ಭಾಲ್ಕಿ: ಕೋವಿಡ್ ಪರಿಸ್ಥಿತಿಯಲ್ಲಿ ಮಕ್ಕಳು ಶಿಕ್ಷಣ ಮತ್ತು ಸಂಸ್ಕಾರವಿಲ್ಲದೇ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಶಾಲೆಗಳು ಮುಚ್ಚಿದ್ದರಿಂದ ಬಾಲ್ಯವಿವಾಹ, ಬಾಲಕಾರ್ಮಿಕ ಸಮಸ್ಯೆಗಳು ಉಲ್ಬಣಗೊಂಡಿವೆ ಎಂದು ಸಂಘಟನೆಯ ಜಿಲ್ಲಾ ಸಂಯೋಜಕ ರೇವಣಸಿದ್ಧ ಜಾಡರ್ ಕಳವಳ ವ್ಯಕ್ತಪಡಿಸಿದರು.
ಭಾಲ್ಕಿಯ ಸದ್ಗುರು ವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ ಶನಿವಾರ ವಿವಿಧ ಗ್ರಾಮಗಳ ಪ್ರಗತಿ ಕೇಂದ್ರಗಳಿಗೆ ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಭಾಲ್ಕಿ ತಾಲ್ಲೂಕಿನಲ್ಲಿ ಒಟ್ಟು ೧೪೨ ಪ್ರಗತಿ ಕೇಂದ್ರಗಳಿಗೆ ಕಲ್ಯಾಣ ಕರ್ನಾಟಕ ಸಂಘದಿಂದ ಉಚಿತವಾಗಿ ಕಲಿಕಾ ಸಾಮಗ್ರಿ ವಿತರಿಸಲಾಗಿದೆ. ಕೇಂದ್ರಗಳ ಸಂಯೋಜಕರು ಹಳ್ಳಿಗಳ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ, ಆಟೋಟಗಳನ್ನು ಕಲಿಸುತ್ತಾರೆ ಎಂದು ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸೋಮನಾಥ ಮುದ್ದಾ ಅಧ್ಯಕ್ಷತೆ ವಹಿಸಿದ್ದರು. ವಿಕಾಸ ಅಕಾಡೆಮಿಯ ತಾಲ್ಲೂಕಾ ಸಂಯೋಜಕ ಸಂತೋಷ ಮೆಟಗೆ, ಸಂಘದ ತಾಲ್ಲೂಕು ಸಂಯೋಜಕ ಈಶ್ವರ ರುಮ್ಮಾ, ಸುನಿಲ ಹೊನ್ನಾ, ರವಿ ಸೂರ್ಯವಂಶಿ, ನಾಗರಾಜ ಶೀಲವಂತ ಮತ್ತಿತರರು ಇದ್ದರು. ಮುಖ್ಯಗುರು ರಾಜಕುಮಾರ ಮೇತ್ರೆ ಸ್ವಾಗತಿಸಿದರು. ಉಜ್ವಲಾ ಬೆಲ್ಲಾಳೆ ನಿರ್ವಹಿಸಿದರು. ಶಾಂತಾ ಸಿರಗಾಪೂರೆ ವಂದಿಸಿದರು.