ಕಲಬುರಗಿ: ನೆಹರು ಸಿಗರೇಟು ಸೇದುತ್ತಿದ್ದರೆ ಅದು ಅಪರಾಧನಾ? ಬಿಜೆಪಿಯಲ್ಲಿ ಯಾರೂ ಸಿಗರೇಟ್ ಸೇದಲ್ಲವೇ ? ವಾಜಪೇಯಿ ಅವರು ಮದ್ಯಪಾನ ಮಾಡುತ್ತಿದ್ದರು ಎಂದು ಹೇಳಲಾಗುತ್ತಿತ್ತು.ಹಾಗಾದರೆ ಬಾರ್ ಗಳಿಗೆ ವಾಜಪೇಯಿ ಅವರ ಹೆಸರು ಇಡಬೇಕಾ? ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಕಲಬುರಗಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ‘ ನೆಹರು ಹುಕ್ಕಾ ‘ ಸೇದುತಿದ್ದರು. ಅವರ ಹೆಸರಿನ ಕೇಂದ್ರ ಬೇಕಾದರೆ ಕಾಂಗ್ರೆಸ್ ನವರು ತೆಗೆಯಲಿ ಎನ್ನುತ್ತಾರಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯಲ್ಲಿ ಯಾರೂ ಸಿಗರೇಟ್ ಸೇದಲ್ವಾ? ನೆಹರು ಸಿಗರೇಟ್ ಸೇದಿದರೆ ಮಾತ್ರ ಅದು ಅಪರಾಧನಾ? ಎಂದು ಮರು ಪ್ರಶ್ನೆ ಹಾಕಿದರು.
ವಾಜಪೇಯಿ ಆಗಲಿ, ನೆಹರು ಅವರ ಬಗ್ಗೆಯಾಗಲಿ ಮಾತನಾಡಬಾರದು. ಅವರು ಸ್ಟೆಟ್ ಮೆನ್ಸ್. ಬಿಜೆಪಿ ಸರ್ಕಾರ ಕಳೆದ ಏಳು ವರ್ಷದಲ್ಲಿ ಯಾವ ಸಾಧನೆ ಮಾಡಿಲ್ಲ. ಒಂದೇ ಒಂದು ಸಂಸ್ಥೆ ಕಟ್ಟಿಬೆಳೆಸಿಲ್ಲ. ನೆಹರು ಕಾಲದಿಂದಲೇ ಸ್ಥಾಪಿಸಲಾದ ಸಂಸ್ಥೆಗಳಿಗೆ ಅವರ ಹೆಸರಿವೆ ಎಂದು ಮಾರುತ್ತರ ನೀಡಿದರು.
ದೇಶದ ಸ್ವಾತಂತ್ಯಕ್ಕೆ ಬಿಜೆಪಿಯವರ ಕೊಡುಗೆ ಶೂನ್ಯ ಎಂದು ಟೀಕಿಸಿದ ಪ್ರಿಯಾಂಕ್ ಖರ್ಗೆ, ಯಾವುದೇ ಹೋರಾಟ ಮಾಡದ, ಬ್ರಿಟೀಷರು ಹೇಳಿದಂತೆ ಕೇಳಿಕೊಂಡಿದ್ದ ಸಾವರ್ಕರ್ ‘ ವೀರ್ ಸಾವರ್ಕರ್’ ಹೇಗೆ ಆದರು? ಅವರ ಹೆಸರು ಬೆಂಗಳೂರಿನ ಮೇಲ್ಸೇತುವೆಗೆ ಯಾಕೆ ಇಡಲಾಗಿದೆ ? ಈ ಎಲ್ಲ ವಿಚಾರಗಳನ್ನು ಮರೆಮಾಚಿದ ಬಿಜೆಪಿಗರು ಇಂದಿರಾ ಕ್ಯಾಂಟಿನ್ ಹೆಸರು ಬದಲಾಯಿಸುವಂತೆ ಹುಸಿ ಹೋರಾಟ ನಡೆಸುತ್ತಿದ್ದಾರೆ ಎಂದರು. ಹಾಗಾದರೆ ಸಾವರ್ಕರ್ ವೀರ್ ಸಾವರ್ಕರ್ ಅಲ್ಲವೇ ? ಎಂದು ಪತ್ರಕರ್ತರು ಪ್ರಶ್ನಿಸಿದಾಗ, ‘ ಖಂಡಿತವಾಗಿಯೂ ಅಲ್ಲ. ಅವರ ಕುರಿತಾದ ಬಹಳಷ್ಟು ಪುಸ್ತಕಗಳನ್ನು ಓದಿದ್ದೇನೆ’ ಎಂದರು.
ಹೇಳಿಕೊಳ್ಳುವಂತ ಯಾವುದೇ ಸಾಧನೆ ಈ ಸರ್ಕಾರಗಳು ಮಾಡಿಲ್ಲ. ಬಿಜೆಪಿ ನಾಯಕರಿಗೆ ಇತಿಹಾಸ ತಿಳಿದಿಲ್ಲ. ಇತಿಹಾಸ ಗೊತ್ತಿಲ್ಲದವರು ತಾವು ಸಚಿವರಾಗಲು ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.
ಕೋವಿಡ್ ಮೂರನೆಯ ಅಲೆ ಬಗ್ಗೆ ಪ್ರಸ್ತಾಪಿಸಿದ ಶಾಸಕರು ಅಲೆಯ ಇನ್ನೇನು ಬರಲಿದೆ ಅದು ಮಕ್ಕಳಿಗೆ ತೀವ್ರವಾಗಿ ಕಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ 1000 ಮಕ್ಕಳಿಗೆ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಸರ್ಕಾರ ಯಾವುದೇ ಸೋಂಕು ಎದುರಿಸಲು ಯಾವುದೇ ತಯಾರಿ ಮಾಡಿಕೊಳ್ಳದೆ ಸಂಪೂರ್ಣ ವಿಫಲವಾಗಿದ್ದು ಕೇವಲ ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಿದೆ. ಕಲಬುರಗಿ ಜಿಲ್ಲಾಡಳಿತವಂತೂ ಕುಂಬಕರ್ಣ ನಿದ್ದೆಯಲ್ಲಿದೆ ಎಂದರು.
ಲಸಿಕೆ ಕೊಡಿಸುವಲ್ಲಿ ಬಿಜೆಪಿ ನಾಯಕರು ಹಾಗೂ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದ ಅವರು ಕಲಬುರಗಿ ಜಿಲ್ಲೆಯಲ್ಲಿ ಕೇವಲ 9% ಮಾತ್ರ ಎರಡನೆಯ ಡೋಸ್ ನೀಡಲಾಗಿದೆ ಎಂದರು.
ಜಿಲ್ಲಾದ್ಯಕ್ಷರಾದ ಜಗದೇವ ಗುತ್ತೇದಾರ, ಶಾಸಕರಾದ ಖನೀಜ್ ಫಾತಿಮಾ, ಮಾಜಿ ಎಂ ಎಲ್ ಸಿಗಳಾದ ತಿಪ್ಪಣ್ಣಪ್ಪ ಕಮಕನೂರು, ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಮತ್ತಿತರಿದ್ದರು.