುಂದಿನ 5 ವರ್ಷಗಳಲ್ಲಿ ಹತ್ತು ಮಿಲಿಯನ್ ಉದ್ಯೋಗ ಅವಕಾಶಗಳನ್ನು ಸೃಷ್ಠಿಸಲು ಕರ್ನಾಟಕ ಕೌಶಲ್ಯ ಮತ್ತು ಉದ್ಯಮಶೀಲತಾ ಕಾರ್ಯಪಡೆಯನ್ನು ರಚಿಸಿದೆ. ಸದ್ಯದಲ್ಲಿಯೇ ಈ ಕಾರ್ಯಪಡೆ ತನ್ನ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಕ್ರಿಯ ಮುಂದಾಳತ್ವದಲ್ಲಿ ರಾಜ್ಯದ ಯುವಕರಿಗೆ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಗಳನ್ನು ಇಟ್ಟಿದೆ. ‘ಸ್ಕಿಲ್ ಇಂಡಿಯಾ ಮಿಷನ್’ ಹಾಗೂ ‘ಆತ್ಮನಿರ್ಭರ್ ಭಾರತ ಯೋಜನೆ’ಗಳು ಯುವಜನರ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಗಮನಾರ್ಹ ಸಾಧನೆ ಮಾಡಿದೆ. ರಾಜ್ಯ ಯುವಶಕ್ತಿಯ ಕೌಶಲ್ಯ ಅಭಿವೃದ್ಧಿಯಿಂದ ‘ಕೌಶಲ್ಯ ಕರ್ನಾಟಕದ’ ನಿರ್ಮಾಣವು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲಾಭಿವೃದ್ಧಿ ಸಚಿವರಾದ ಡಾ: ಅಶ್ವತ್ಥ್ ನಾರಾಯಣ, ಇಲಾಖೆಯ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಹಾಗೂ ಮತ್ತಿತರರು ಹಾಜರಿದ್ದರು.