ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ತಂತ್ರಾಂಶ ಅಭಿವೃದ್ಧಿ: ರಾಜೀವ್ ಚಾವ್ಲಾ

0
23

ಬೆಂಗಳೂರು: ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ವಿವಿಧ ಯೋಜನೆಗಳ ಅಡಿಯಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲು ಏಕೀಕೃತ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶವನ್ನು ಇ-ಆಡಳಿತ ಕೇಂದ್ರವು ಅಭಿವೃದ್ಧಿ ಪಡಿಸಿದೆ ಎಂದು ಅಪರ ಮುಖ್ಯ ಕಾರ್ಯದರ್ಶಿ (ಇ-ಆಡಳಿತ) ರಾಜೀವ್ ಚಾವ್ಲಾ ಅವರು ತಿಳಿಸಿದರು.

ಇಂದು ಬಹುಮಹಡಿ ಕಟ್ಟಡದ ಕೊಠಡಿ ಸಂಖ್ಯೆ 104ರ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೆಟ್ರಿಕ್ ಪೂರ್ವ ಮತ್ತು ಮಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶವನ್ನು ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ರೂಪಿಸಲಾಗಿದೆ. ಈ ತಂತ್ರಾಂಶವು ಸಂಪೂರ್ಣ ಗಣಕೀಕೃತವಾಗಿದ್ದು, ಕಾಗದ ರಹಿತ ತಂತ್ರಾಂಶವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಈ ಹಿಂದೆ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ಲಿಖಿತವಾಗಿ ಕಾಗದದ ರೂಪದಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳಿಗೆ, ಶಾಲಾ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ  ಅನೇಕ ಸಮಸ್ಯೆಗಳು ಎದುರಾಗುತ್ತಿದ್ದವು, ಈ ಎಲ್ಲಾ ಸಮಸ್ಯೆಗಳ ನಿವಾರಣೆಗಾಗಿ ಏಕೀಕೃತ  ತಂತ್ರಾಂಶವನ್ನು ರೂಪಿಸಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಗಳಡಿ  1ನೇ ತರಗತಿಯಿಂದ 10ನೇ ತರಗತಿಗೆ ಅನ್ವಯವಾಗುವಂತೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು  ವಿತರಿಸಲಾಗುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ವಿವರಗಳನ್ನು ಪಡೆಯಲು ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳು  SATS ID  (ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ) ಯನ್ನು ಮಾತ್ರ ತಂತ್ರಾಂಶವು ಬಳಸುತ್ತದೆ. ಅಲ್ಲದೆ ಈ ತಂತ್ರಂಶದಲ್ಲಿ ಆನ್‍ಲೈನ್ ಮುಖಾಂತಾರ ಜಾತಿ, ಆದಾಯ ಮತ್ತು ಜಾತಿ / ಧರ್ಮ ಪರಿಶೀಲನೆ ಮಾಡಲು ಅಟಲ್ ಜೀ ಜನಸ್ನೇಹಿ  (AJSK) ದತ್ತಾಂಶದೊಂದಿಗೆ ಸಂಯೋಜಿಸಲಾಗಿದೆ. ವಿದ್ಯಾರ್ಥಿಯ ಆಧಾರ್ ಜೋಡಣೆಯಿರುವ ಬ್ಯಾಂಕ್ ವಿವರಗಳನ್ನು  NPIC ನಿಂದ ಪಡೆದು ಆ ಖಾತೆಗೆ ನೇರ ನಗದು ವರ್ಗಾವಣೆಯನ್ನು ಮಾಡಲಾಗುತ್ತದೆ. ಇದರಿಂದ ನಕಲಿ ಹಾಗೂ ಬೇರೆ ಫಲಾನುಭವಿಗಳಿಗೆ ಹಣ ಪಾವತಿಯಾಗುವುದಿಲ್ಲ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ  ಆಧಾರ್ ಸಂಖ್ಯೆ, ಎಸ್‍ಎಟಿಎಸ್ ಐಡಿ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್‍ಡಿ ಸಂಖ್ಯೆ. ಹಾಗೂ ಎಸ್.ಎಸ್.ಎಲ್.ಸಿ  ನಂತರದ ವಿದ್ಯಾರ್ಥಿಗಳಿಗೆ ಈ ದಾಖಲೆಗಳೊಂದಿಗೆ ಎಸ್ ಎಸ್ ಎಲ್ ಸಿ / ಪಿ.ಯು.ಸಿ ಪರೀಕ್ಷೆಯ ನೋಂದಣಿ ಸಂಖ್ಯೆ ಮತ್ತು ಉತ್ತೀರ್ಣ ವರ್ಷದ ದಾಖಲೆಗಳನ್ನು ಪಡೆಯಲಾಗುವುದು. ಇದರಿಂದ ದಾಖಲಾತಿಗಳ ಅಪ್‍ಲೋಡ್ ಇಲ್ಲದ ಸರಳ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ  https://ssp.karnataka.gov.in ಗೆ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ  https://ssp.postmatric.karnataka.gov.in  ಗೆ ಲಾಗ್‍ಇನ್ ಆಗಿ ಆಧಾರ್ ಸಂಖ್ಯೆ ಮತ್ತು ಹೆಸರು,  SATS ID,  ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.

