ಕಲಬುರಗಿ: ಮಹಾನಗರ ಪಾಲಿಕೆಯ ಡೇ-ನಲ್ಮ್ ಯೋಜನೆಯಡಿ 2021-22ನೇ ಸಾಲಿನಲ್ಲಿ ಸ್ವಯಂ ಉದ್ಯೋಗಕ್ಕಾಗಿ ಗುಂಪು ಸಾಲ ಪಡೆಯಲು ಕಲಬುರಗಿ ನಗರ ಪ್ರದೇಶದ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಕಲಬುರಗಿ ನಗರ ಪ್ರದೇಶದಲ್ಲಿ ವಾಸವಾಗಿರಬೇಕು. ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಫಲಾನುಭವಿಗಳ ವಯೋಮಿತಿ 18 ರಿಂದ 50 ವರ್ಷದೊಳಗಿರಬೇಕು. ಬೀದಿ ವ್ಯಾಪಾರಿಗಳು, ಅಂಗವಿಕಲರು, ಮಂಗಳಮುಖಿಯರಿಗೆ ಹಾಗೂ ವಿಧವೆಯರಿಗೆ ಆದ್ಯತೆ ನೀಡಲಾಗುತ್ತದೆ ಅರ್ಜಿದಾರರು ಕಲಬುರಗಿ ಮಹಾನಗರ ಪಾಲಿಕೆಯ ಉತ್ತರ ಸಿ.ಎಲ್.ಎಫ್. ಹಾಗೂ ದಕ್ಷಿಣ ಸಿ.ಎಲ್.ಎಫ್. ವಲಯದ (ವಾರ್ಡ್ ನಂ. 01 ರಿಂದ 32 (ಉತ್ತರ) ಹಾಗೂ 31 ಮತ್ತು 33 ರಿಂದ 55 (ದಕ್ಷಿಣ) ವ್ಯಾಪ್ತಿಯಲ್ಲಿರಬೇಕು.
ಅರ್ಹ ಫಲಾಭವಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಪಡಿತರ ಚೀಟಿ, ಚುನಾವಣೆ ಗುರುತಿನ ಚೀಟಿ, ಪ್ರಚಲಿತ ಜಾತಿ ಆದಾಯ ಪ್ರಮಾಣಪತ್ರ, ಯೋಜನಾ ವರದಿ, ವಿದ್ಯಾರ್ಹತೆ ಪ್ರಮಾಣ ಪತ್ರ, ಇತ್ತೀಚಿನ ಎರಡು ಭಾವಚಿತ್ರ, ಬ್ಯಾಂಕ್ ಪಾಸ್‍ಪುಸ್ತಕ, ಆಧಾರ ಕಾರ್ಡ್ ಈ ಎಲ್ಲಾ ದಾಖಲೆಗಳನ್ನು ದೃಢೀಕರಿಸಿ ಸಲ್ಲಿಸಬೇಕು.
ಅರ್ಜಿದಾರರು ಕಲಬುರಗಿ ನಗರದ ನಿವಾಸಿಯಾಗಿರಬೇಕು. ಅರ್ಹ ಫಲಾನುಭವಿಗಳು ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಮಹಾನಗರ ಪಾಲಿಕೆಯ ಡೇ-ನಲ್ಮ್ ಉತ್ತರ ಹಾಗೂ ದಕ್ಷಿಣ ಶಾಖೆಯಿಂದ (ಸಂಬಂಧಪಟ್ಟ ಡೇ-ನಲ್ಮ್ ಶಾಖೆಯಿಂದ) ಕಚೇರಿ ಸಮಯದಲ್ಲಿ 2021ರ ಜುಲೈ 26 ರಿಂದ ಆಗಸ್ಟ್ 5 ರೊಳಗಾಗಿ ಪಡೆಯಬೇಕು. ಫಲಾನುಭವಿಗಳು ಭರ್ತಿ ಮಾಡಿದ ಅರ್ಜಿಗಳನ್ನು 2021ರ ಆಗಸ್ಟ್ 10 ರೊಳಗಾಗಿ ಕಲಬುರಗಿ ಮಹಾನಗರಪಾಲಿಕೆಯ ಆವಕ ಶಾಖೆಯಲ್ಲಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಡೇ-ನಲ್ಮ್ ಯೋಜನೆಯಡಿ ಸ್ವಯಂ ಉದ್ಯೋಗಕ್ಕಾಗಿ ಕಲಬುರಗಿ (ದಕ್ಷಿಣ) ಹಾಗೂ ಕಲಬುರಗಿ (ಉತ್ತರ)ಕ್ಕೆ ನಿಗದಿಪಡಿಸಿದ ಗುರಿ, ಕ್ರೇಡಿಟ್ ಲಿಂಕೇಜ್ ಗುರಿ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಯನ್ನು ಕಲಬುರಗಿ ಮಹಾನಗರ ಪಾಲಿಕೆಯ ಡೇ-ನಲ್ಮ್ ಉತ್ತರ ಹಾಗೂ ದಕ್ಷಿಣ ಶಾಖೆಗೆ ಸಂಪರ್ಕಿಸಿ ಪಡೆಯಲು ಕೋರಲಾಗಿದೆ.