ಕಲಬುರಗಿ: ಮುಂಬರುವ ಸ್ವಾತಂತ್ರ್ಯದ ಶತಮಾನೋತ್ಸವ ದೃಷ್ಟಿಕೋನದಿಂದ ಈ ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಹೆಚ್ಚು ಪಸರಿಸುವಂತಾಗಲಿ ಎಂದು ಕಲಬುರಗಿ ರಂಗಾಯಣ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ಪ್ರಭಾಕರ ಜೋಶಿ ಹೇಳಿದರು.
ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಡಾ. ಎಸ್. ಎಂ. ಪಂಡಿತ ರಂಗಮಂದಿರದಲ್ಲಿ ಸೋಮವಾರ ಸಂಜೆ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ವರ್ಷಾಚರಣೆ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲಾವಿದರು ವಿವಿಧ ಕಲೆಗಳ ಪ್ರದರ್ಶನದಲ್ಲಿ ಭಾರತದ ಸ್ವಾತಂತ್ರ್ಯ ಎತ್ತಿ ಹಿಡಿದು ದೇಶಭಕ್ತಿ, ಸಾರ್ವಭೌಮತ್ವ ಮತ್ತು ಐಕ್ಯತೆ ಭಾವನೆ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಕಲೆ ಮತ್ತು ಕಲಾವಿದರಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಭ್ರಾತೃತ್ವ ಭಾವ ಹೊರಬರಲಿ ಎಂದು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಮಾತನಾಡಿ, ದೇಶಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವ ವರ್ಷಾಚರಣೆ ಮಾಡಲಾಗುತ್ತಿದ್ದು, ಜಿಲ್ಲಾಡಳಿತದ ನಿರ್ದೇಶನದಂತೆ ಜಿಲ್ಲೆಯಲ್ಲಿ ವಾರವಿಡೀ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದೇಶಭಕ್ತಿ, ದೇಶಾಭಿಮಾನ ಬಗ್ಗೆ ಹೆಚ್ಚು ಒತ್ತು ಕೊಟ್ಟು ವಿವಿಧ ಕಲಾಪ್ರಕಾರಗಳಲ್ಲಿ ಸ್ವಾತಂತ್ರ್ಯ ಸೇನಾನಿಗಳ ಕಾರ್ಯವೈಖರಿಯನ್ನು ಸ್ಮರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪತ್ರಕರ್ತ ಭೀಮಾಶಂಕರ ಫಿರೋಜಾಬಾದ್, ಉದ್ಯಮಿ ರವೀಂದ್ರ ಭಟ್, ಹಿರಿಯ ಸಂಗೀತ ಕಲಾವಿದ ಬಾಬುರಾವ ಕೋಬಾಳ ಆಗಮಿಸಿದ್ದರು.
ಹಿರಿಯ ಕಲಾವಿದ ಸಿದ್ಧರಾಮಪ್ಪ ಪೊಲೀಸ್ ಪಾಟೀಲ್ ಅವರು ದೇಶಭಕ್ತಿ ಗೀತೆ ಹಾಡಿ ಪ್ರಾರ್ಥನೆಗೈದರು. ಕಲಾವಿದ ಬಂಡಯ್ಯ ಹಿರೇಮಠ ನಿರೂಪಿಸಿದರು.
ನಂತರ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಸಂಧ್ಯಾ ಭಟ್ ಅವರಿಂದ ಸಮೂಹ ನೃತ್ಯ, ಬಸವರಾಜ್ ಸಾಲಿ ಅವರಿಂದ ದೇಶಭಕ್ತಿ ಗೀತೆ, ಸೂರ್ಯಕಾಂತ ಡುಮ್ಮಾ ಅವರಿಂದ ಸುಗಮ ಸಂಗೀತ, ಬದ್ರಿನಾಥ ಮುಡಬಿ ಅವರಿಂದ ಪಿಟೀಲು ವಾದನ, ಬಾಬುರಾವ ಕೋಬಾಳ ಅವರಿಂದ ಜಾನಪದ ಸಂಗೀತ ಕಾರ್ಯಕ್ರಮ ಜರುಗಿತು.
ಜಯರಾವ್ ಕುಲಕರ್ಣಿ, ನಾಗಲಿಂಗಯ್ಯ ಸ್ಥಾವರಮಠ ಅವರು ತಬಲಾ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಅಣ್ಣಾರಾವ್ ಶೆಳಗ್ಗಿ, ಮನೋಹರ ವಿಶ್ವಕರ್ಮ, ಚೇತನ ಕೋಬಾಳ ಮತ್ತಿತರಿದ್ದರು.