ಸುರಪುರ: ರಾಜ್ಯದಲ್ಲಿರುವ ಆರು ಕೋಟಿಗು ಅಧಿಕ ಜನರಲ್ಲಿ ಕೇವಲ ಪ್ರತಿಶತ 3 ರಷ್ಟು ಮಾತ್ರ ಸರಕಾರಿ ನೌಕರರಿದ್ದಾರೆ,ಆದರೆ ಪ್ರತಿಶತ 70 ರಷ್ಟು ರೈತರಿದ್ದಾರೆ.ಆದರೆ ಕೃಷಿಯನ್ನು ಸರಿಯಾದ ರೀತಿಯಲ್ಲಿ ಮಾಡದಿದ್ದಾಗ ನಷ್ಟವಾಗುತ್ತದೆ. ಪ್ರತಿಯೊಬ್ಬ ರೈತನು ಭೂಮಿ ತಾಯಿಗೆ ಗೌರವ ಕೊಟ್ಟರೆ ಆಶೀರ್ವಾದ ಮಾಡುತ್ತಾಳೆ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ನುಡಿದರು.
ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ತಾಲೂಕು ಪಂಚಾಯತಿ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ರೈತ ಬಂಧು ಅಭಿಯಾನ,ಪೌಷ್ಠಿಕ ಕೈತೋಟ ಅಭಿಯಾನ ಹಾಗು ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಕೃಷಿ ಅಭಿಯಾನ ನಿಜಕ್ಕೂ ಇದು ರೈತರಿಗೆ ತುಂಬಾ ಮಹತ್ವವಾದ ಯೋಜನೆಯಾಗಿದೆ.ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 25 ರೈತರಿಗೆ ಎರೆಹುಳು ಘಟಕ ನಿರ್ಮಾಣಕ್ಕೆ ತಲಾ 27 ಸಾವಿರ ರೂಪಾಯಿ ಸೌಲಭ್ಯ ಕಲ್ಪಿಸಲಾಗಿದೆ,ಇದನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು.ಇದರಿಂದ ಸಾವಯವ ಕೃಷಿಗೆ ಅನುಕೂಲವಾಗಲಿದೆ,ಅಲ್ಲದೆ ಸಾವಯವ ಕೃಷಿಯಿಂದ ಆರೋಗ್ಯ ಹೆಚ್ಚಲಿದೆ,ಲಾಭವು ಕೂಡ ಹೆಚ್ಚಲಿದೆ.ಹೆಚ್ಚಿನ ರೈತರಿಗೆ ಸಾವಯವ ಕೃಷಿಯ ಬಗ್ಗೆ ಮಾಹಿತಿಯಿಲ್ಲದೆ ಕೃಷಿಯಲ್ಲಿ ನಷ್ಟ ಹೊಂದುತ್ತಾರೆ.ಅದಕ್ಕಾಗಿ ಸರಕಾರ ಕೃಷಿ ಬಂಧು ಯೋಜನೆ ಜಾರಿಗೊಳಿಸಿದೆ ಎಂದರು.
ಇನ್ನು ಪೌಷ್ಠಿಕ ತೋಟ ಅಭಿಯಾನವು ತುಂಬಾ ಅದ್ಭುತವಾದ ಯೋಜನೆಯಾಗಿದೆ.ಇದರಿಂದ ಶಾಲೆ ಆಸ್ಪತ್ರೆ ಗ್ರಾಮ ಪಂಚಾಯತಿ ಹೀಗೆ ಸರಕಾರದ ಕಟ್ಟಡಗಳ ಆವರಣದಲ್ಲಿ ತರಕಾರಿ ಹಣ್ಣು ಸೊಪ್ಪು ಬೆಳೆಯುವ ಮೂಲಕ ಬಿಸಿಯೂಟದ ಸಮಯದಲ್ಲಿ ಬಳಸಿಕೊಳ್ಳುವುದರಿಂದ ಮಕ್ಕಳಲ್ಲಿನ ಅಪೌಷ್ಠಿಕತೆ ಹೋಗಲಾಡಿಸಲು ಸಾಧ್ಯವಿದೆ ಎಂದರು.
