ಕಲಬುರಗಿ: ಬಸವ ತತ್ತ್ವವನ್ನು ಅನುಷ್ಠಾನಕ್ಕೆ ತರುವ ಮೂಲಕ ಸುಲಫಲ ಮಠ ಸಮಾಜ ಸೇವೆ ಸಲ್ಲಿಸುತ್ತಿದೆ ಎಂದು ಸಣ್ಣ ನಿರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಬಣ್ಣಿಸಿದರು.
ಸುಲಫಲ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಲಫಲ ಮಠದಿಂದ ಕೊಡಮಾಡುವ ಕಾಯಕಯೋಗಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುವವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದಾರೆ. ಒಳ್ಳೆ ಕೆಲಸ ಮಾಡಿದಾಗ ಪ್ರೋತ್ಸಾಹಿಸುವ ಗುಣ ಎಲ್ಲರಲ್ಲೂ ಇರುವುದಿಲ್ಲ. ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಪ್ರಶಸ್ತಿ ನೀಡಿ ಆಶಿರ್ವದಿಸಿದ್ದು ನನಗೆ ಸಂತಸ ತಂದಿದೆ ಎಂದರು.
ಶ್ರೀ ಶೈಲ ಸಾರಂಗ ಮಠದ ಪೀಠಾಧಿಪತಿ ಜಗದ್ಗುರು ಡಾ. ಸಾರಂಗಧರದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಣ್ಣ ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಜಿ.ಪಿ. ಸುರೇಶ, ಅಧೀಕ್ಷಕ ಅಭಿಯಂತರ ಸುರೇಶ ಶರ್ಮಾ, ಅಧಿಕಾರಿಗಳಾದ ಅಶೋಕ ಅಂಬಲಗಿ, ನರೇಂದ್ರ ಕುಮಾರ, ಸುರೇಶ ಮೇಧಾ, ಶಾಂತಪ್ಪ ಜಾಧವ್ ಉಪಸ್ಥಿತರಿದ್ದರು.