ಸುರಪುರ: ಈಗಾಲೆ ನೆರೆಯಿಂದಾಗಿ ತಮ್ಮ ಬೆಳೆಯನ್ನು ಕಳೆದುಕೊಂಡು ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.ಇಂತಹ ಸಂದರ್ಭದಲ್ಲಿ ನಮ್ಮ ಕಂದಾಯ ಇಲಾಖೆಯ ಅಧಿಕಾರಿಗಳು ಸರಿಯಾಗಿ ಸರ್ವೇ ಮಾಡಿ ವರದಿ ನೀಡಬೇಕು.ಕಳೆದ ಬಾರಿ ಪರಿಹಾರ ವಿತರಣೆಯಲ್ಲಿ ವಂಚನೆಯಾಗಿದ್ದು ಕಂಡು ಬಂದಿದೆ.ಈಬಾರಿ ಅಂತಹ ಅಕ್ರಮ ಕಂಡುಬಂದರೆ ಅಂತವರ ಮೇಲೆ ೪೨೦ ಕೇಸ್ ಹಾಕಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ತಹಸೀಲ್ ಕಚೇರಿಯಲ್ಲಿ ಶನಿವಾರ ಸಂಜೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ,ಈಗಾಗಲೇ ಎಲ್ಲಾ ಪ್ರವಾಹ ಸ್ಥಳಗಳನ್ನು ವೀಕ್ಷಣೆ ಮಾಡಲಾಗಿದೆ,ಆದರೆ ಎಷ್ಟು ಎಕರೆ ಮುಳುಗಡೆಯಾಗಿದೆ ಎಂದು ಈಗ ನಿಖರವಾಗಿ ಹೇಳಲಾಗದು.ಆದ್ದರಿಂದ ಪ್ರವಾಹ ಕಡಿಮೆಯಾದ ನಂತರ ಸರಿಯಾದ ಮಾಹಿತಿ ಸಿಗಲಿದೆ.ಸದ್ಯ ೧೪೨೮ ಹೆಕ್ಟರ್ ಮುಳುಗಡೆಯಾಗಿರುವ ಕುರಿತು ಅಂದಾಜಿಸಲಾಗಿದೆ ಎಂದರು.ಈ ಹಿಂದೆ ಪರಿಹಾರ ವಿತರಣೆಯಲ್ಲಿ ಲೋಪವಾಗಿ ರೈತರು ತೊಂದರೆಗೊಳಗಾಗಿದ್ದಾರೆ.ಆದರೆ ಈ ವರ್ಷ ಮುಳುಗಡೆಯಾದ ಜಮೀನುಗಳ ವರಿದಯನ್ನು ಆಯಾ ಗ್ರಾಮ ಪಂಚಾಯತಿಗಳಲ್ಲಿ ಅಂಟಿಸಲಾಗುವುದು.ಯಾರದಾದರು ಹೆಸರು ಮರೆತು ಹೋಗಿದ್ದರೆ ಅಂತವರು ತಹಸೀಲ್ ಕಚೇರಿಗೆ ತಮ್ಮ ಹೆಸರನ್ನು ಕೊಡುವಂತೆ ತಿಳಿಸಿದರು.ಈಬಾರಿ ಯಾವುದೇ ರೀತಿಯ ಅಕ್ರಮಕ್ಕೆ ಆಸ್ಪದೆವಿಲ್ಲ ಇದು ಅಧಿಕಾರಿಗಳ ಗಮನಕ್ಕಿರಲಿ ಎಂದು ಎಚ್ಚರಿಕೆಯನ್ನು ನೀಡಿದರು.
