ಕಲಬುರಗಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ವರ್ಷಾಚರಣೆ ಅಂಗವಾಗಿ ಕಲಬುರಗಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶೋತೃಗಳು ಸಂಗೀತ ಸಾಗರದಲಿ ತೇಲಿದರು.
ಡಾ.ಎಸ್. ಎಂ.ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಸಂಜೆ ಜರುಗಿದ ರಾಘವೇಂದ್ರ ಬಡಶೇಷಿ ಮತ್ತು ಶಂಕರ ಹೂಗಾರ ಅವರ ಹಿಂದೂಸ್ತಾನಿ ಗಾಯನ, ಶಿವರುದ್ರಯ್ಯ ಗೌಡಗಾಂವ್ ಅವರ ಜಾನಪದ ಸಂಗೀತ, ಲಕ್ಷ್ಮಿಶಂಕರ ಜೋಶಿ ಅವರ ದಾಸವಾಣಿ, ಮಹೇಶ್ ಬಡಿಗೇರ ಅವರ ಸುಗಮ ಸಂಗೀತ, ಪುಟ್ಟರಾಜ ರಾಜಾಪುರ ಅವರ ಕೊಳಲು ವಾದನ, ಶ್ರೀಶೈಲೇಶ ಗುತ್ತೇದಾರ ಮತ್ತು ಮೌನೇಶ ಬಡಿಗೇರರ ತಬಲಾ ವಾದನ, ತುಕಾರಾಮ ಸಿಂಗೇ ಅವರ ವಚನ ಗಾಯನವು ಸಭಿಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದವು. ಬಂಡಯ್ಯ ಹಿರೇಮಠ ನಿರೂಪಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕೋವಿಡ್ ಹಿನ್ನೆಲೆಯಲ್ಲಿ ಸೀಮಿತ ಸಂಖ್ಯೆಯ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಹೆಚ್ಚು ಜನ ಕಾರ್ಯಕ್ರಮ ವೀಕ್ಷಿಸಲಿ ಎಂಬ ಕಾರಣದಿಂದ ಫೇಸಬುಕ್ ಮೂಲಕ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.