ಕಲಬುರ್ಗಿ: ಸಮಾಜದಲ್ಲಿ ಎಲ್ಲೀತನಕ ಅಸಮಾನತೆ ಇರುವುದೋ ಅಲ್ಲೀತನಕ ಮೀಸಲು ವ್ಯವಸ್ಥೆ ಮುಂದುವರೆಯಬೇಕು ಎಂಬ ಆರ್‌ಎಸ್‌ಎಸ್‌ನ ರಾಷ್ಟ್ರೀಯ ಸರ ಸಂಘ ಸಂಚಾಲಕರಾದ ದತ್ತಾತ್ರೇಯ್ ಹೊಸಬಾಳೆ ಅವರ ಹೇಳಿಕೆಯನ್ನು ಬಿಜೆಪಿಯ ಹಿರಿಯ ಮುಖಂಡ ಹಾಗೂ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ಯಾಮರಾವ್ ಪ್ಯಾಟಿ ಅವರು ಶ್ಲಾಘಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದಲ್ಲಿನ ಇಂತಹ ಮೀಸಲು ವ್ಯವಸ್ಥೆಯನ್ನು ಬೆಂಬಲಿಸುವುದು ಅಷ್ಟೇ ಅಲ್ಲದೇ ಸಾಮಾಜಿಕ ಸಾಮರಸ್ಯ, ಸಾಮಾಜಿಕ ನ್ಯಾಯ ಎಲ್ಲರ ಪಾಲಾಗಬೇಕು. ಇಲ್ಲವಾದಲ್ಲಿ ಒಕ್ಕೂಟದ ವ್ಯವಸ್ಥೆ ಹಾಳಾಗುತ್ತದೆ. ದಲಿತರಿಲ್ಲದೇ ಭಾರತದ ಇತಿಹಾಸ ಪೂರ್ಣಗೊಳ್ಳುವುದಿಲ್ಲವೆಂದು ದತ್ತಾತ್ರೇಯ್ ಹೊಸಬಾಳೆ ಅವರು ಹೇಳಿದ್ದನ್ನು ಪ್ಯಾಟಿ ಅವರು ಹೇಳಿಕೆಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಎಲ್ಲೀಯವರೆಗೆ ಒಂದು ವರ್ಗಕ್ಕೆ ಅಸಮಾನತೆ ಅನುಭವಕ್ಕೆ ಬರುವುದೋ ಅದು ನಿವಾರಣೆ ಆಗುವವರೆಗೂ ಮೀಸಲಾತಿ ವ್ಯವಸ್ಥೆ ಮುಂದುವರೆಯಬೇಕು ಎಂದು ಘಟ್ಟಿ ಧ್ವನಿಯಲ್ಲಿ ಹೇಳಿದ ದತ್ತಾತ್ರೇಯ್ ಹೊಸಬಾಳೆ ಅವರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸು ನನಸಾಗಲು ಇದು ಪೂರಕವಾದ ಬೆಳವಣಿಗೆ ಎಂದು ಶ್ಯಾಮರಾವ್ ಪ್ಯಾಟಿ ಅವರು ಬಣ್ಣಿಸಿದ್ದಾರೆ.