ರೈತರ ಪಹಣಿ ತಿದ್ದುಪಡಿಯ ಕುರಿತು ಸರಳಿಕರಣಕ್ಕಾಗಿ ಶೀಘ್ರದಲ್ಲಿಯೆ ಕಂದಾಯ ಅದಾಲತ್ ನಡೆಸಲಾಗುವುದು ಅಲ್ಲದೆ ನಾನೇ ಖುದ್ದು ಪ್ರತಿ ೧೫ ದಿನಕ್ಕೊಮ್ಮೆ ತಹಸೀಲ್‌ಲ್ಲಿದ್ದು ಮಾಡಿಸುವುದಾಗಿ ತಿಳಿಸಿದರು.ಯಾವುದೇ ಅಧಿಕಾರಿಗೆ ಲಂಚವನ್ನು ಕೊಡಬೇಡಿ,ಲಂಚ ತೆಗೆದುಕೊಂಡವರಷ್ಟೆ ತಪ್ಪು ಲಂಚ ಕೊಡುವುದಾಗಿ ಇದರಿಂದ ಕೊಡುವವರಿಗೂ ಶಿಕ್ಷೆ ನೀಡುವ ಕಾನೂನು ಇದೆ ಎಂದರು.ಇನ್ನು ಖಾನಾಪುರ ಎಸ್.ಹೆಚ್ ಭಾಗದಲ್ಲಿ ಮರಳಿನ ಲಾರಿಗಳ ಓಡಾಟದಿಂದ ರಸ್ತೆಗಳು ಹಾಳಾಗಿದ್ದು ಪ್ರತಿ ಕಿಲೋ ಮೀಟರ್‌ಗೆ ೧.೫೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಡಾ:ರಾಗಪ್ರಿಯ ಆರ್ ಮಾತನಾಡಿ,೪.೨೬ ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಿಂದ ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ೧೪೨೮ ಹೆಕ್ಟೆರ್ ಬೆಳೆ ನಷ್ಟವಾದ ಬಗ್ಗೆ ಈಗ ವರದಿ ಬಂದಿದೆ,ಆದರೆ ನಿಖರವಾದ ಮಾಹಿತಿ ಪ್ರವಾಹ ಕಡಿಮೆಯಾದ ಮೇಲೆ ಸಿಗಲಿದೆ ಎಂದರು.ಯಾವುದೇ ರೈತರ ಜಮೀನು ಮುಳುಗಡೆಯಾದ ಸರ್ವೇ ತಪ್ಪದಂತೆ ನೋಡಿಕೊಳ್ಳಲು ತಿಳಿಸಲಾಗಿದೆ ಎಂದರು.
ಸದ್ಯ ಸುರಪುರ ತಾಲೂಕಿನಲ್ಲಿ ೧೧೭೮ ಹೆಕ್ಟೆರ್ ಮತ್ತು ಹುಣಸಗಿ ತಾಲೂಕಿನಲ್ಲಿ ೧೭೮ ಹೆಕ್ಟೆರ್ ಎಂದು ಗುರುತಿಸಲಾಗಿದೆ,ಅಲ್ಲದೆ ೨೦೧೯-೨೦ ರಲ್ಲಿ ಸುರಪುರ ತಾಲೂಕಿನ ೨೩೨೫ ರೈತರಿಗೆ ೨ ಕೋಟಿ ಪರಿಹಾರ ಹಾಗು ಹುಣಸಗಿ ತಾಲೂಕಿನ ೨೪೯ ರೈತರಿಗೆ ೫೮ ಲಕ್ಷ ಪರಿಹಾರ ನೀಡಲಾಗಿದೆ ಎಂದರು.ಜಿಲ್ಲೆಯಾದ್ಯಂತ ೨೨ ಸೇತುವೆ ಹಾಳಾಗಿವೆ,೬೨ ವಿದ್ಯುತ್ ಟಿಸಿ ಹಾಳಾಗಿವೆ,ಸುರಪುರ ಹುಣಸಗಿ ತಾಲೂಕಿನಲ್ಲಿ ಒಟ್ಟು ೧೫೩ ಕಿ.ಮೀ ರಸ್ತೆ ಹಾಳಾಗಿರುವ ಬಗ್ಗೆ ಅಂದಾಜಿಸಲಾಗಿದೆ.ಎರಡು ತಾಲೂಕಿನ ಎಲ್ಲಾ ಅಧಿಕಾರಿಗಳು ಕರ್ತವ್ಯದಲ್ಲಿದ್ದು ಸರಿಯಾದ ವರದಿ ತಯಾರಿಸುವಂತೆ ತಿಳಿಸಿದರು.
ಜಿಲ್ಲಾ ಪಂಚಾಯತಿ ಸಿಇಒ ಶಿಲ್ಪಾ ಶರ್ಮಾ ಮಾತನಾಡಿ,ತಾಲೂಕಿನ ತಿಂಥಣಿ ಮತ್ತಿತರೆ ಗ್ರಾಮಗಳಲ್ಲಿ ಪ್ರವಾಹದಿಂದ ಕುಡಿಯುವ ನೀರು ಸರಬರಾಜಿಗೆ ತೊಂದರೆಯುಂಟಾಗಿದ್ದು ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಸೂಚಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಅನಗಂಡಿ,ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ಹುಣಸಗಿ ತಹಸೀಲ್ದಾರ್ ಅಶೋಕ ಸುರಪುರ, ಡಿವೈಎಸ್ಪಿ ವೆಂಕಟೇಶ ಉಗಿಬಂಡಿ,ತಾಲೂಕು ಪಂಚಾಯತಿ ಇಒ ಅಮರೇಶ ಮೂಡಲದಿನ್ನಿ,ಕೃಷಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಬಾಲರಾಜ್,ಕೃಷಿ ಎಡಿ ಗುರುನಾಥ ಸೇರಿದಂತೆ ಎಲ್ಲಾ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪಿಡಿಒ ಹಾಗು ವಿಎ ಗಳಿದ್ದರು.