ಅಲ್ಲದೆ ಗ್ರಾಮದ ಜನರು ನೀಡಿರುವ ಮನವಿಯ ಕುರಿತು ಮಾತನಾಡಿ,ಗ್ರಾಮಕ್ಕೆ ಇನ್ನೂ 6 ಶಾಲಾ ಕೋಣೆಗಳನ್ನು ನೀಡಲಾಗುವುದು,ಜೊತೆಗೆ ಕುಡಿಯುವ ನೀರಿಗಾಗಿ ಜಲ ಜೀವನ ಮಿಷನ್ ಅಡಿಯಲ್ಲಿ 1.98 ಕೋಟಿ ರೂಪಾಯಿಗಳಲ್ಲಿ ಕಾಮಗಾರಿ ನಿರ್ಮಿಸಲಾಗುವುದು,13 ಲಕ್ಷ ರೂಪಾಯಿಗಳಲ್ಲಿ ಅಂಗನವಾಡಿ ಕಟ್ಡಡ ನಿರ್ಮಿಸಲಾಗುತ್ತಿದೆ,ಡಿಸಿಸಿ ಬ್ಯಾಂಕ್ ಶಾಖೆಗೆ ಕಟ್ಟಡ ನೀಡುವೆನು ಮತ್ತು ಇಲ್ಲಿಯ ರೈತರಿಗೆ ಸುಮಾರು 30 ಲಕ್ಷ ರೂಪಾಯಿಗಳ ಸಾಲ ವಿತರಿಸಲಾಗುವುದು ಜೊತೆಗೆ ಮುಂದೆ 1 ಕೋಟಿ ರೂಪಾಯಿಗಳ ಸಾಲ ನೀಡಲಾಗುವುದು ಎಂದರು.
ತಾಲೂಕು ಪಂಚಾಯತಿ ಇಒ ಅಂಬ್ರೇಶ ಮಾತನಾಡಿ,ಕೃಷಿ ಬಂಧು ಯೋಜನೆಯ ಲಾಭವನ್ನು ರೈತರು ಪಡೆದುಕೊಳ್ಳಬೇಕು,ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕೃಷಿ ಇಲಾಖೆ ಮತ್ತು ಸ್ಥಳಿಯ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ತಿಳಿಸಿದರು.
ನಂತರ ನರೇಗಾ ಯೋಜನೆಯಡಿ ನಿರ್ಮಿಸಲಾದ ರನ್ನಿಂಗ್ ಟ್ರ್ಯಾಕ್ ಮತ್ತು ಖೋ ಖೋ ಮೈದಾನ ಮತ್ತು ಎರೆಹುಳು ಘಟಕವನ್ನು ಉದ್ಘಾಟಿಸಲಾಯಿತು.ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮಣ್ಣ ದಿವಳಗುಡ್ಡ ಅಧ್ಯಕ್ಷತೆ ವಹಿಸಿದ್ದರು,ಹೊನ್ನಯ್ಯ ಮುತ್ಯಾ, ಎಪಿಎಂಸಿ ಅಧ್ಯಕ್ಷ ದುರ್ಗಪ್ಪ ಗೋಗಿಕೇರಿ,ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್,ಟಿಹೆಚ್‍ಒ ಡಾ: ಆರ್.ವಿ ನಾಯಕ,ಮುಖಂಡರಾದ ಯಲ್ಲಪ್ಪ ಕುರಕುಂದಿ,ದೊಡ್ಡದೇಸಾಯಿ,ಭೀಮಣ್ಣ ಬೇವಿನಾಳ,ಸಣ್ಣ ದೇಸಾಯಿ,ದೇವರಾಜ ಮಕಾಶಿ,ಪಿಡಿಒ ರವಿಚಂದ್ರರಡ್ಡಿ ಸೇರಿದಂತೆ ಅನೇಕ ಮುಖಂಡರು ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಇದೆ ಸಂದರ್ಭದಲ್ಲಿ ಹತ್ತನೆ ತರಗತಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.