ಕಲಬುರಗಿ: ಶರಣ ಸೂಫಿ ಸಂತರ ನಾಡಿನಲ್ಲಿ ಮತೀಯ ಬೀಜ ಬಿತ್ತಲೆಂದೇ ಕೇಂದ್ರೀಯ ವಿವಿಯಲ್ಲಿ ಷಡ್ಯಂತ್ರ ನಡೆಯುತ್ತಿರುವುದನ್ನು ವಿವಿಯ ಆಡಳಿತವು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಮತ್ತು ಸಂವಿಧಾನಕ್ಕೆ ನ್ಯಾಯಾಲಯಕ್ಕೆ ಅಪಮಾನಿಸುವ ರೋಹಿಣಾಕ್ಷ ಶಿರ್ಲಾಲ ಇವರನ್ನು ಅಮಾನತ್ತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲು “ಕೇಂದ್ರೀಯ ವಿಶ್ವವಿದ್ಯಾಲಯದ ಶುದ್ಧೀಕರಣ ಹೋರಾಟ ಸಮಿತಿ” ಮೂಲಕ ಸಾಹಿತಿ ಪ್ರೊ. ಆರ್.ಕೆ ಹುಡಗಿ ಮತ್ತು ಹೋರಾಟಗಾರ್ತಿ ಕೆ ನೀಲಾ ಆಗ್ರಹಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರೀಯ ವಿಶ್ವವಿದ್ಯಾಲಯದ (ಕಡಗಂಚಿ, ಕಲಬುರಗಿ ಜಿಲ್ಲೆ) ರೋಹಿಣಾಕ್ಷ ಶಿರ್ಲಾಲ್ ಅನ್ನುವ ಸಹಾಯಕ ಪ್ರಾಧ್ಯಾಪಕ, ಮಾನವ ಹಕ್ಕುಗಳ ಹೋರಾಟಗಾರರಾದ ಫಾದರ್ ಸ್ಡ್ಯಾನ್ ಸ್ವಾಮಿಯವರನ್ನೂ, ಅವರ ಸಾವು ಖಂಡಿಸಿ ಹೋರಾಟ ನಡೆಸಿದವರನ್ನೂ ನಾಡದ್ರೋಹಿಗಳೆಂದು ಜಡ್ಜ್ಮೆಂಟ್ ಕೊಟ್ಟಿದ್ದಾರೆ. ಬಾಂಬೆ ಹೈಕೋರ್ಟ್ ಸ್ಟ್ಯಾನ್ ಸ್ವಾಮಿಯವರ ಕಾರ್ಯವನ್ನು ಶ್ಲ್ಯಾಘಿಸಿದೆ. ಆದಿವಾಸಿಗಳಿಗಾಗಿ ಬದುಕು ಸವೆಸಿದ್ದ ಫಾದರ್ ಅವರನ್ನು ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಕೋರ್ಟಿನಲ್ಲಿ ಪ್ರಕರಣವು ಇನ್ನೂ ವಿಚಾರಣೆಯ ಹಂತದಲ್ಲಿದೆ. ಆದರೆ ಆರೋಪಿಯನ್ನು ಈ ರೋಹಿಣಾಕ್ಷ ತನ್ನ ಕೋಮುವಾದಿ ಮನಸಿನಿಂದ ಅಕ್ಷರಗಳನ್ನು ಮೂಡಿಸಿ ಅಪರಾಧಿಯಾಗಿಸಿದರು. ಈ ಅಧಿಕಾರ ಅವರಿಗೆ ಕೊಟ್ಟವರಾರು? ಜಾನಪದ ಮತ್ತು ಆದಿವಾಸಿ ವಿಭಾಗದ ಈ ಸ.ಪ್ರಾಧ್ಯಾಪಕ ಆದಿವಾಸಿ ಜನತೆಗಾಗಿ ಜೀವನದ ತುಂಬ ಶ್ರಮಿಸಿದ ವ್ಯಕ್ತಿಯ ವಿರುದ್ಧ ಬರೆಯುತ್ತಾರೆ ಎಂದರೆ ಇವರ ಧೋರಣೆ ಏನಿರಬಹುದು ಮತ್ತು ಇವರು ಯಾರ ಪರ ಎಂಬುದು ರುಜುಗೊಳಿಸಿದಂತಿದೆ ಎಂದು ಮಹಿಳಾ ಹೋರಾಟಗಾರ್ತಿ ಸಾಹಿತಿ ಕೆ ನೀಲಿ ಪ್ರಶ್ನಿಸಿದ್ದಾರೆ.