10ನೇ ತರಗತಿಯ ನಂತರದ ಯಾವುದೇ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ವೈದ್ಯಕೀಯ ಶಿಕ್ಷಣ ಇಲಾಖೆ, ಆಯುಷ್ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ವಿಕಲಚೇತನರ ಕಲ್ಯಾಣ ಇಲಾಖೆಯಡಿ ವಿತರಿಸಲಾಗುತ್ತಿದ್ದು, ಇದನ್ನು ಸಹ ಸರಳೀಕರಣಗೊಳಿಸಿ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಡಿ ಸೇರಿಸಲಾಗಿದ್ದು, ಎಲ್ಲಾ ವರ್ಗದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಅನುಕೂಲವಾಗಲಿದೆ.

ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ ಕಾಲೇಜು ಮಾಹಿತಿ ವ್ಯವಸ್ಥೆ  (CIS – Collage Information System)     ನ ಮೂಲಕ 70 ವಿಶ್ವವಿದ್ಯಾಲಯಗಳು, 10 ಇಲಾಖೆಗಳು 14143 ಕಾಲೇಜು-243 ಕೋರ್ಸ್ – 2516 ಕೋರ್ಸ್ ಸಂಯೋಜನೆ – 15 ಸೀಟ್ ವಿಧ ಹಾಗೂ ಶುಲ್ಕ ವಿವರಗಳನ್ನು ಪೂರ್ವ ಮ್ಯಾಪಿಂಗ್ ಮಾಡಲಾಗಿದೆ.

ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗಾಗಿ ಉನ್ನತ ಶಿಕ್ಷಣ ಇಲಾಖೆಯ ಯುನಿಡೇಟಾ (UniData)  ಸರ್ವರ್ http://unidata.karnataka.gov.in  ಮೂಲಕ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಇಲಾಖೆಗಳಿಂದ ವಿದ್ಯಾರ್ಥಿಗಳ ಶಯಕ್ಷಣಿಕ ವಿವರಗಳ ದತ್ತಂಶವನ್ನು ಸಂಗ್ರಹಿಸಲಾಗುತ್ತಿದ್ದು, ಸದರಿ ದತ್ತಾಂಶದ ಆಧಾರದ ಮೇಲೆ ಮೆಟ್ರಕ್ ನಂತರದ ವಿದ್ಯಾರ್ಥಿ ವೇತನ ಅರ್ಜಿಗಳ ಪರಿಶೀಲನೆ ಹಾಗೂ ಮಂಜೂರಾತಿ ಪ್ರಕ್ರಿಯೆಯನ್ನು ವಿನ್ಯಾಸ ಗೊಳಿಸಲಾಗಿದೆ. ಈ ದತ್ತಾಂಶದಲ್ಲಿ 59,98,243 ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಶೈಕ್ಷಣಿಕ ಮಾಹಿತಿ ಲಭ್ಯವಿದೆ ಎಂದು ತಿಳಿಸಿದರು.

ಇತರ ರಾಜ್ಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಅರ್ಹ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಇ-ದೃಢೀಕರಣ  (e-Attestation)  ವ್ಯವಸ್ಥೆಯ ಮೂಲಕ ಅವರ ಶೈಕ್ಷಣಿಕ ಹಾಗೂ ಶುಲ್ಕ ರಸೀದಿ ದಾಖಲೆಗಳ ಇ-ದೃಢೀಕರಣ ಮಾಡಲಾಗುತ್ತದೆ.

2019-20ನೇ ಸಾಲಿನಿಂದ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರು ಮಾಡಲು ವಿದ್ಯಾರ್ಥಿಗಳ ದಾಖಲೆಗಳ ಪರಿಶೀಲನೆಯನ್ನು ವಿದ್ಯುನ್ಮಾನಗೊಳಿಸಲು ಇ-ದೃಢೀಕರಣ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಈ ನಿಟ್ಟಿನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅವಶ್ಯವಾಗಿರುವ ದಾಖಲೆಗಳನ್ನು ವಿದ್ಯುನ್ಮಾನವಾಗಿ ದೃಢೀಕರಿಸಲು ರಾಜ್ಯಾದ್ಯಂತ 11174 ಇ-ದೃಢೀಕರಣ ಅಧಿಕಾರಿಗಳನ್ನು ನೇಮಿಸಲಾಗಿದೆ. ಇ-ದೃಢೀಕರಿಸಿದ ದಾಖಲೆಗಳನ್ನು ಸುರಕ್ಷಿತವಾಗಿಡಲು ಮತ್ತು ಮರು ಬಳಕೆ ಮಾಡಲು ಬ್ಲಾಕ್‍ಚೈನ್ (BLOCK CHAIN TECHNOLOGY)  ಎಂಬ ವಿನೂತನ ತಂತ್ರಾಂಶವನ್ನು ಬಳಸಲಾಗುತ್ತಿದೆ.

ಈ ತಂತ್ರಜ್ಞಾನದ ಬಳಕೆಯಿಂದ ವಿದ್ಯಾರ್ಥಿ ವೇತನಕ್ಕೆ ಅವಶ್ಯವಿರುವ ದಾಖಲೆಗಳ ನೈಜತೆಯನ್ನು ಸುಲಭವಾಗಿ ಪರೀಕ್ಷಿಸಬಹುದು ಮತ್ತು ಇದರಿಂದ ವಿದ್ಯಾರ್ಥಿವೇತನದ ಪಾವತಿಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬಹುದಾಗಿದೆ. ಸರ್ಕಾರದಿಂದ ನೇಮಿಸಲಾಗಿರುವ ಇ-ದೃಢೀಕರಣ ಅಧಿಕಾರಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಉಪಯೋಗಿಸಿ    ಇ -ಸಹಿಯನ್ನು ಮಾಡುವ ಮೂಲಕ ತಮ್ಮ ಸಂಸ್ಥೆಯ ವಿದ್ಯಾರ್ಥಿಗಳ ದಾಖಲೆಯನ್ನು ದೃಢೀಕರಿಸುತ್ತಾರೆ.

2019-20 ಮತ್ತು 2020-21ನೇ ಸಾಲಿನಲ್ಲಿ ಮಂಜೂರಾದ ಮೊತ್ತದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳು ಕಾಲೇಜಿಗೆ ಪಾವತಿ ಮಾಡಿರುವ ಶುಲ್ಕ ಮೊತ್ತವನ್ನು ವಿದ್ಯಾರ್ಥಿಗಳ ಆಧಾರ್ ಜೋಡಿತ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಾಗೂ ಉಳಿದ ಮೊತ್ತವನ್ನು ಆಯಾ ಕಾಲೇಜುಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿ ಮಾಡಲಾಗಿದೆ. ಇತರ ಎಲ್ಲಾ ಇಲಾಖೆಗಳ ವಿದ್ಯಾರ್ಥಿಗಳಿಗೆ ಮಂಜೂರಾದ ಶುಲ್ಕದ ಮೊತ್ತವನ್ನು ನೇರವಾಗಿ ವಿದ್ಯಾರ್ಥಿಗಳ ಆಧಾರ್ ಜೋಡಿತ ಖಾತೆಗೆ ಪಾವತಿಸಲಾಗಿದೆ ಎಂದು ತಿಳಿಸಿದರು.

2021-22ನೇ ಸಾಲಿನಿಂದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ  Free ship card     ನ್ನು ಭಾರತ ಸರ್ಕಾರದಿಂದ ನೀಡಲಾಗುತ್ತಿದೆ. ಇದರಲ್ಲಿ ಭಾರತ ಸರ್ಕಾರದ ಮತ್ತು ರಾಜ್ಯ ಸರ್ಕಾರ ಎರಡರ ಪಾಲು ಒಳಗೊಂಡಿರುತ್ತದೆ.   Free ship card  ನ್ನು ವಿದ್ಯಾರ್ಥಿಗಳು, ಯಾವ ಕಾಲೇಜು, ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುತ್ತಾರೋ ಆ ಕಾಲೇಜಿನಲ್ಲಿ/ವಿಶ್ವವಿದ್ಯಾಲಯದಲ್ಲಿ ಬಳಸಲು ಅನುಮತಿಸಲಾಗಿದ್ದು, ಬೇರೆ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಲ್ಲಿ ಬಳಸಲು ಸಾಧ್ಯವಿಲ್ಲ. ಇದು ಸಂಪೂರ್ಣ Aadhar based Attendance Link ಹೊಂದಿರುತ್ತದೆ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಸಂಪೂರ್ಣ  UPI E broacher  ಕೂಪನ್‍ಗಳನ್ನು ವಿತರಿಸಲಾಗುವುದು. ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುತ್ತಿರುವ ನಿರ್ದಿಷ್ಟ ವಿದ್ಯಾ ಸಂಸ್ಥೆಯಲ್ಲಿ ಇದನ್ನು ಬಳಸಲು ಅವಕಾಶವಿರುವುದರಿಂದ ಯಾವುದೇ ರೀತಿಯ ದುರುಪಯೋಗವಾಗುವುದಿಲ್ಲ. ಇದು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಅನ್ವಯವಾಗುತ್ತದೆ ಎಂದು ರಾಜೀವ್ ಚಾವ್ಲ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಇ-ಆಡಳಿತ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿಪಿನ್ ಸಿಂಗ್, ಪ್ರಾಜೆಕ್ಟ್ ಡೈರೆಕ್ಟರ್ ಶ್ರೀಮತಿ ರಶ್ಮಿ, ಎನ್.ಐ.ಸಿ ಸಂಸ್ಥೆಯ ಹಿರಿಯ ತಂತ್ರಜ್ಞ ವಿಶ್ವನಾಥ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here