ಹಿಂದಿನಿಂದಲೂ ಹೀಗೆ ಕೋಮು ಪ್ರಚೋದನಾತ್ಮ ಚಟುವಟಿಕೆಗೆ ಪೂರಕವಾಗಿ ಅಕ್ಷರ ಬಳಸಿದ ಅಭ್ಯಾಸವನ್ನೇ ಈಗ ಶರಣ ಸೂಫಿ ಸಂತರ ಭಾವೈಕ್ಯ ನಾಡಿನಲ್ಲಿ ಮುಂದುವರೆಸಿದ್ದಾರೆ. ಅವರ ಬರಹವು ಜನಾಂಗೀಯ ದ್ವೇಷದ ಉದ್ದೇಶ ಹೊಂದಿದೆ ಎಂಬುದು ಸ್ಪಷ್ಟ. ಆದರೆ ಹೈದರಾಬಾದ್ ಕರ್ನಾಟಕವು ಗಟ್ಟಿಯಾದ ಬಹುತ್ವದ ಬೇರುಗಳನ್ನು ಹೊಂದಿದೆ. ವಿಶ್ವವಿದ್ಯಾಲಯಕ್ಕೆ ಬಂದು ಭಾರತದ ಸಂವಿಧಾನದ ಆಶಯಗಳನ್ನು ಬಲಪಡಿಸುವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮಹತಿಯ ಪಾಠ ಪ್ರವನ ಮಾಡುವುದನ್ನು ಬಿಟ್ಟು ಕೋಮುವಿಷಬೀಜವನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬುವ ಕೆಲಸಕ್ಕೆ ಇಲ್ಲಿ ಆಸ್ಪದವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೋಮುದ್ವೇಷದ ಮನೋಭಾವ ಮೂಡಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಅಲ್ಲ ಎಂದರು.
ಶರಣ ಸೂಫಿ ಸಂತರ ನಾಡಿನಲ್ಲಿ ಮತೀಯ ಬೀಜ ಬಿತ್ತಲೆಂದೇ ಕೇಂದ್ರೀಯ ವಿವಿಯಲ್ಲಿ ಷಡ್ಯಂತ್ರ ನಡೆಯುತ್ತಿರುವುದನ್ನು ವಿವಿಯ ಆಡಳಿತವು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಎಲ್ಲಿಂದಲೋ ಬಂದವರು ಶರಣಸೂಫಿಸಂತರ ನಾಡಿನ ಸೌಹಾರ್ದತೆ ಹಾಳುಗೆಡಹುವ ದುಷ್ಟಾಲೋಚನೆ ಹೊಂದಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದರು.
ಈ ನೆಲದ ಸೆಕ್ಯೂಲರ್ ಮತ್ತು ಜೀವಪರ ಮನಸುಗಳು ಯಾವ ಕಾರಣಕ್ಕೂ ಇಂತಹ ಮಾನವವಿರೋಧಿ ಸಂಸ್ಕೃತಿಯನ್ನು ಸಹಿಸುವುದಿಲ್ಲ. ಸಂವಿಧಾನಕ್ಕೆ ನ್ಯಾಯಾಲಯಕ್ಕೆ ಅಪಮಾನಿಸುವ ರೋಹಿಣಾಕ್ಷ ಶಿರ್ಲಾಲ ಇವರನ್ನು ಅಮಾನತ್ತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲು “ಕೇಂದ್ರೀಯ ವಿಶ್ವವಿದ್ಯಾಲಯದ ಶುದ್ಧೀಕರಣ ಹೋರಾಟ ಸಮಿತಿ” ಮೂಲಕ ಇಂದು ಆಗ್ರಹಿಸಲಾಯಿತು. ಈ ವೇಳೆಯಲ್ಲಿ ಅರ್ಜುನ್ ಭದ್ರೆ ಸೇರಿದಂತೆ ಇತರರು ಇದ್ದರು.